- ‘ಮಂಡ್ಯದಲ್ಲಿ ಆನೆಗಳ ದಾಳಿ ಹೆಚ್ಚುತ್ತಿದ್ದು, ಜೀವಭಯ ಕಾಡುತ್ತಿದೆ’
- ಆನೆಗಳ ದಾಳಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ
ಮಂಡ್ಯ ಜಿಲ್ಲೆಯಲ್ಲಿ ಆನೆಗಳ ದಾಳಿ ಹೆಚ್ಚುತ್ತಿದ್ದು, ರೈತರ ಬೆಳೆಗಳಿಗೆ ಹಾನಿಯಾಗುತ್ತಿದೆ. ಅಲ್ಲದೆ, ಜೀವಭಯವೂ ಕಾಡುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ ಅವರು ಕೋರಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಪತ್ರ ಬರೆದು, “ತಕ್ಷಣ ಜನರ ಭಯ ನಿವಾರಣೆ ಮಾಡಬೇಕು. ರೈತರ ಬೆಳೆ ರಕ್ಷಣೆ ಮಾಡಬೇಕು. ಇದುವರೆಗೆ ಆದ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಈ ಕೆಲಸ ಅರಣ್ಯ ಇಲಾಖೆಯಿಂದ ಈ ಕೂಡಲೇ ಆಗಬೇಕು” ಎಂದು ಮನವಿ ಮಾಡಿದ್ದಾರೆ.
“ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ ತಾಲ್ಲೂಕುಗಳಲ್ಲಿ 9 ಆನೆಗಳು ಕಳೆದ 10-12 ದಿನಗಳಿಂದ ಕಾಡಿನಿಂದ ನಾಡಿಗೆ ಬರುತ್ತಿವೆ. ದಿನದಿಂದ ದಿನಕ್ಕೆ ಇವುಗಳ ಉಪಟಳ ಹೆಚ್ಚುತ್ತಿದೆ. ಮದ್ದೂರು-ಮಳವಳ್ಳಿ ಹೆದ್ದಾರಿಗೆ ಹೊಂದಿಕೊಂಡಿರುವ ನೆಲಮಾಕನಹಳ್ಳಿ ಗ್ರಾಮದಲ್ಲಿ ವಾರದ ಹಿಂದೆ ಆನೆಗಳ ಹಿಂಡು ದಾಳಿ ಮಾಡಿ ಸುಮಾರು 1 ಎಕರೆ ಕಬ್ಬಿನ ಬೆಳೆಯನ್ನು ನಾಶ ಮಾಡಿತ್ತು. ಹೀಗಾದರೆ ಆ ರೈತ ಹೇಗೆ ತಾನೆ ನೆಮ್ಮದಿಯ ಜೀವನ ಮಾಡಿಯಾನು? ಕಾಡುಪ್ರಾಣಿಗಳ ಉಪಟಳದಿಂದ ತಾವು ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗಿಬಿಡಬಹುದು ಎಂಬ ಆತಂಕದಲ್ಲಿ ಯಾವೊಬ್ಬ ರೈತನೂ ಸರಿಯಾಗಿ ನಿದ್ದೆ ಮಾಡದ ಪರಿಸ್ಥಿತಿ ಇದೆ” ಎಂದು ತಿಳಿಸಿದ್ದಾರೆ.
ಈ ಭಾಗದ ಜನ ಭಯಭೀತರಾಗಿದ್ದಾರೆ. ರೈತರು ಬೆಳೆದ ಭತ್ತ, ಕಬ್ಬು ಬೆಳೆಗಳು ನಿರಂತರವಾಗಿ ನಾಶವಾಗುತ್ತಿವೆ. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು ಆತಂಕಪಡುತ್ತಿದ್ದಾರೆ. ಎಲ್ಲಿ ಆನೆಗಳು ಬಂದುಬಿಡುತ್ತವೋ ಎಂಬ ಭಯದಲ್ಲಿಯೇ ಸ್ಥಳೀಯರು ಹೆಜ್ಜೆ ಇಡುವಂತೆ ಆಗಿದೆ” ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬ್ರೇಕಿಂಗ್ ನ್ಯೂಸ್ | ಬೆಂಗಳೂರಿನಲ್ಲಿ ಏಕಕಾಲಕ್ಕೆ 45 ಕಡೆ ಲೋಕಾಯುಕ್ತ ದಾಳಿ
ಶಾಶ್ವತ ಪರಿಹಾರ ಬೇಕಿದೆ
ಮಂಡ್ಯ ಜಿಲ್ಲೆಯಲ್ಲಿ ಆನೆಗಳ ಹಾವಳಿ ಇದೇ ಮೊದಲಲ್ಲ. ಇತ್ತೀಚೆಗೆ ಪ್ರತಿ ವರ್ಷ ಕಾಡಾನೆಗಳ ಹಿಂಡು ಹೊಲಗಳಿಗೆ ಲಗ್ಗೆ ಇಡುತ್ತಿದೆ. ನೂರಾರು ಎಕರೆ ಬೆಳೆ ನಾಶ ಮಾಡುತ್ತಿದೆ. ಮಾತ್ರವಲ್ಲ ಜನರ ಮೇಲೆ ದಾಳಿ ಮಾಡಿದ್ದು, ಜನವಸತಿ ಪ್ರದೇಶಗಳಿಗೆ ನುಗ್ಗಿದ ಘಟನೆಗಳು ನಡೆದಿದ್ದವು. ಹಾಗಾಗಿ ಆನೆ-ಮಾನವನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಅದಕ್ಕೆ ಹಲವಾರು ಮಾರ್ಗಗಳೂ ಇವೆ. ಒಟ್ಟಿನಲ್ಲಿ ಈ ಸಮಸ್ಯೆಗೆ ಮುಕ್ತಿ ಹಾಡುವ ಮೂಲಕ ರೈತರ ನೆರವಿಗೆ ಧಾವಿಸಬೇಕಿದೆ” ಎಂದು ವಿನಂತಿಸಿಕೊಂಡಿದ್ದಾರೆ.
ದಿನೇಶ್ ಸಲಹೆ
1) ಆನೆಗಳು ನಾಡಿಗೆ ಏಕೆ ಬರುತ್ತಿವೆ ಎಂಬ ಬಗ್ಗೆ ತಜ್ಞರಿಂದ ವಿಸ್ತೃತ ಅಧ್ಯಯನ ನಡೆಸಬೇಕು.
2) ಅವುಗಳ ವರ್ತನೆ ಹಾಗೂ ಚಲನವಲನಗಳ ಮೇಲೆ ನಿಗಾ ಇಡುವ ಕಾರ್ಯವು ಅರಣ್ಯ ಇಲಾಖೆಯಿಂದ ಆಗಬೇಕು.
3) ಆನೆ ಕಾರ್ಯ ಪಡೆ ಅಥವಾ ಟಾಸ್ಕ್ ಫೋರ್‍ಸ್ ಅನ್ನು ಮಂಡ್ಯ ಜಿಲ್ಲೆಗೂ ವಿಸ್ತರಿಸಿ, ಕಂಗಾಲಾಗಿರುವ ಇಲ್ಲಿನ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು.
4) ಆನೆಗಳು ನಾಡಿಗೆ ಬರುವುದನ್ನು ತಡೆಯಲು ಕಾಡಿನ ಅಂಚಿನಲ್ಲಿ ಕಂದಕ ತೋಡುವುದು, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕು.