ಬಾಗೇಪಲ್ಲಿ:-ಜನಗಣತಿ-2027 ಸಂಬಂಧ ಸ್ವಯಂ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 15ರ ವರೆಗೆ ಸಾರ್ವಜನಿಕರಿಗೆ ಅವಕಾಶ ಇದೆ. ಜನಗಣತಿಯ ಹಿನ್ನಲೆಯಲ್ಲಿ ಏಪ್ರಿಲ್ 1ರಿಂದ ಆರಂಭಗೊಂಡಿರುವ ಸ್ವಯಂ ಮನೆಗಣತಿಯಲ್ಲಿ ತಾಲ್ಲೂಕು ಪ್ರತಿಯೊಬ್ಬ ನಾಗರಿಕರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಹಶಿಲ್ದಾರ್ ಮನೀಷಾ ಎನ್ ಪತ್ರಿ ತಿಳಿಸಿದರು.
ಪಟ್ಟಣದ ನ್ಯಾಶನಲ್ ಕಾಲೇಜು ನಲ್ಲಿ ಗಣತಿದಾರರಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಮೊಬೈಲ್ ಅಥವಾ ಲ್ಯಾಪ್‌ಟ್ಯಾಪ್ ಮೂಲಕ ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಿ, ಕುಟುಂಬದ ಮಾಹಿತಿಯನ್ನು ಅವರೇ ನಮೂದಿಸಬಹುದು ಎಂದರು.
ಗಣಿತಿದಾರರು, ಮೇಲ್ವಿಚಾರಕರು ಶ್ರಮವಹಿಸಿ ನಿಷ್ಠೆಯಿಂದ ಗಣತಿ ಮಾಡಬೇಕು ಎಂದು ಹೇಳಿದರು. ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಬಳಸಿ ಲಾಗಿನ್ ಆಗಿ ಕೇಳುವ ಮಾಹಿತಿಯನ್ನು ತುಂಬಿದ ನಂತರ ಎಸ್‌ಇ ಐಡಿ ಸಿಗುತ್ತದೆ. ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ನಂತರ ಗಣತಿದಾರರು ಮನೆಗೆ ಬಂದಾಗ ಆ ಐಡಿ ನೀಡಬೇಕು. ನೀವು ನೀಡುವ ಮಾಹಿತಿ ಗೌಪ್ಯವಾಗಿರುತ್ತದೆ ಎಂದು ಹೇಳಿದರು.
ಏಪ್ರಿಲ್ 16ರಿಂದ ಮನೆಪಟ್ಟಿ ಗಣತಿ ಆರಂಭವಾಗಲಿದೆ. ತರಬೇತಿಯಲ್ಲಿ ಭಾಗವಹಿಸಿದವರು ಎಲ್ಲ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಯಾವುದೇ ಅನುಮಾನ ಇದ್ದರೆ ತಕ್ಷಣ ಮಾಸ್ಟರ್ ತರಬೇತುದಾರರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು. ಮನೆಪಟ್ಟಿ ಗಣತಿ ವೇಳೆ ನಿಖರ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು. ಅಧಿಕಾರಿಗಳು, ಶಿಕ್ಷಕರು ಹಾಗೂ ಎಲ್ಲ ಇಲಾಖೆ ಸಿಬ್ಬಂದಿ ಸ್ವಯಂ ಗಣತಿಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಬಿಇಓ ಎನ್ ವೆಂಕಟೇಶಪ್ಪ ಮಾತನಾಡಿ ಜನಗಣತಿ ಕಾರ್ಯವನ್ನು ಶಿಕ್ಷಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ವಿಶ್ವಾಸವಿದೆ. ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ನೇಮಕಗೊಂಡಿರುವ ಗಣತಿದಾರರು ಮೊದಲ ಹಂತದ ಮನೆ ಪಟ್ಟಿ ಕಾರ್ಯದಲ್ಲಿ ನಿಗದಿ ಪಡಿಸುವ ಪ್ರದೇಶಗಳ ನಕ್ಷೆಯನ್ನು ಸಮರ್ಪಕವಾಗಿ ತಯಾರಿಸಿಕೊಂಡರೆ ಜನಗಣತಿ ಕಾರ್ಯ ಸುಲಭವಾಗುತ್ತದೆ ಎಂದರು.
ಜನಗಣತಿಯ ಮೊದಲ ಭಾಗವಾಗಿ ಮನೆಗಳ ಪಟ್ಟಿ ಸರ್ವೆ ಕಾರ್ಯ ಏಪ್ರಿಲ್ 16ರಿಂದ ಪ್ರಾರಂಭಗೊಂಡು ಮೇ 15ಕ್ಕೆ ಮುಕ್ತಾಯಗೊಳ್ಳಲಿದೆ. ಪ್ರತಿಯೊಬ್ಬ ಗಣತಿದಾರರು ನಿಗದಿಪಡಿಸುವ ಪ್ರದೇಶಗಳ ಮನೆಗಳನ್ನು ಗುರುತಿಸುವ ನಕ್ಷೆ ಕಾರ್ಯವನ್ನು ಕಡ್ಡಾಯವಾಗಿ ಪೂರ್ಣಗೊಳಿಸುವ ಮೂಲಕ ಮಹತ್ವದ ಯೋಜನೆಯ ಯಶಸ್ಸಿಗೆ ಶ್ರಮಿಸಿ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..? ಕಸಬಾ ಸಹಕಾರ ಸಂಘಕ್ಕೆ ಮಂಜುನಾಥ ರೆಡ್ಡಿ ಅಧ್ಯಕ್ಷ, ಶಬ್ಬೀರ್ ಅಹ್ಮದ್ ಪಾಷಾ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
ಈ ಸಂದರ್ಭದಲ್ಲಿ ಶಿಕ್ಷಣ ಸಮನ್ವಯಾಧಿಕಾರಿಗಳಾದ ಆರ್.ವೆಂಕಟರಾಮ್, ಪುರಸಭೆ ಮುಖ್ಯಾಧಿಕಾರಿಗಳಾದ ಎಂ.ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತ ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ.ವೆಂಕಟರವಣ,ಪ್ರಧಾನ ಕಾರ್ಯದರ್ಶಿ ಸಿ.ವೆಂಕಟರಾಯಪ್ಪ,ಎಂ.ವಿ.ರಂಗಾರೆಡ್ಡಿ,ಜನಗಣತಿ ತರಭೇತಿಧಾರ ಜಿ.ಚಂದ್ರಶೇಖರ್, ಶಿಕ್ಷಕರಾದ ವರುಣ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.




