ಹೋಂವರ್ಕ್ ಮಾಡಿಲ್ಲವೆಂಬ ಕಾರಣಕ್ಕೆ ಎರಡನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಿಕ್ಷಕರು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ರಾಣಿ ಚೆನ್ನಮ್ಮ ಖಾಸಗಿ ಶಾಲೆಯಲ್ಲಿ ಕೇಳಿಬಂದಿದೆ.
ಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿರುವ ಶ್ರೇಯಸ್ ಆಸಂಗಿ (08) ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದು, ಶಾಲೆಯ ಸಹ ಶಿಕ್ಷಕಿ ವಿಜಯಲಕ್ಷ್ಮಿ ತಳವಾರ ಹಾಗೂ ಪ್ರಿನ್ಸಿಪಾಲ್ ಹಂಬಿ ಅವರು ಸೇರಿಕೊಂಡು ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಶಿಕ್ಷಕರ ಹೊಡೆತದಿಂದ ಮಗುವಿನ ಮೈಮೇಲೆ ಬಾಸುಂಡೆಗಳು ಹಾಗೂ ಗಾಯದ ಗುರುತುಗಳು ಮೂಡಿದ್ದು, ಮಗುವಿನ ಮೈಮೇಲಿನ ಗಾಯಗಳನ್ನು ಕಂಡ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ವಯಸ್ಸಿನ ವಿದ್ಯಾರ್ಥಿಯ ಮೇಲೆ ಈ ರೀತಿಯ ವರ್ತನೆ ತೋರಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಳಿಕ ಬಾಲಕನನ್ನು ಜಮಖಂಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಬಾಲಕನ ಪೋಷಕರು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಸಹ ಶಿಕ್ಷಕಿ ವಿಜಯಲಕ್ಷ್ಮಿ ತಳವಾರ ಹಾಗೂ ಪ್ರಿನ್ಸಿಪಾಲ್ ಹಂಬಿ ಅವರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸುರಕ್ಷತೆ ಮತ್ತು ಪ್ರೀತಿಯ ವಾತಾವರಣ ಕಲ್ಪಿಸಬೇಕಾದ ಶಾಲೆಯಲ್ಲಿಯೇ ಇಂತಹ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ, ಆರೋಪ ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಪೋಷಕರ ಒತ್ತಾಯವಾಗಿದೆ.



