ಗ್ರಾಮೀಣ ಪ್ರದೇಶದ ಜನರು ತಮ್ಮ ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ಮನೆ, ನಿವೇಶನ ಸೇರಿದಂತೆ ಅರ್ಹ ಆಸ್ತಿಗಳಿಗೆ ಭೂ ಗ್ಯಾರಂಟಿ ಯೋಜನೆಯಡಿ ಇ-ಸ್ವತ್ತು ಖಾತಾ ಮಾಡಿಸಿಕೊಳ್ಳುವ ಮೂಲಕ ಅಧಿಕೃತ ಮಾಲೀಕತ್ವದ ದಾಖಲೆ ಪಡೆಯಬೇಕು ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.
ತಾಲೂಕಿನ ಧೂಪತಮಹಾಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂ ಗ್ಯಾರಂಟಿ ಯೋಜನೆಯಡಿ ಹಮ್ಮಿಕೊಂಡಿದ್ದ ಇ-ಸ್ವತ್ತು ಖಾತಾ ವಿತರಣಾ ಅಭಿಯಾನದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ತಮ್ಮ ಆಸ್ತಿಗಳ ಮಾಲೀಕತ್ವದ ಅಧಿಕೃತ ದಾಖಲೆ ಒದಗಿಸುವ ಉದ್ದೇಶದಿಂದ ಸರ್ಕಾರ ಭೂ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ಮನೆ, ನಿವೇಶನ ಹಾಗೂ ಇತರೆ ಅರ್ಹ ಆಸ್ತಿಗಳಿಗೆ ನಿಯಮಾನುಸಾರ ಇ-ಸ್ವತ್ತು ಖಾತಾ ಮಾಡಿಸಿಕೊಳ್ಳಲು ಅವಕಾಶವಿದ್ದು, ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇ-ಸ್ವತ್ತು ದಾಖಲೆ ಹೊಂದುವುದರಿಂದ ಆಸ್ತಿಯ ಮಾಲೀಕತ್ವಕ್ಕೆ ಅಧಿಕೃತ ಮಾನ್ಯತೆ ದೊರೆಯುವುದರ ಜತೆಗೆ ಭವಿಷ್ಯದಲ್ಲಿ ಆಸ್ತಿ ಸಂಬಂಧಿತ ಸರ್ಕಾರಿ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ. ಆದ್ದರಿಂದ ಅರ್ಹ ಆಸ್ತಿ ಹೊಂದಿರುವವರು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಇ-ಸ್ವತ್ತು ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಚೆನ್ನಪ್ಪ ಉಪ್ಪೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದಕುಮಾರ ಶಾಸ್ತ್ರಿ, ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್ | ಸಾಹಿತಿಗಳು ಜನಜಾಗೃತಿಯ ಕುಲುಮೆ ಆರದಂತೆ ನೋಡಿಕೊಳ್ಳಲಿ: ಅಮೀನ್ ಮಟ್ಟು



