ಮುಂಬರುವ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಗುರಿ ತಲುಪುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ನೌಕರರ ಸಂಘದ ಆಶ್ರಯದಲ್ಲಿ ಸೋಮವಾರ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ವತಃ ಬೈಕ್ ಚಲಾಯಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದು ರ‍್ಯಾಲಿಯ ವಿಶೇಷವಾಗಿತ್ತು.
ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿ.ಪಂ ಸಿಇಒ ಶಶಿಧರ ಕುರೇರ ಅವರು ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು. ರ‍್ಯಾಲಿ ಆರಂಭಕ್ಕೂ ಮುನ್ನ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಜಿಲ್ಲಾಡಳಿತ ಭವನದಿಂದ ಹೊರಟ ರ‍್ಯಾಲಿಯು ನವನಗರದ ಬಸ್ ನಿಲ್ದಾಣ, ಎಲ್‌ಐಸಿ ವೃತ್ತ, ಎಸ್‌ಬಿಐ, ಜಿಲ್ಲಾ ಆಸ್ಪತ್ರೆ, ಕಾಳಿದಾಸ ವೃತ್ತ, ವಿದ್ಯಾಗಿರಿ ಮೂಲಕ ಸಾಗಿತು. ನಂತರ ಮುಚಖಂಡಿ ಕ್ರಾಸ್, ಕೃಷ್ಣಾ ಟಾಕೀಜ್, ವಲ್ಲಭಾಯಿ ಚೌಕ್, ಬಸವೇಶ್ವರ ವೃತ್ತ ಹಾಗೂ ರೈಲ್ವೆ ನಿಲ್ದಾಣ ಮಾರ್ಗವಾಗಿ ಸಂಚರಿಸಿದ ರ‍್ಯಾಲಿಯು ಮತ್ತೆ ಜಿಲ್ಲಾಡಳಿತ ಭವನಕ್ಕೆ ತಲುಪಿ ಮುಕ್ತಾಯಗೊಂಡಿತು.
ರ‍್ಯಾಲಿಯುದ್ದಕ್ಕೂ ʼನಿಮ್ಮ ನಡೆ ಮತಗಟ್ಟೆ ಕಡೆʼ, ʼಆಸೆ-ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಿʼ, ʼಓಟ್ ಮಾಡಿದವನೇ ನಿಜವಾದ ಹೀರೋʼ, ʼನಿಮ್ಮ ಮತ- ನಿಮ್ಮ ಭವಿಷ್ಯʼ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆಯಲಾಯಿತು.
ಇದನ್ನೂ ಓದಿ: ಬಾಗಲಕೋಟೆ | ನವನಗರ ಬೌದ್ಧ ವಿಹಾರಕ್ಕೆ ಸಚಿವರ ಭೇಟಿ: ಅಭಿವೃದ್ಧಿಗೆ ಭರವಸೆ
ಈ ಅಭಿಯಾನದಲ್ಲಿ ಅಪರ ಜಿಲ್ಲಾಧಿಕಾರಿ, ಜಿ.ಪಂ ಉಪ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖ ಅಧಿಕಾರಿಗಳಾದ ಅಲ್ಲಮಪ್ರಭು, ರವೀಂದ್ರ ಹಕಾಟಿ, ಶ್ರೀಶೈಲ ಕಂಕಣವಾಡಿ, ಕೆ. ಪ್ರಭಾಕರ, ರಮೇಶ ಚವ್ಹಾಣ ಪಾಲ್ಗೊಂಡಿದ್ದರು. ನೌಕರರ ಸಂಘದ ಪದಾಧಿಕಾರಿಗಳಾದ ಎಂ.ಬಿ. ಬಳ್ಳಾರಿ, ಎಸ್.ವಿ. ಸತ್ಯರೆಡ್ಡಿ ಹಾಗೂ ವಿವಿಧ ಇಲಾಖೆಗಳ ನೂರಾರು ಸಿಬ್ಬಂದಿಗಳು ರ‍್ಯಾಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.




