ನಾವು ಒಂದು ವಸ್ತುವನ್ನು ಯುಪಿಐ ಮೂಲಕ ಖರೀದಿಸಿದರೆ, ಅದಕ್ಕೆ ತೆರಿಗೆ ತೆರಬೇಕು. ಸಾಲದು ಎಂದು ಈಗ ಶುಲ್ಕವನ್ನೂ ಭರಿಸಬೇಕು. ಇದು ಪ್ರಧಾನಿ ಮೋದಿಯವರ ಡಿಜಿಟಲ್ ದರೋಡೆಯಲ್ಲವೇ? ಇದನ್ನು ಪ್ರಶ್ನಿಸುವವರು ದೇಶದ್ರೋಹಿಗಳೇ?
ವಿಶ್ವದಲ್ಲೇ ಅತಿ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(ಯುಪಿಐ)ನ ಸೈಬರ್ ಭದ್ರತೆ, ತಂತ್ರಜ್ಞಾನ ನವೀಕರಣ ಮತ್ತು ಮೂಲಸೌಕರ್ಯ ನಿರ್ವಹಣೆಗಾಗಿ ವಾರ್ಷಿಕ ಸುಮಾರು 20,700 ಕೋಟಿ ರೂ. ವೆಚ್ಚವಾಗುತ್ತಿದೆ. ಇದನ್ನು ಭರಿಸಲು ವ್ಯಾಪಾರಿ ರಿಯಾಯಿತಿ ದರ(ಮರ್ಚೆಂಟ್ಸ್ ಡಿಸ್ಕೌಂಟ್ ರೇಟ್-ಎಂಡಿಆರ್) ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಇದು ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಂದರೆ, ಅಕ್ಟೋಬರ್ 15ರಿಂದ ಡಿಜಿಟಲ್ ಪಾವತಿ ಉಚಿತವಲ್ಲ. 2 ಸಾವಿರ ರೂ.ಗಿಂತ ಹೆಚ್ಚಿನ ವ್ಯಾಪಾರ-ವಹಿವಾಟುಗಳ ಮೇಲೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು ಗ್ರಾಹಕರಲ್ಲ, ವರ್ತಕರು ಭರಿಸಬೇಕಾಗುತ್ತದೆ. ಗ್ರಾಹಕರಿಗೆ ಈ ಶುಲ್ಕವನ್ನು ವಿಧಿಸದಂತೆ ರಾಷ್ಟ್ರೀಯ ಪಾವತಿ ನಿಗಮ(ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ- ಎನ್‌ಪಿಸಿಐ) ಬ್ಯಾಂಕುಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ಆದರೆ ಅವರು ಪಾಲಿಸುತ್ತಾರೆಯೇ?
ಕಾಲಕ್ಕೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು, ಡಿಜಿಟಲ್ ವ್ಯವಸ್ಥೆ ವಿಸ್ತರಣೆಯಾಗಬೇಕು, ಅದರ ನಿರ್ವಹಣೆಗೆ ವೆಚ್ಚವಾಗುತ್ತದೆ, ಗ್ರಾಹಕರ ಮೇಲೆ ಶುಲ್ಕವಿಲ್ಲ, ವರ್ತಕರು ಭರಿಸುತ್ತಾರೆ ಎನ್ನುವ ಕೇಂದ್ರ ಸರ್ಕಾರದ ಸಮರ್ಥನೆ, ಸದ್ಯಕ್ಕೆ ಸರಿ ಎನಿಸಬಹುದು. ಆದರೆ ಆ ಡಿಜಿಟಲ್ ಅಂಕಿ-ಸಂಖ್ಯೆಗಳ ಆಳಕ್ಕೆ ಇಳಿದು ನೋಡಿದರೆ, ಮೋದಿಯವರ ಸರ್ಕಾರದ ಮರೆಮೋಸಗಳು ಕಾಣುತ್ತವೆ.
ಈಗ ಹೊಸದಾಗಿ ಹೇರಲ್ಪಡುವ ಎಂಡಿಆರ್ ಶುಲ್ಕ ಯಾರ ಖಾತೆಗೆ ಜಮೆಯಾಗಲಿದೆ ಎಂಬುದಕ್ಕೆ ಉತ್ತರವಾಗಿ ರಾಷ್ಟ್ರೀಯ ಪಾವತಿ ನಿಗಮವು, ಶೇ. 40ರಷ್ಟು ಗ್ರಾಹಕರ ಬ್ಯಾಂಕಿಗೆ, ಶೇ. 30ರಷ್ಟು ವ್ಯಾಪಾರಿ ಬ್ಯಾಂಕಿಗೆ, ಶೇ. 20ರಷ್ಟು ಫೋನ್ ಪೇ, ಗೂಗಲ್ ಪೇಗಳಂತಹ ಅಪ್ಲಿಕೇಷನ್‌ಗಳಿಗೆ, ಶೇ. 10ರಷ್ಟು ಪ್ರಾಯೋಜಕ ಬ್ಯಾಂಕ್‌ಗಳಿಗೆ ಎಂದಿದೆ. ಉದಾಹರಣೆಗೆ ನೀವು 10 ಸಾವಿರ ವ್ಯಾಪಾರ ಮಾಡಿದರೆ, 40 ರೂ. ಶುಲ್ಕ ಭರಿಸಬೇಕು. ಇದರಲ್ಲಿ ನಾವು ವ್ಯವಹರಿಸುವ ಬ್ಯಾಂಕಿಗೆ 16, ವರ್ತಕರ ಬ್ಯಾಂಕಿಗೆ 12, ಅಪ್ಲಿಕೇಷನ್‌ಗಳಿಗೆ 8 ಮತ್ತು ಪ್ರಾಯೋಜಕ ಬ್ಯಾಂಕ್‌ಗಳಿಗೆ 4 ರೂ. ಸಂದಾಯವಾಗುತ್ತದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!
ಸದ್ಯಕ್ಕೆ ದೇಶದಲ್ಲಿರುವ ಯುಪಿಐ ಬಳಕೆದಾರರ ಸಂಖ್ಯೆ 55.5 ಕೋಟಿ. 2025-26ರಲ್ಲಿ ಯುಪಿಐ ಮೂಲಕ ನಡೆದ ಒಟ್ಟು ವಹಿವಾಟು 198 ಲಕ್ಷ ಕೋಟಿ. ಇದರಲ್ಲಿ 2 ಸಾವಿರಕ್ಕಿಂತ ಮೇಲ್ಪಟ್ಟ ಯುಪಿಐ ಪಾವತಿ ಪಾಲು 131 ಲಕ್ಷ ಕೋಟಿ. 2 ಸಾವಿರಕ್ಕಿಂತ ಕಡಿಮೆ ಮೊತ್ತದ ಪಾವತಿ ಪಾಲು 67 ಲಕ್ಷ ಕೋಟಿ. 2 ಸಾವಿರಕ್ಕಿಂತ ಮೇಲ್ಪಟ್ಟ ಯುಪಿಐ ಪಾವತಿ ಪಾಲಿನ 131 ಲಕ್ಷ ಕೋಟಿಗೆ ಈಗಿನ ಶೇ. 0.04ರಷ್ಟು ಶುಲ್ಕ ಲೆಕ್ಕ ಹಾಕಿದರೆ, 84 ಸಾವಿರ ಕೋಟಿ ಆಗುತ್ತದೆ. ಇದರಲ್ಲಿ ಬ್ಯಾಂಕ್‌ಗಳಿಗೆ ಹೋಗುವ ಶುಲ್ಕ ಶೇ. 80, ಅಪ್ಲಿಕೇಷನ್‌ಗಳಿಗೆ ಹೋಗುವ ಶುಲ್ಕ ಶೇ. 20ರಷ್ಟು.
ಭಾರತದಲ್ಲಿ ಶೇ. 80ರಷ್ಟು ಯುಪಿಐ ಹಿಡಿತ ಹೊಂದಿರುವ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳೆಂದರೆ, ಅಮೆರಿಕದ ವಾಲ್‌ಮಾರ್ಟ್ ಕಂಪನಿಯ ಫೋನ್ ಪೇ ಮತ್ತು ಗೂಗಲ್ ಕಂಪನಿಯ ಗೂಗಲ್ ಪೇ. ಈ ಕಂಪನಿಗಳಿಗೆ ಶೇ. 20ರಷ್ಟು ಶುಲ್ಕವೆಂದರೆ ಸುಮಾರು 4,200 ಕೋಟಿ ಅನಾಯಾಸವಾಗಿ ಹರಿದುಹೋಗುತ್ತದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ‘ಅಮೆರಿಕ ಕಂಪನಿಗಳನ್ನು ಓಲೈಸಲು ಮತ್ತು ಅಧ್ಯಕ್ಷ ಟ್ರಂಪ್ ಅವರನ್ನು ಸಮಾಧಾನಪಡಿಸಲು ಭಾರತದ ಡಿಜಿಟಲ್ ಪಾವತಿಗಳ ಮೇಲೆ ಶುಲ್ಕ ವಿಧಿಸಲಾಗುತ್ತಿದೆ’ ಎಂದಿರುವುದು- ಟ್ರಂಪ್ ಮುಂದೆ ಮೋದಿ ಮಂಡಿಯೂರಿದ್ದಾರೆ ಎನ್ನುವುದನ್ನು ಸಾಬೀತುಪಡಿಸುತ್ತಿದೆ.
ಆದರೆ, 2020ರಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರುವಾಗ ಪ್ರಧಾನಿ ಮೋದಿಯವರು, ನಗದು ಅವಲಂಬನೆ ಕಡಿಮೆ ಮಾಡುವುದು, ಸುಲಭ–ಸುರಕ್ಷಿತ ಪಾವತಿ, ಪಾರದರ್ಶಕತೆ ಮತ್ತು ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ಸೇವೆ ತಲುಪಿಸುವುದು ಎಂದಿದ್ದರು. ಸಾಲದು ಎಂದು ಬಡವರು ಮತ್ತು ಅಂಚಿನಲ್ಲಿರುವವರಿಗೆ ಹಣಕಾಸು ಸೇವೆಗಳು ಹಾಗೂ ನೇರ ಹಣ ವರ್ಗಾವಣೆ ಸಾಧ್ಯವಾಗಲಿದೆ ಎಂದು ಬಡವರನ್ನು ಬರಸೆಳೆದು ಪ್ರಚಾರ ಪಡೆದಿದ್ದರು.
ದೇಶದ ಜನ ಡಿಜಿಟಟ್ ಪಾವತಿಗೆ ಒಗ್ಗಿಕೊಳ್ಳುವುದು ತ್ರಾಸವಾಯಿತು. ಅದರಲ್ಲೂ ಅನಕ್ಷರಸ್ಥರಿಗೆ, ಗ್ರಾಮೀಣರಿಗೆ, ಮೊಬೈಲ್ ಇಲ್ಲದವರಿಗೆ, ಬಡವರಿಗೆ ಕಷ್ಟವಾಯಿತು. ಆದರೂ ದೇಶಕ್ಕಾಗಿ ಎಂದು ಸಹಿಸಿಕೊಂಡರು.
ದೇಶದ ಜನರ ಸಹನೆಯನ್ನು ದುರುಪಯೋಗಪಡಿಸಿಕೊಂಡ ಮೋದಿಯವರು, ಭಾರತ ನಗದುರಹಿತ ದೇಶವಾಗಲಿದೆ; ಹಣ ಎಣಿಸುವ, ಚಿಲ್ಲರೆ ಕೊಡುವ, ಬ್ಯಾಂಕಿಗೆ ನಗದು ಕೊಂಡೊಯ್ಯುವ ಕಷ್ಟ ತಪ್ಪಲಿದೆ; ಬ್ಯಾಂಕ್ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆಯಾಗಲಿದೆ; ನೋಟು ಮುದ್ರಣವೆಚ್ಚ ಉಳಿಯಲಿದೆ ಎಂದರು. ಈ ಆರು ವರ್ಷಗಳಲ್ಲಿ, ನೋಟು ಚಲಾವಣೆಯೂ ನಿಲ್ಲಲಿಲ್ಲ ಮತ್ತು ನೋಟು ಮುದ್ರಣವೆಚ್ಚವೂ ಕಡಿಮೆಯಾಗಲಿಲ್ಲ. ಆರ್‍ಬಿಐನ ಅಧಿಕೃತ ಅಂಕಿಅಂಶಗಳ ಪ್ರಕಾರವೇ 2020–21ರಲ್ಲಿ 4,012, 2021–22ರಲ್ಲಿ 4,985, 2022–23ರಲ್ಲಿ 4,683, 2023–24ರಲ್ಲಿ 5,101, 2024–25ರಲ್ಲಿ 6,373 ಕೋಟಿ ರೂ.ಗಳನ್ನು ನೋಟುಗಳ ಮುದ್ರಣಕ್ಕಾಗಿ ಖರ್ಚು ಮಾಡಲಾಗಿದೆಯಂತೆ.
ಅಂದಮೇಲೆ ತಂತ್ರಜ್ಞಾನ ಯಾರ ಬದುಕನ್ನು ಹಸನುಗೊಳಿಸುತ್ತಿದೆ, ಯಾರ ಬದುಕಿಗೆ ಕೊಳ್ಳಿ ಇಡುತ್ತಿದೆ?
ಇರಲಿ, ಈಗ ಮೋದಿಯವರು, ಡಿಜಿಟಲ್ ಪಾವತಿ ವ್ಯವಸ್ಥೆಗೆ ವಾರ್ಷಿಕವಾಗಿ 20,700 ಕೋಟಿ ಖರ್ಚಾಗುತ್ತದೆ, ಅದನ್ನು ಎಂಡಿಆರ್ ಶುಲ್ಕದಿಂದ ಭರಿಸಲಾಗುವುದು ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈ 20 ಸಾವಿರ ಕೋಟಿ ಸಂಭಾಳಿಸಲಾಗದ ಭಾರೀ ಮೊತ್ತವೇ? ಹಾಗೆನೋಡಿದರೆ, 2025-26ರ ಹಣಕಾಸು ವರ್ಷದಲ್ಲಿ ಆರ್‍ಬಿಐನಿಂದ 3 ಲಕ್ಷ ಕೋಟಿ, ಬ್ಯಾಂಕಿಂಗ್ ವಲಯದಿಂದ 4.11 ಲಕ್ಷ ಕೋಟಿ, ಡಿಜಿಟಲ್ ಪಾವತಿ ನಿರ್ವಹಿಸುವ ಎನ್‌ಪಿಸಿಐಯಿಂದ 1,888 ಕೋಟಿ- ಅಂದರೆ, ಒಂದೇ ವರ್ಷದಲ್ಲಿ 8,899 ಲಕ್ಷ ಕೋಟಿ ರೂಪಾಯಿಗಳು ಕೇಂದ್ರ ಸರ್ಕಾರದ ಖಜಾನೆ ಸೇರಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ
ಈ 8,899 ಲಕ್ಷ ಕೋಟಿಯಲ್ಲಿ, ಡಿಜಿಟಲ್ ಪಾವತಿ ವ್ಯವಸ್ಥೆಗಾಗಿ- ದೇಶದ ಜನರಿಗಾಗಿ- 20 ಸಾವಿರ ಕೋಟಿಯನ್ನು ಖರ್ಚು ಮಾಡುವುದು ಕಷ್ಟವೇ? ಇದನ್ನೂ ದೇಶದ ಜನರನ್ನು ಹಿಂಡಿ ಕಿತ್ತುಕೊಳ್ಳಬೇಕೇ? ಇದು ದರೋಡೆಯಲ್ಲವೇ?
ಇದಷ್ಟೇ ಅಲ್ಲ, ಮೋದಿಯವರ ಸರ್ಕಾರ ಆಗಸ್ಟ್‌ನಲ್ಲಿ ಟ್ಯಾಕ್ಸೇಷನ್ ಅಂಡ್ ಅದರ್ ಲಾಸ್ ಅಮೆಂಡ್ಮೆಂಟ್ ಬಿಲ್ಲನ್ನು ಲೋಕಸಭೆಯಲ್ಲಿ ಮಂಡಿಸಿತು. ಆ ಮೂಲಕ ಉಚಿತ ಡಿಜಿಟಲ್ ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರ(ಎಂಡಿಆರ್) ವಿಧಿಸುವ ಮಾರ್ಗ ತೆರೆದುಕೊಂಡಿತು. ಆಗಸ್ಟ್ 6ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಎಂಡಿಆರ್ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ’ ಎಂದರು. ಆಗಸ್ಟ್ 10ರಂದು, ‘ಎಂಡಿಆರ್‍ಗೆ ಸಂಬಂಧಿಸಿದ ಯಾವುದೇ ಚೌಕಟ್ಟು ಅಂತಿಮಗೊಳಿಸಲಾಗಿಲ್ಲ’ ಎಂದರು. ಆದರೆ, ಸೆಪ್ಟೆಂಬರ್ 14ರಂದು ಅಧಿಸೂಚನೆ ಹೊರಡಿಸಿ ಎಂಡಿಆರ್ ಶುಲ್ಕ ವಿಧಿಸಿದರು. ಇದು ದೇಶದ ಜನರಿಗೆ ಹಣಕಾಸು ಸಚಿವರು ಹೇಳಿದ ಸುಳ್ಳಲ್ಲವೇ?
ನಾವು ಒಂದು ವಸ್ತುವನ್ನು ಯುಪಿಐ ಮೂಲಕ ಖರೀದಿಸಿದರೆ, ಅದಕ್ಕೆ ತೆರಿಗೆ ತೆರಬೇಕು. ಸಾಲದು ಎಂದು ಈಗ ಶುಲ್ಕವನ್ನೂ ಭರಿಸಬೇಕು. ಇದು ಪ್ರಧಾನಿ ಮೋದಿಯವರ ಡಿಜಿಟಲ್ ದರೋಡೆಯಲ್ಲವೇ? ದೇಶ ನಗದುರಹಿತವಾಗಲಿಲ್ಲ, ನೋಟು ಮುದ್ರಣ ವೆಚ್ಚ ಕಡಿಮೆಯಾಗಲಿಲ್ಲ, ಡಿಜಿಟಲ್ ವ್ಯವಸ್ಥೆ ಜನರ ನೆರವಿಗೆ ಬರಲಿಲ್ಲ, ಸೈಬರ್ ಸಮಸ್ಯೆಗಳನ್ನೂ ಸರ್ಕಾರ ಪರಿಹರಿಸಲಿಲ್ಲ. ಇಂತಹ ‘ಆಡಳಿತ’ವನ್ನು ಪ್ರಶ್ನಿಸುವವರು ದೇಶದ್ರೋಹಿಗಳೇ?




