ಆರೋಗ್ಯ ಸಚಿವರ ತಾಲ್ಲೂಕಿನಲ್ಲೇ ತಾಲ್ಲೂಕು ಮಟ್ಟದ ಆಸ್ಪತ್ರೆ ಇಲ್ಲದಿರುವುದು ಜಿಲ್ಲೆಯ ಆರೋಗ್ಯ ಕ್ಷೇತ್ರದ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಆರೋಪ ಮಾಡಿದ್ದಾರೆ.
ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು, ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಆಸ್ಪತ್ರೆಗಳ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು, ಉಳ್ಳಾಲ ತಾಲ್ಲೂಕಿಗೆ ನೂರು ಹಾಸಿಗೆಗಳ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಸಿಪಿಐಎಂ ಉಳ್ಳಾಲ ತಾಲ್ಲೂಕು ಸಮಿತಿ ವತಿಯಿಂದ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಸಂಜೆ 4.00 ರಿಂದ ರಾತ್ರಿ 10.00 ಗಂಟೆಯವರಗೆ ಧರಣಿ ನಡೆಸಲಾಯಿತು.
ಧರಣಿಯಲ್ಲಿ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮನೀರ್ ಕಾಟಿಪಳ್ಳ ಅವರು ಮಾತನಾಡಿ “ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರವು ಖಾಸಗಿ ಮೆಡಿಕಲ್ ಕಾಲೇಜುಗಳು ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳ ಹಿಡಿತದಲ್ಲಿ ಸಿಲುಕಿ ನಲುಗಿ ಹೋಗಿದೆ. ಜಿಲ್ಲೆಯ ರಾಜಕಾರಣ, ಪ್ರಮುಖ ರಾಜಕೀಯ ಪಕ್ಷಗಳು ಖಾಸಗಿ ಮೆಡಿಕಲ್ ಲಾಬಿಗಳ ಮುಂದೆ ಮಂಡಿಯೂರಿವೆ” ಎಂದು ಆರೋಪಿಸಿದರು.
“ಜಿಲ್ಲೆಯ ಸರಕಾರಿ ಆರೋಗ್ಯ ಕ್ಷೇತ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಉದ್ದೇಶ ಪೂರ್ವಕವಾಗಿ ದುರ್ಬಲಗೊಳಿಸಲಾಗುತ್ತಿದೆ, ಪಿಪಿಪಿ ಮಾದರಿಯಲ್ಲಿ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಜನರ ಪರವಾಗಿರಬೇಕಾದ ಆರೋಗ್ಯ ಸಚಿವ ಯು ಟಿ ಖಾದರ್ ಅವರು ಈ ಎಲ್ಲಾ ಹುನ್ನಾರಗಳ ಹಿಂದೆ ಇರುವುದು, ಖಾಸಗಿ ಮೆಡಿಕಲ್ ಲಾಭಿಗಳ ಪರವಾಗಿ ಬ್ಯಾಟು ಬೀಸುತ್ತಿರುವುದು ವಿಷಾದನೀಯ” ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.
ಸಾಮೂಹಿಕ ಧರಣಿಯನ್ನುದ್ದೇಶಿಸಿ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್, ಸುಕುಮಾರ್ ತೊಕ್ಕೋಟು, ಜಿಲ್ಲಾ ಸಮಿತಿ ಸದಸ್ಯರಾದ ಯು ಜಯಂತ ನಾಯಕ್, ಬಿ ಕೆ ಇಮ್ತಿಯಾಜ್, ಯೋಗೀಶ್ ಜಪ್ಪಿನಮೊಗರು, ರಫೀಕ್ ಹರೇಕಳ,ಜಿಲ್ಲೆಯ ಹಿರಿಯ ಕಮ್ಯುನಿಸ್ಟ್ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಉಳ್ಳಾಲ ವಲಯ ಸಮಿತಿ ಸದಸ್ಯರಾದ ಚಂದ್ರಹಾಸ ಪಿಲಾರ್, ಪ್ರಗತಿಪರ ಚಿಂತಕರಾದ ರಮೇಶ್ ಉಳ್ಳಾಲ ಮುಂತಾದವರು ಮಾತನಾಡಿದರು.
ಧರಣಿಯಲ್ಲಿ ಮುನ್ನೂರು ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ದೆಪ್ಪಲಿಮಾರ್, ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಂತಾಯ, ರಾಜೇಶ್ವರಿ,ಶಶಿಕಲಾ,ಆಶ್ರಫ್ ಹರೇಕಳ,DYFI ಜಿಲ್ಲಾ ನಾಯಕರಾದ ರಿಝ್ವಾನ್ ಹರೇಕಳ, ಸುನಿಲ್ ತೇವುಲ, ನಿತಿನ್ ಕುತ್ತಾರ್, ರಿಯಾಝ್ ಮಂಗಳೂರು, ಮುಂತಾದವರು ಭಾಗವಹಿಸಿದ್ದರು.




