ಕಮಲನಗರ ತಾಲ್ಲೂಕಿನಲ್ಲಿ ಸಂಭವಿಸುವ ಅಗ್ನಿ ಅವಘಡಗಳಿಗೆ ತ್ವರಿತವಾಗಿ ಸ್ಪಂದಿಸಿ, ಜೀವಹಾನಿ ಹಾಗೂ ಆಸ್ತಿಪಾಸ್ತಿ ನಷ್ಟ ತಡೆಯುವ ಉದ್ದೇಶದಿಂದ ಕಮಲನಗರದಲ್ಲಿ ನೂತನವಾಗಿ ನಿರ್ಮಿಸಿರುವ ಅಗ್ನಿಶಾಮಕ ಠಾಣೆಯನ್ನು ಔರಾದ್ (ಬಿ) ಶಾಸಕ ಪ್ರಭು ಬಿ. ಚವ್ಹಾಣ ಅವರು ನ.20ರಂದು ಲೋಕಾರ್ಪಣೆಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.
ಬಳಿಕ ಮಾತನಾಡಿ, “ಈ ಹಿಂದೆ ಕಮಲನಗರ ತಾಲ್ಲೂಕಿನಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ ಔರಾದ್, ಭಾಲ್ಕಿ ಸೇರಿದಂತೆ ದೂರದ ಪ್ರದೇಶಗಳಿಂದ ಅಗ್ನಿಶಾಮಕ ವಾಹನಗಳನ್ನು ಕರೆಸಬೇಕಾಗಿತ್ತು. ವಾಹನಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ಸಾಕಷ್ಟು ಸಮಯ ವ್ಯರ್ಥವಾಗಿ ಮನೆಗಳು, ಬೆಳೆಗಳು ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತಿತ್ತು. ಇದರಿಂದ ಜನರು ಅಪಾರ ನಷ್ಟ ಅನುಭವಿಸುವಂತಾಗಿತ್ತು” ಎಂದು ತಿಳಿಸಿದರು.
“ಕಮಲನಗರದಲ್ಲಿಯೇ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿ ₹2 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ. ಇದೀಗ ಸ್ಥಳೀಯವಾಗಿಯೇ ಅಗ್ನಿಶಾಮಕ ಠಾಣೆ ಆರಂಭವಾಗಿರುವುದರಿಂದ ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಲು ಸಾಧ್ಯವಾಗಲಿದೆ. ಇದರಿಂದ ಅಮೂಲ್ಯ ಜೀವಗಳ ರಕ್ಷಣೆ ಹಾಗೂ ಆಸ್ತಿಪಾಸ್ತಿ ನಷ್ಟವನ್ನು ತಗ್ಗಿಸಲು ಅನುಕೂಲವಾಗಲಿದೆ” ಎಂದರು.
ಔರಾದ ಕ್ಷೇತ್ರದ ಜನರ ಅಗತ್ಯತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಜನರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ಮಂಜೂರಾದ ಕಾಮಗಾರಿಗಳು ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಬರುವವರೆಗೂ ನಿರಂತರ ಮುತುವರ್ಜಿ ವಹಿಸಲಾಗುತ್ತಿದೆ ಎಂದು ಹೇಳಿದರು.
ಅರಣ್ಯ ಇಲಾಖೆ ಕಚೇರಿ ಕಟ್ಟಡಕ್ಕೆ ಭೂಮಿಪೂಜೆ
ಕಮಲನಗರ ತಾಲ್ಲೂಕಿನ ಸಂಗಮ ಗ್ರಾಮದ ಬಳಿ ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಮಲನಗರ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಇದೇ ವೇಳೆ ಮಸ್ಕಲ್, ಬೇಳಕೋಣಿ (ಚೌ), ರಕ್ಷ್ಯಾಳ (ಬಿ), ರಕ್ಷ್ಯಾಳ (ಕೆ), ಹಿಪ್ಪಳಗಾಂವ, ಠಾಣಾ ಕುಶನೂರ, ನಿಡೋದಾ, ಹಾಲಹಳ್ಳಿ, ಸಂಗಮ, ಖೇಡ್, ಹುಲಸೂರ, ಸೋನಾಳ, ಮುರ್ಗ್ (ಕೆ), ಬಾಳೂರ, ಕಮಲನಗರ, ರಾಮಪೂರ, ಡಿಗ್ಗಿ ಹಾಗೂ ಹೋಳಸಮುದ್ರ ಗ್ರಾಮಗಳಿಗೆ ಭೇಟಿ ನೀಡಿ ರಸ್ತೆ, ಶಾಲಾ ತರಗತಿ ಕೊಠಡಿ, ಡಿಜಿಟಲ್ ತರಗತಿ ಕೊಠಡಿ, ಕಂಪೌಂಡ್ ಗೋಡೆ, ಸಮುದಾಯ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳಿಗೂ ಚಾಲನೆ ನೀಡಿದರು.
ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಅನೀಲ ವಾಡೇಕರ್, ಇನಿಲ್ ಹೊಳಸಮುದ್ರ, ಮಂಜು ಸ್ವಾಮಿ, ಶಕುಂತಲಾ ಮುತ್ತಂಗಿ, ಪ್ರವೀಣ ಕಾರಬಾರಿ, ಗಿರೀಶ ವಡೆಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಸಾಹಿತಿಗಳು ಜನಜಾಗೃತಿಯ ಕುಲುಮೆ ಆರದಂತೆ ನೋಡಿಕೊಳ್ಳಲಿ: ಅಮೀನ್ ಮಟ್ಟು



