ಪ್ರವಾಹ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಗತ್ಯವಿರುವ ಪರಿಹಾರ ಕೇಂದ್ರಗಳು, ಕುಡಿಯುವ ನೀರು, ಆಹಾರ ಸಾಮಗ್ರಿಗಳು ಹಾಗೂ ಆರೋಗ್ಯ ಸೇವೆಗಳ ವ್ಯವಸ್ಥೆಯನ್ನು ಸಕಾಲದಲ್ಲಿ ಸಿದ್ಧಪಡಿಸಿಕೊಳ್ಳುವಂತೆ, ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಾಗಲಕೋಟೆ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಹಿಂದಿನ ವರ್ಷಗಳಲ್ಲಿ ಎದುರಾದ ಪ್ರವಾಹ ಅನುಭವ ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಕೃಷ್ಣ ನದಿಯಲ್ಲಿ ಪ್ರವಾಹ ಸಂಭವಿಸಿದರೆ, ಬಾಗಲಕೋಟೆ ಕ್ಷೇತ್ರದ ವ್ಯಾಪ್ತಿಯ ಒಂಬತ್ತು ಗ್ರಾಮ ಪ್ರವಾಹಕ್ಕೆ ತುತ್ತಾಗುತ್ತವೆ” ಎಂದು ತಿಳಿಸಿದರು.
“ಮುಂಗಾರು ಮಳೆ ಪ್ರಾರಂಭವಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಅದನ್ನು ಸಮರ್ಪಕವಾಗಿ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು, ತಾಲೂಕು ಆಡಳಿತ, ಪೋಲಿಸ್, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು” ಎಂದು ಶಾಸಕ ಉಮೇಶ ಅಧಿಕಾರಿಗಳಿಗೆ ಸೂಚಿಸಿದರು.
“ಜೂನ್ 1ರಿಂದ 9ರವರೆಗೆ 3 ಸೆ ಮೀ ಮಳೆಯಾಗ ಬೇಕಿತ್ತು. ಆದರೆ, 5ಸೆ ಮೀ ನಷ್ಟು ಮಳೆಯಾಗಿದೆ. ಮಳೆಯಿಂದಾಗಿ ಐದು ಮನೆಗಳ ಭಾಗಶ ಹಾನಿಯಾಗಿದೆ. ಒಂದು ಆಕಳು ಮೃತಪಟ್ಟಿದೆ. ಹಾನಿ ವರದಿ ಆದರಿಸಿ ಪರಿಹಾರ ವಿತರಣೆ ಕ್ರಮ ವಹಿಸಲಾಗುತ್ತದೆ” ಎಂದು ತಹಶೀಲ್ದಾರ್ ವಾಸುದೇವ ಸ್ವಾಮಿ ತಿಳಿಸಿದರು.
” ಪ್ರವಾಹ ಸಂದರ್ಭದಲ್ಲಿ ಮೇವು ಲಭ್ಯತೆಗೆ ಸೌಕರ್ಯಗಳು ಮತ್ತು ಸರಕ್ಷತಾ ಕಾರ್ಯಾಚಾರಣೆಗಳಿಗಾಗಿ ಅಗ್ನಿಶಾಮಕ ದಳ ಸಜ್ಜು ಮಾಡಲಾಗಿದೆ. ದಿನದ 24 ಗಂಟೆಗಳ ಕಾಲ ಸಹಾಯವಾಣಿ ಕೇಂದ್ರ (08354-236240) ಸಹ ಸ್ಥಾಪಿಸಲಾಗಿದೆ” ಎಂದು ತಿಳಿಸಿದರು.
ʼರಾಂಪುರ, ನೀರಲಕೇರಿ, ಬೆನ್ನೂರ, ಗುಳಬಾಳ, ಶಿರಗುಪ್ಪಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಸಮಸ್ಯೆ ಬಗೆಹರಿಸುವ ಕೆಲಸವನ್ನು ಅಧಿಕಾರಿಗಳು ತೊರ್ತಾಗಿ ಮಾಡಬೇಕು. ಅಗತ್ಯವಿದ್ದಲ್ಲಿ ಹೊಸ ಕೊಳವೆ ಬಾವಿ ಕೊರೆಸಬೇಕು. ಪೈಪ್ ಲೈನ್ ದುರಸ್ತಿ ಇದ್ದಲ್ಲಿ ತಕ್ಷಣ ಕ್ರಮ ವಹಿಸಬೇಕು” ಎಂದು ಶಾಸಕ ಮೀಟಿ ಸೂಚಿಸಿದರು.
ಕೃಷಿ, ತೋಟಗಾರಿಕೆ, ಅರೋಗ್ಯ, ಶಿಕ್ಷಣ, ಲೋಕಪಯೋಗಿ ಇಲಾಖೆ, ಅರಣ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಶಿಶು ಅಭಿವೃದ್ಧಿ ಯೋಜನೆ, ಸಹಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು.
“ಸಭೆಗೆ ಗೈರು ಹಾಜರಾದ ಎಸ್ಕಾಂ ಅಧಿಕಾರಿಗೆ ನೋಟಿಸ್ ನೀಡಿ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅಭಿವೃದ್ಧಿ ಕೆಲಸಗಳಿಗೆ ಯಾವಾಗಲೂ ಸಹಕಾರ ಇರುತ್ತದೆ. ಕೆಲಸದಲ್ಲಿ ಆಸಕ್ತಿ ಇಲ್ಲದವರು ವರ್ಗಾವಣೆ ಮಾಡಿಕೊಂಡು ಬೇರೆಡೆ ಹೋಗಿ” ಎಂದು ಎಚ್ಚರಿಸಿದರು.
ತಾಲ್ಲೂಕು ಪಂಚಾಯತಿ ಟಿಎಸ್ ರುದ್ರೇಶಪ್ಪ, ಹುನಗುಂದ ತಹಶೀಲ್ದಾರ್ ಪ್ರದೀಪ್ ಹಿರೇಮಠ್, ಬಾಗಲಕೋಟೆ ಇಒ ಸುಭಾಶ ಸಂಪಗಾವಿ, ಹುನಗುಂದ ತಾ ಪಂ ಇಒ ಮುರಳಿಧರ ದೇಶಪಾಂಡೆ, ಲೆಕ್ಕಾಧಿಕಾರಿ ರಾಜೇಶ ಚವದರಿ ಇದ್ದರು.




