“ತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ” ಎಂಬ ಹೊಸ ರಾಜಕೀಯ ಗಾದೆಗೆ ನರೇಂದ್ರ ಮೋದಿಯವರೇ ಜೀವಂತ ಉದಾಹರಣೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ರಾತ್ರಿ, ಪ್ರಧಾನಿ ಮೋದಿ ಅವರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ; ತಮ್ಮ ಮತ್ತು ತಮ್ಮ ತಾಯಿಯ ವಿರುದ್ಧ ಅವಹೇಳನ ಮಾಡಿದ ವಿದ್ಯಾರ್ಥಿ-ಯುವಜನರನ್ನು ಕ್ಷಮಿಸಿರುವುದಾಗಿ ಹೇಳಿಕೊಂಡಿದ್ದರು. ಮೋದಿ ಅವರ ಈ ಹೇಳಿಕೆಯನ್ನು ಹರಿಪ್ರಸಾದ್ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಹರಿಪ್ರಸಾದ್, “ದಶಕಗಳ ಕಾಲ ರಾಜಕೀಯ ವಿರೋಧಿಗಳ ವಿರುದ್ಧ ವೈಯಕ್ತಿಕ ನಿಂದನೆಗಳು, ಮಹಿಳೆಯರ ಅವಹೇಳನ ಹಾಗೂ ಕುಟುಂಬಗಳನ್ನು ಗುರಿಯಾಗಿಸಿಕೊಂಡ ರಾಜಕೀಯಕ್ಕೆ ಮೌನ ಸಮ್ಮತಿ ನೀಡಿದವರು, ಇಂದು ಮಾತೃಗೌರವದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ. ಇದು ಬೆಂಕಿ ಹಚ್ಚಿದವನೇ ಬಕೆಟ್ ಹಿಡಿದು ಅಗ್ನಿಶಾಮಕನಂತೆ ಪೋಸ್ ಕೊಡುವಂತಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಯಂತಹ ವೈಯಕ್ತಿಕ ದುರಂತಗಳನ್ನು ಅನುಭವಿಸಿದ್ದರೂ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಪ್ರತೀಕಾರದ ಬದಲು ಕ್ಷಮೆ ಮತ್ತು ಮಾನವೀಯತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದು ಕ್ಯಾಮೆರಾ ಮುಂದೆ ಪ್ರದರ್ಶಿಸಿದ ಭಾವನಾತ್ಮಕತೆ ಅಲ್ಲ, ಬದುಕಿನ ಅನುಭವದಿಂದ ಬಂದ ಸಂಸ್ಕಾರ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಸೋನಿಯಾ ಗಾಂಧಿ ಅವರನ್ನು ‘ಜರ್ಸಿ ಹಸು’ ಎಂದು ನಿಂದಿಸಿದ ಸಂದರ್ಭ, ಸಂಸದೆ ರೇಣುಕಾ ಚೌಧರಿಯವರನ್ನು ‘ಶೂರ್ಪನಖಿ’ಗೆ ಹೋಲಿಸಿದ ಘಟನೆ, ಸುನಂದಾ ಪುಷ್ಕರ್ ಕುರಿತು ಅವಹೇಳನಕಾರಿ ಹೇಳಿಕೆಗಳು ನಡೆದಾಗ ಮಹಿಳೆಯರ ಗೌರವದ ಬಗ್ಗೆ ಪ್ರಧಾನಿ ಮೌನವಾಗಿದ್ದೇಕೆ” ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
“2014ರ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷದ ಮಹಿಳಾ ನಾಯಕರ ವಿರುದ್ಧ ನಡೆದ ಅವಹೇಳನಕಾರಿ ಅಭಿಯಾನಗಳ ಬಗ್ಗೆ ಪ್ರಧಾನಿ ಎಂದಾದರೂ ಖಂಡನೆ ವ್ಯಕ್ತಪಡಿಸಿದ್ದಾರೆಯೇ. ಮಹಿಳೆಯರನ್ನು ನಿಂದಿಸಬೇಡಿ ಎಂದು ತಮ್ಮ ಬೆಂಬಲಿಗರಿಗೆ ಒಂದು ಬಾರಿಯಾದರೂ ಮನವಿ ಮಾಡಿದ್ದಾರೆಯೇ” ಎಂದು ಕೇಳಿದ್ದಾರೆ.
“ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ತಮ್ಮ ತಾಯಿಯ ಚಿತ್ರವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಿದ್ದ ಪ್ರಧಾನಿ, ಈಗ ವಿದ್ಯಾರ್ಥಿಗಳ ಪ್ರತಿಭಟನೆ, ಬಂಧನ, ಪ್ರಕರಣಗಳು ಹಾಗೂ ಶಿಕ್ಷಣ ವ್ಯವಸ್ಥೆಯ ವೈಫಲ್ಯದಿಂದ ಗಮನ ಬೇರೆಡೆ ಸೆಳೆಯಲು ಮತ್ತೆ ತಾಯಿಯ ಹೆಸರನ್ನೇ ಭಾವನಾತ್ಮಕ ರಾಜಕೀಯದ ಸಾಧನವನ್ನಾಗಿ ಬಳಸುತ್ತಿದ್ದಾರೆ. ತಾಯಿಯ ಮೇಲಿನ ಪ್ರೀತಿ ಪವಿತ್ರವಾದದ್ದು; ಆದರೆ ರಾಜಕೀಯ ಲಾಭಕ್ಕಾಗಿ ಆ ಭಾವನೆಯನ್ನು ಬಳಸುವುದು ಸರಿಯಲ್ಲ” ಎಂದು ಹರಿಪ್ರಸಾದ್ ಹೇಳಿದ್ದಾರೆ.
“ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ತಕ್ಷಣ ಹಿಂಪಡೆದು, ಪೊಲೀಸ್ ಕ್ರಮಗಳಿಗೆ ಹೊಣೆ ಹೊತ್ತು ದೇಶದ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು. ಕ್ಯಾಮೆರಾ ಮುಂದೆ ಕಣ್ಣೀರು ಸುರಿಸುವುದೇ ಕ್ಷಮೆಯಲ್ಲ; ಅಧಿಕಾರದ ಕ್ರೌರ್ಯವನ್ನು ನಿಲ್ಲಿಸುವುದೇ ನಿಜವಾದ ಕ್ಷಮೆ” ಎಂದು ಹೇಳಿದ್ದಾರೆ.
“ಪ್ರಧಾನಿಯವರ ವಿಡಿಯೋವನ್ನು ಬೆಂಬಲಿಗರು ಮೆಚ್ಚಬಹುದು. ಆದರೆ, ಮಹಿಳೆಯರ ಮೇಲಿನ ಅವಹೇಳನ ಮತ್ತು ರಾಜಕೀಯ ದ್ವಂದ್ವ ನೀತಿಯನ್ನು ಇತಿಹಾಸ ಕ್ಷಮಿಸುವುದಿಲ್ಲ” ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.



