ಬಿಜೆಪಿಯವರು ನೂರು ಜನ್ಮ ಎತ್ತಿಬಂದರೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಕಾಂಗ್ರೆಸ್ ಜನಸಂಪರ್ಕ ಕೇಂದ್ರ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು, “ಮಾಧ್ಯಮಗಳಲ್ಲಿ ಬಂದಿರುವ ವರದಿ ಸುಳ್ಳು. ಪಕ್ಷದ ಅಧ್ಯಕ್ಷನಾದ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳನ್ನು ಬದಲಿಸುವ ಅಥವಾ ಕತ್ತರಿ ಹಾಕುವ ಉದ್ದೇಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ” ಎಂದರು.
“ಇಂದಿರಾ ಗಾಂಧಿ ಅವರು ವೃದ್ಧಾಪ್ಯ, ವಿಧವಾ ವೇತನ, ಬ್ಯಾಂಕ್ ರಾಷ್ಟ್ರೀಕರಣ, ಉಳುವವನಿಗೆ ಭೂಮಿ ಯೋಜನೆ ಜಾರಿಗೆ ತಂದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರೈತರ ಪಂಪ್ ಸೆಟ್ ಗೆ 10 ಹೆಚ್.ಪಿ ಉಚಿತ ವಿದ್ಯುತ್, ಕೃಷ್ಣ ಅವರ ಕಾಲದಲ್ಲಿ ಸ್ತ್ರೀಶಕ್ತಿ ಸಂಘ ಯೋಜನೆ ಜಾರಿಗೆ ಬಂದಿತು. ಇದರಲ್ಲಿ ಯಾವುದಾದರೂ ಒಂದು ಯೋಜನೆಯನ್ನು ನಿಲ್ಲಿಸಲಾಗಿದೆಯೇ” ಎಂದು ಪ್ರಶ್ನಿಸಿದರು.
“ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ ಮಾಡಿದ್ದೇವೆ. ರಾಜ್ಯಮಟ್ಟದಲ್ಲಿ ಹೆಚ್ ಎಂ ರೇವಣ್ಣ ಅವರ ಅಧ್ಯಕ್ಷತೆ ಹಾಗೂ ಐವರು ಉಪಾಧ್ಯಕ್ಷರುಗಳ ಸಮಿತಿ ರಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಸಮಿತಿಗಳಲ್ಲಿ ಅಧ್ಯಕ್ಷರು ಹಾಗೂ 14 ಮಂದಿ ಸದಸ್ಯರ ಸಮಿತಿ ಮಾಡಲಾಗಿದೆ. ಅಧ್ಯಕ್ಷರುಗಳು ಜಿಲ್ಲಾ ಮಟ್ಟದ ಸಮಿತಿ ಸದಸ್ಯರಾಗಿರುತ್ತಾರೆ. ಅವರು ಕ್ಷೇತ್ರ ಹಾಗೂ ತಾಲೂಕುಗಳಲ್ಲಿ ಹಾಗೂ ವಾರ್ಡ್ ಗಳಲ್ಲಿ ಕಚೇರಿ ನೀಡಲು ಆದೇಶ ನೀಡಿದ್ದೇವೆ” ಎಂದರು.
“ಆದಾಯ ಹೆಚ್ಚಾಗಿರುವವರು, ತೆರಿಗೆ ಪಾವತಿದಾರರು ಕೂಡ ಈ ಯೋಜನೆ ಪಡೆಯುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ. ಅಂತಹ ಪ್ರಕರಣಗಳ ಪರಿಶೀಲನೆ ಮಾಡಲಾಗುವುದು. ಈ ಫಲಾನುಭವಿಗಳ ಗುರುತಿನ ಚೀಟಿ ವಿತರಣೆಗೆ ನಾವು ಆಲೋಚನೆ ನಡೆಸುತ್ತಿದ್ದೇವೆ. ನಮ್ಮ ಗ್ಯಾರಂಟಿ ಸಮಿತಿ ಈ ವಿಚಾರವಾಗಿ ಪರಿಶೀಲನೆ ಮಾಡಲಿದೆ” ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಶಾಸಕರಿಗೆ ನೀಡುವ ಅನುದಾನ ಕೊರತೆಯಾಗಿದೆ ಎಂದು ಸಚಿವರು ಅಸಮಾಧಾನಗೊಂಡಿದ್ದಾರೆ ಎಂದು ಕೇಳಿದಾಗ, “ಅದೆಲ್ಲವೂ ಸುಳ್ಳು, ನಮ್ಮ ಸರ್ಕಾರ ಇಂತಹ ದೊಡ್ಡ ಯೋಜನೆ ಜಾರಿ ಮಾಡಿದ್ದಾರೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಅಸೂಯೆಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಯಾವ ಸಚಿವರು ಹೇಳಿಲ್ಲ. ಅದೆಲ್ಲವೂ ಸುಳ್ಳು” ಎಂದರು.