ಅಕ್ರಮ ಸಾಗಾಣೆ ಮತ್ತು ನಕಲಿ ಬಿಲ್ಲುಗಳ ಮೂಲಕ ನಡೆಯುವ ವಹಿವಾಟಿನ ಮೇಲೆ ನಿಗಾ ವಹಿಸಬೇಕು. ಅಕ್ರಮ ದಾಸ್ತಾನು, ಸಾಗಾಣಿಕೆ ಕಾಳಸಂತೆಕೋರರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಕಾಳಸಂತೆ ಮಾರಾಟ ತಡೆಗಟ್ಟುವಲ್ಲಿ ಆಹಾರ ಇಲಾಖೆ, ಪೋಲಿಸ್ ಇಲಾಖೆ, ತೂಕ ಮತ್ತು ಅಳತೆ ಇಲಾಖೆ ಹಾಗೂ ಇತರೆ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿ ವಿತರಣೆಗಾಗಿ ಬಂದ ಆಹಾರ ಧಾನ್ಯವನ್ನು ಅನಧಿಕೃತವಾಗಿ ದಾಸ್ತಾನು ಮಾಡುವುದು, ಹೆಚ್ಚುವರಿ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳು ತಮಗೆ ಹಂಚಿಕೆಯಾದ ಉಚಿತ ಆಹಾರ ಧಾನ್ಯವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡದಂತೆ ತಿಳುವಳಿಕೆ ನೀಡಬೇಕು. 2025- 26 ನೇ ಸಾಲಿನಲ್ಲಿ 37 ಪ್ರಕರಣ ದಾಖಲಿಸಲಾಗಿದ್ದು, 64 ಜನರನ್ನು ಬಂಧಿಸಲಾಗಿದೆ. 24 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಜೂನ್‌ವರೆಗೆ 16 ಪ್ರಕರಣ ದಾಖಲಿಸಲಾಗಿದ್ದು, 20 ಜನರನ್ನು ಬಂಧಿಸಲಾಗಿದೆ. 15 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕನವಾಡಿ ತಿಳಿಸಿದರು. ತಾಲೂಕು ಮಟ್ಟದಲ್ಲಿ ಆಯಾ ವಿಭಾಗದ ಉಪ ವಿಭಾಗ ಅಧಿಕಾರಿಗಳು ತಮ್ಮ ಹಂತದಲ್ಲಿ ಸಭೆ ಜರುಗಿಸಿ ಸೂಕ್ತ ಕ್ರಮ ವಹಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್, ಉಪ ವಿಭಾಗ ಅಧಿಕಾರಿ ಸಂತೋಷ ಜಗಲಾಸರ, ಜಂಟಿ ಕೃಷಿ ನಿರ್ದೇಶಕ ಟಿ ಎಸ್ ರುದ್ರೇಶಪ್ಪ ಇದ್ದರು.




