ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿರುವ ಆಲಗೂರ ಪುನರ್ವಸತಿ ಕೇಂದ್ರವನ್ನು ಮರಳಿ ಆಲಗೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಹಸ್ತಾಂತರಿಸಬೇಕು ಎಂದು ಆಲಗೂರ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಆಲಗೂರ ಪುನರ್ವಸತಿ ಕೇಂದ್ರವನ್ನು ಜಮಖಂಡಿ ನಗರಸಭೆಗೆ ಸೇರ್ಪಡೆಗೊಳಿಸಿದ ಬಳಿಕ ನಿವಾಸಿಗಳು ದಿನನಿತ್ಯದ ಕೆಲಸ ಕಾರ್ಯಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಗರಸಭೆ ಕಚೇರಿ ಪುನರ್ವಸತಿ ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿದ್ದು, ಸಣ್ಣಪುಟ್ಟ ಕೆಲಸಗಳಿಗೂ ಸಾರ್ವಜನಿಕರು ನಗರಸಭೆ ಕಚೇರಿಗೆ ತೆರಳಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಖಾತಾ ಬದಲಾವಣೆ, ಮನೆ ತೆರಿಗೆ ಪಾವತಿ, ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಲು ವಿಳಂಬವಾಗುತ್ತಿದೆ ಎಂದು ಅವರು ದೂರಿದ್ದಾರೆ.
ಅಲ್ಲದೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದ್ದಾಗ ದೊರೆಯುತ್ತಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಹಾಗೂ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಸೌಲಭ್ಯಗಳು ಪ್ರಸ್ತುತ ನಿವಾಸಿಗಳಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರಿಂದ ಪುನರ್ವಸತಿ ಕೇಂದ್ರದ ಅಭಿವೃದ್ಧಿಯೂ ಕುಂಠಿತಗೊಂಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಪುನರ್ವಸತಿ ಕೇಂದ್ರದ ಭೌಗೋಳಿಕ ಪರಿಸ್ಥಿತಿ ಹಾಗೂ ಸಾರ್ವಜನಿಕರ ಅನುಕೂಲವನ್ನು ಪರಿಗಣಿಸಿ, ಜಮಖಂಡಿ ನಗರಸಭೆ ವ್ಯಾಪ್ತಿಯಿಂದ ಆಲಗೂರ ಪುನರ್ವಸತಿ ಕೇಂದ್ರವನ್ನು ಮುಕ್ತಗೊಳಿಸಿ ಮರಳಿ ಆಲಗೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಲಗೂರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿ ಟಿ ಉಪಾಧ್ಯ,ಶ್ರೀಮಂತ ಖಿಪಾಪುರ,ಮಹಾದೇವ ಹೆಣಗಂಡಿ,ಗಿರೀಶ ಬಳೂಲ,ಮಲ್ಲಪ್ಪ ಪರಗೊಂಡ,ಶಾಂತಪ್ಪ ಖಿದಾಪುರ,ಧರೆಪ್ಪ ಅರ್ಜುನವಾಡಿ ಇದ್ದರು




