ಶಾಲೆಗಳಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಕಿಚನ್ ಸೆಂಟರ್‌ಗಳನ್ನು ಪ್ರಾರಂಭಿಸಲು ಮುಂದಾಗಿರುವ ಶಿಕ್ಷಣ ಇಲಾಖೆಯ ನಿರ್ಧಾರವನ್ನು ಖಂಡಿಸಿ, ನವೆಂಬರ್ 25ರಿಂದ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಅಡುಗೆ ತಯಾರಿಕೆ ಸ್ಥಗಿತಗೊಳಿಸಿ, ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಬಿಸಿಯೂಟ ನೌಕರರು ನಿರ್ಧರಿಸಿದ್ದಾರೆ.
ಈ ಕುರಿತು ಬಿಸಿಯೂಟ ನೌಕರರ ಸಂಘದ ಅಖಂಡ ಜಮಖಂಡಿ ತಾಲೂಕು ಅಧ್ಯಕ್ಷೆ ಸುನಂದಾ ಮೋಪಗಾರ, ಉಪಾಧ್ಯಕ್ಷೆ ಶೋಭಾ ಹೊಸಮನಿ ಹಾಗೂ ಕಾರ್ಯದರ್ಶಿ ಸುರೇಖಾ ಪ್ರದಾನಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಣ ಇಲಾಖೆಯ ಹೊಸ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಕ್ಷರ ದಾಸೋಹ ಯೋಜನೆಯಡಿ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸಾವಿರಾರು ಮಹಿಳೆಯರು ಹಲವು ವರ್ಷಗಳಿಂದ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಪ ಸಂಬಳಕ್ಕೆ ದುಡಿಯುತ್ತಿರುವ ಈ ಮಹಿಳಾ ನೌಕರರ ಬದುಕಿನ ಭದ್ರತೆಯ ಬಗ್ಗೆ ಕಿಂಚಿತ್ತೂ ಚಿಂತಿಸದೆ ಶಿಕ್ಷಣ ಇಲಾಖೆ ಕ್ಲಸ್ಟರ್ ಮಟ್ಟದಲ್ಲಿ ಕಿಚನ್ ಸೆಂಟರ್ ಆರಂಭಿಸಲು ಮುಂದಾಗಿರುವುದು ಖಂಡನೀಯ ಎಂದು ಅವರು ಹೇಳಿದರು.
ಶಾಲಾ ಶಿಕ್ಷಕರ ಸಂಘದವರು ಕೆಲಸದ ಒತ್ತಡದ ಕಾರಣದಿಂದ ಬಿಸಿಯೂಟ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಇಲಾಖೆಗೆ ತಿಳಿಸಿರುವುದನ್ನೇ ನೆಪವಾಗಿಸಿಕೊಂಡು, ಅಡುಗೆ ವ್ಯವಸ್ಥೆಯನ್ನು ಕೇಂದ್ರೀಕೃತಗೊಳಿಸಲು ಇಲಾಖೆ ಮುಂದಾಗಿದೆ. ಆದರೆ, ಇದರಿಂದ ಈಗಾಗಲೇ ಕೆಲಸ ಮಾಡುತ್ತಿರುವ ಸಾವಿರಾರು ಅಡುಗೆ ಸಿಬ್ಬಂದಿಯ ಉದ್ಯೋಗದ ಭವಿಷ್ಯ ಏನಾಗಲಿದೆ ಎಂಬುದನ್ನು ಅಧಿಕಾರಿಗಳು ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಕ್ಲಸ್ಟರ್ ವ್ಯಾಪ್ತಿಯಲ್ಲಿ ಹತ್ತಾರು ಶಾಲೆಗಳಿರುತ್ತವೆ. ಅವೆಲ್ಲಕ್ಕೂ ಒಂದೇ ಕಿಚನ್ ಸೆಂಟರ್ ಆರಂಭಿಸಿದರೆ ಅಲ್ಲಿ ಎಷ್ಟು ಸಿಬ್ಬಂದಿಗೆ ಕೆಲಸ ಸಿಗುತ್ತದೆ? ಉಳಿದ ಅಡುಗೆ ಸಿಬ್ಬಂದಿ ಎಲ್ಲಿಗೆ ಹೋಗಬೇಕು? ಹಲವು ವರ್ಷಗಳಿಂದ ಇದೇ ಕೆಲಸವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಮಹಿಳೆಯರು, ಅದರಲ್ಲೂ ವಯಸ್ಸಾದ ಸಿಬ್ಬಂದಿ ಹಾಗೂ ಅವರ ಕುಟುಂಬಗಳ ಬದುಕಿನ ಹೊಣೆ ಯಾರು ಹೊರುತ್ತಾರೆ? ಎಂದು ಪ್ರಶ್ನಿಸಿದರು.
ಈಗಾಗಲೇ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಬಿಸಿಯೂಟ ನೌಕರರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ನೀತಿಯನ್ನು ಸರ್ಕಾರ ಕೈಬಿಡಬೇಕು. ಕ್ಲಸ್ಟರ್ ಮಟ್ಟದ ಕಿಚನ್ ಸೆಂಟರ್ ಪ್ರಾರಂಭಿಸುವ ಪ್ರಸ್ತಾವನೆಯನ್ನು ತಕ್ಷಣ ಹಿಂಪಡೆಯಬೇಕು. ಅಡುಗೆ ಸಿಬ್ಬಂದಿಯ ಉದ್ಯೋಗ ಭದ್ರತೆಯನ್ನು ಖಾತರಿಪಡಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಹಾಗೂ ಶಿಕ್ಷಣ ಇಲಾಖೆ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ನವೆಂಬರ್ 25ರಿಂದ ಶಾಲೆಗಳಲ್ಲಿ ಬಿಸಿಯೂಟ ಅಡುಗೆ ತಯಾರಿಕೆ ಸ್ಥಗಿತಗೊಳಿಸಿ, ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಅಡುಗೆ ಸಿಬ್ಬಂದಿಯ ಉದ್ಯೋಗ ಮತ್ತು ಬದುಕಿನ ಪ್ರಶ್ನೆಯಾಗಿರುವ ಈ ಹೋರಾಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಸುನಂದಾ ಮೋಪಗಾರ, ಶೋಭಾ ಹೊಸಮನಿ ಹಾಗೂ ಸುರೇಖಾ ಪ್ರದಾನಿ ಒತ್ತಾಯಿಸಿದರು.



