ಪರಿಸರ ಮಾಲಿನ್ಯ, ರಾಸಾಯನಿಕಗಳ ಅತಿಯಾದ ಬಳಕೆ ಹಾಗೂ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಮಾನವನ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮುಂದಿನ ಪೀಳಿಗೆಯ ಅಸ್ತಿತ್ವದ ಬಗ್ಗೆಯೇ ಆತಂಕ ಮೂಡಿಸಿವೆ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಶಿವಗಂಗಾ ರುಮ್ಮಾ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ.ಬಸವರಾಜ ಬಲ್ಲೂರ ಅವರ ಸರ್ವಾಧ್ಯಕ್ಷತೆಯಲ್ಲಿ ನ.21ರಂದು ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ನಡೆದ ‘ಭೂಮಿ ತತ್ವ’ ಗೋಷ್ಠಿಯಲ್ಲಿ ‘ನಿರ್ವಿಜೀಕರಣದ ಸವಾಲುಗಳು ಮತ್ತು ಆಹಾರ ಸುರಕ್ಷತೆ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
“ಪ್ರತಿಯೊಂದು ಜೀವಿಯೂ ತನ್ನ ಸಂತತಿಯನ್ನು ಮುಂದುವರಿಸುವುದು ಪ್ರಕೃತಿಯ ಸಹಜ ಪ್ರಕ್ರಿಯೆಯಾಗಿದೆ. ಆದರೆ ಪರಿಸರ ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಬಂಜೆತನ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳು ಹೆಚ್ಚುತ್ತಿರುವುದನ್ನು ವಿವಿಧ ಸಂಶೋಧನೆಗಳು ತೋರಿಸಿವೆ. ನವದೆಹಲಿ, ಬೆಂಗಳೂರಿನಂತಹ ನಗರಗಳಲ್ಲಿಯೂ ಸಂತಾನಹೀನತೆಯ ಸಮಸ್ಯೆ ಕಂಡುಬರುತ್ತಿರುವುದು ಪರಿಸರದ ಗುಣಮಟ್ಟ ಮತ್ತು ಮಾನವನ ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ” ಎಂದರು.
ಪ್ರಕೃತಿಯ ಸಮತೋಲನ ಹದಗೆಟ್ಟರೆ ಜೀವಸಂಕುಲದ ಅಸ್ತಿತ್ವಕ್ಕೇ ಅಪಾಯ ಎದುರಾಗಲಿದೆ. ಆಹಾರ ಉತ್ಪಾದನೆಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆ, ಪರಿಸರ ಮಾಲಿನ್ಯ ಮತ್ತು ಆಹಾರ ಸಂಸ್ಕರಣೆಯಲ್ಲಿನ ಲೋಪಗಳಿಂದ ಸುರಕ್ಷಿತ ಆಹಾರ ಪಡೆಯುವುದೇ ಸವಾಲಾಗಿದೆ. ನಾವು ಸೇವಿಸುವ ಆಹಾರವೇ ಆರೋಗ್ಯಕ್ಕೆ ಅಪಾಯ ತಂದೊಡ್ಡುವಂತಾಗಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.
ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ ಹಾಗೂ ಆಹಾರದ ಗುಣಮಟ್ಟ ಕಾಪಾಡಲು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ಮತ್ತು ಸುರಕ್ಷಿತ ಆಹಾರ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕೃಷಿಯಲ್ಲಿ ಮಹಿಳೆಯರ ಪಾತ್ರ ಅಪಾರ: ಆರತಿ ಪಾಟೀಲ
ಕೃಷಿ ಅಧಿಕಾರಿ ಆರತಿ ಪಾಟೀಲ್ ಅವರು, ಮಹಿಳೆಯರು ಮತ್ತು ಕೃಷಿ ಕ್ಷೇತ್ರ ಕುರಿತು ಅವರು ಉಪನ್ಯಾಸ ನೀಡಿ, “ಕೃಷಿ ಕ್ಷೇತ್ರದ ಪ್ರತಿಯೊಂದು ಹಂತದಲ್ಲಿಯೂ ಮಹಿಳೆಯರ ಪರಿಶ್ರಮ ಮಹತ್ವದ್ದಾಗಿದೆ. ಬಿತ್ತನೆಯಿಂದ ಕಟಾವಿನವರೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರಿಗೆ ಸೂಕ್ತ ಪ್ರೋತ್ಸಾಹ ಮತ್ತು ಗೌರವ ದೊರೆಯಬೇಕಿದೆ” ಎಂದು ಹೇಳಿದರು.

ಮಹಿಳೆಯರು ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿಭಾಯಿಸುವುದರ ಜೊತೆಗೆ ಕೃಷಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಿತ್ತನೆ, ಕಳೆ ತೆಗೆಯುವುದು, ಕಟಾವು ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆಯಂತಹ ಕೆಲಸಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅನ್ನದಾತರ ಬೆನ್ನೆಲುಬಾಗಿ ನಿಂತಿರುವ ಮಹಿಳೆಯರ ಶ್ರಮವನ್ನು ಗುರುತಿಸಿ ಗೌರವಿಸುವುದು ಅಗತ್ಯ ಎಂದರು.
ಮಹಿಳೆಯರನ್ನು ಕೃಷಿಯ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಡಿಜಿಟಲ್ ಸಖಿ, ಡ್ರೋನ್ ದೀದಿ ಸೇರಿದಂತೆ ಆಧುನಿಕ ತಂತ್ರಜ್ಞಾನ ಆಧಾರಿತ ಕಾರ್ಯಕ್ರಮಗಳು ಮಹಿಳೆಯರಿಗೆ ಹೊಸ ಅವಕಾಶಗಳನ್ನು ಕಲ್ಪಿಸುತ್ತಿವೆ. ಕೃಷಿಯಲ್ಲಿ ಸಾಧನೆ ಮಾಡುವ ಮಹಿಳೆಯರಿಗೆ ಬಹುಮಾನ ಹಾಗೂ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ. ಮಹಿಳೆಯರು ಇಂತಹ ಯೋಜನೆಗಳ ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಕೇವಲ ಶ್ರಮಕ್ಕೆ ಸೀಮಿತಗೊಳಿಸದೆ, ಅವರಿಗೆ ತಂತ್ರಜ್ಞಾನ, ತರಬೇತಿ, ಆರ್ಥಿಕ ನೆರವು ಮತ್ತು ನಾಯಕತ್ವದ ಅವಕಾಶಗಳನ್ನು ಕಲ್ಪಿಸಬೇಕು. ಕುಟುಂಬಗಳೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಜ್ಞಾನ, ಅನುಭವ ಮತ್ತು ಪರಿಶ್ರಮಕ್ಕೆ ಗೌರವ ನೀಡಬೇಕು ಎಂದು ಹೇಳಿದರು.
ಯುವಕರು ಕೃಷಿಯಿಂದ ವಿಮುಖರಾಗುತ್ತಿರುವುದು ಆತಂಕಕಾರಿ: ಸುನೀಲಕುಮಾರ
ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯದಿರುವುದು, ಹವಾಮಾನ ವೈಪರೀತ್ಯ, ಕೃಷಿಗೆ ಸಾಮಾಜಿಕವಾಗಿ ಸಿಗದ ಗೌರವ ಹಾಗೂ ತಂತ್ರಜ್ಞಾನದತ್ತ ಯುವಕರ ಒಲವು ಹೆಚ್ಚುತ್ತಿರುವುದು ಯುವ ಪೀಳಿಗೆ ಕೃಷಿಯಿಂದ ದೂರ ಸರಿಯಲು ಪ್ರಮುಖ ಕಾರಣಗಳಾಗಿವೆ ಎಂದು ಕೃಷಿ ಡಿಪ್ಲೊಮಾ ಕಾಲೇಜಿನ ಉಪನ್ಯಾಸಕ ಸುನೀಲಕುಮಾರ ಎಂ.ಎನ್. ಆತಂಕ ವ್ಯಕ್ತಪಡಿಸಿದರು.
‘ಭೂಮಿ ತತ್ವ’ ಗೋಷ್ಠಿಯಲ್ಲಿ ‘ಯುವ ಪೀಳಿಗೆ ಮತ್ತು ಕೃಷಿ ವಿಮುಖತೆ’ ವಿಷಯ ಕುರಿತು ಅವರು ಉಪನ್ಯಾಸ ನೀಡಿ, “ಯುವಕರು ಕೃಷಿಯಿಂದ ದೂರ ಸರಿಯುತ್ತಿರುವುದು ಭವಿಷ್ಯದ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಹಾರದ ಕೊರತೆಯನ್ನೂ ಎದುರಿಸಬೇಕಾಗಬಹುದು. ಆದ್ದರಿಂದ ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಿ, ಅವರನ್ನು ಕೃಷಿಯತ್ತ ಆಕರ್ಷಿಸುವ ಅಗತ್ಯವಿದೆ” ಎಂದರು.

ಕೃಷಿಯನ್ನು ಲಾಭದಾಯಕವಾಗಿಸುವುದರ ಜೊತೆಗೆ ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಮಣ್ಣಿನ ಗುಣಮಟ್ಟ, ಹವಾಮಾನ ಹಾಗೂ ತೇವಾಂಶಕ್ಕೆ ಅನುಗುಣವಾಗಿ ಬಿತ್ತನೆ ಮಾಡಬೇಕು. ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ಕೆ ಮಾಡಿಕೊಂಡು, ಸ್ಥಳೀಯ ಮಣ್ಣು ಮತ್ತು ಹವಾಮಾನಕ್ಕೆ ಹೊಂದಿಕೊಳ್ಳುವ ತಳಿಗಳಿಗೆ ಆದ್ಯತೆ ನೀಡಬೇಕು. ಲಭ್ಯವಿರುವ ನೀರು ಮತ್ತು ಭೂಮಿ ಸೇರಿದಂತೆ ಕೃಷಿ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರು ಸಾಂಪ್ರದಾಯಿಕ ಏಕಬೆಳೆ ಪದ್ಧತಿಗೆ ಸೀಮಿತವಾಗದೆ ಬಹುಬೆಳೆ ಪದ್ಧತಿಯನ್ನು ಅನುಸರಿಸಬೇಕು. ಇದರಿಂದ ಬೆಳೆ ನಷ್ಟದ ಅಪಾಯ ಕಡಿಮೆ ಮಾಡುವುದರ ಜೊತೆಗೆ ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಕೃಷಿಯಲ್ಲಿ ಹೊಸ ಪ್ರಯೋಗಗಳು, ವೈಜ್ಞಾನಿಕ ಚಿಂತನೆ, ಆಧುನಿಕ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡಿದರೆ ಕೃಷಿಯನ್ನು ಮತ್ತಷ್ಟು ಸದೃಢಗೊಳಿಸಬಹುದು ಎಂದು ಹೇಳಿದರು.
ಕಲಬುರಗಿಯ ನಿವೃತ್ತ ಅಧ್ಯಾಪಕ ಡಾ. ಕಲ್ಯಾಣರಾವ ಪಾಟೀಲ ಗೋಷ್ಠಿಯ ಅಧ್ಯಕ್ಷತೆ: ವಹಿಸಿದ್ದರು. ಪಂಚಾಕ್ಷರಿ ಪುಣ್ಯಶೆಟ್ಟಿ, ಡಾ.ಜಗನ್ನಾಥ ಹೆಬ್ಬಾಳೆ, ಬಾಲಾಜಿ ಬಿರಾದಾರ, ಡಾ. ಸಿ. ಆನಂದರಾವ, ರಮೇಶ ಬಿರಾದಾರ, ಸಿದ್ದಾರೆಡ್ಡಿ ನಾಗೂರಾ, ಪ್ರೊ. ಎಸ್.ಎನ್. ಶಿವಣಕರ, ಶ್ರೀರಂಗ ಪರಿಹಾರ, ಲಿಂಗಾನಂದ ಮಹಾಜನ, ಬಾಲಾಜಿ ತೇಲಂಗ, ಡಾ. ಎಸ್.ಎಸ್. ಮೈನಾಳೆ, ಮಹಾದೇವ ಬಿರಾದಾರ ಹಾಗೂ ಡಾ. ಪ್ರಶಾಂತ ಭೋರೆ ಉಪಸ್ಥಿತರಿದ್ದರು. ಉಮೇಶ ಜಾಬಾ ನಿರೂಪಿಸಿದರು. ಸಂಜೀವಕುಮಾರ ಅಲ್ಲೂರೆ ಸ್ವಾಗತಿಸಿದರು. ಆನಂದ ಪಾಟೀಲ ವಂದಿಸಿದರು.
ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾದ ‘ಬೆಳೆವ ಸಿರಿ’ ಗೋಷ್ಠಿ
ಮಕ್ಕಳಲ್ಲಿನ ಸುಪ್ತ ಪ್ರತಿಭೆ, ಸೃಜನಶೀಲತೆ ಹಾಗೂ ಆತ್ಮವಿಶ್ವಾಸ ಅನಾವರಣಕ್ಕೆ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಬೆಳೆವ ಸಿರಿ’ ಗೋಷ್ಠಿ ವೇದಿಕೆಯಾಯಿತು.ಮಕ್ಕಳು ವೇದಿಕೆಗೆ ಏರಿ, ಸಭಿಕರ ಎದುರು ವಿವಿಧ ವಿಷಯಗಳ ಕುರಿತು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಆಶಯ ನುಡಿಗಳನ್ನಾಡಿದ ವೇದ ಶಶಿಕಾಂತ ಬಂಬಳಗೆ ಅವರು ಕರ್ನಾಟಕದ ಭವ್ಯ ಇತಿಹಾಸ, ಪರಂಪರೆ ಹಾಗೂ ಸಾಂಸ್ಕೃತಿಕ ವೈಭವದ ಕುರಿತು ನಿರರ್ಗಳವಾಗಿ ಮಾತನಾಡಿ ಗಮನ ಸೆಳೆದರು. ಆತ್ಮವಿಶ್ವಾಸದಿಂದ ವಿಷಯ ಮಂಡಿಸಿದ ಅವರ ಮಾತುಗಳು ಸಭಿಕರ ಮೆಚ್ಚುಗೆಗೆ ಪಾತ್ರವಾದವು.
ಭೂಮಿಕಾ, ತಮನ್ನಾ, ವೈಷ್ಣವಿ ದೀಪಕ್, ಚಿನ್ಮಯಿ ಅಲ್ಲಮಪ್ರಭು ನಾವದಗೇರೆ ಸೇರಿದಂತೆ ಹಲವು ಮಕ್ಕಳು ವಿವಿಧ ವಿಷಯಗಳ ಕುರಿತು ಮಾತನಾಡಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಮಕ್ಕಳ ಮುಗ್ಧ ಮಾತು, ಸ್ಪಷ್ಟ ಉಚ್ಚಾರಣೆ, ವಿಷಯ ಮಂಡನೆಯ ಶೈಲಿ ಹಾಗೂ ಆತ್ಮವಿಶ್ವಾಸ ಸಭಿಕರ ಗಮನ ಸೆಳೆದವು.
ಇದನ್ನೂ ಓದಿ : ಬೀದರ್ | ಸಾಹಿತಿಗಳು ಜನಜಾಗೃತಿಯ ಕುಲುಮೆ ಆರದಂತೆ ನೋಡಿಕೊಳ್ಳಲಿ: ಅಮೀನ್ ಮಟ್ಟು
ನಟ, ನಿರ್ಮಾಪಕ ಹಾಗೂ ನಿರ್ದೇಶಕ ಬಿ.ಜೆ. ವಿಷ್ಣುಕಾಂತ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಂಬಿಕೆ ಅಕ್ಕ ದಿವ್ಯ ಸಾನಿಧ್ಯ ವಹಿಸಿದ್ದರು. ಕು. ಯುಕ್ತಿ ಅರಳಿ ನೇತೃತ್ವ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಬಸವರಾಜ ಬಲ್ಲೂರ ಉಪಸ್ಥಿತರಿದ್ದರು. ತರಂಗಿಣಿ ಎಸ್. ಶೆಂಬೆಳ್ಳಿ ಸ್ವಾಗತಿಸಿದರು. ದೀಕ್ಷಾ ಸುರೇಶ ಚನಶೆಟ್ಟಿ ನಿರೂಪಿಸಿದರು. ಸಾಯಿಸೃಷ್ಟಿ ಆಕಾಶ ಕೋಟೆ ವಂದಿಸಿದರು.



