ದಶಕಗಳಿಂದ ಕುಂಟುತ್ತ ಸಾಗುತ್ತಿರುವ ಕುಡಚಿ ರೈಲು ಮಾರ್ಗದ ಕಾಮಗಾರಿಯನ್ನು ತ್ವರಿತಗೊಳಿಸಿ, ಯೋಜನೆಯನ್ನು ಪೂರ್ಣಗೊಳಿಸಲು ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ರೈಲ್ವೆ ಹೋರಾಟಕ್ಕೆ ಕೈಜೋಡಿಸಬೇಕು ಎಂದು ರಾಜ್ಯ ರೈಲು ಹೋರಾಟ ಸಮಿತಿಯ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಮನವಿ ಮಾಡಿದರು.
ಬಾಗಲಕೋಟೆ ಜಿಲ್ಲೆಯ ಮುದೋಳದ ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರ ಶತಮಾನಗಳ ಬೇಡಿಕೆಯಾಗಿದ್ದ ರೈಲು ಮಾರ್ಗದ ಯೋಜನೆ ಅನುಷ್ಠಾನಕ್ಕೆ ಬಂದಿದ್ದರೂ, ಕಾಮಗಾರಿ ದಶಕಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2010ರ ರೈಲ್ವೆ ಬಜೆಟ್‌ನಲ್ಲಿ ಅನುಷ್ಠಾನಕ್ಕೆ ಬಂದ ಈ ರೈಲು ಮಾರ್ಗವು 2017ರಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ನಿಗದಿತ ಅವಧಿ ಮುಗಿದು ಹಲವು ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಸರ್ಕಾರ ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ತರುವ ಅಗತ್ಯವಿದೆ ಎಂದು ಹೇಳಿದರು.
ಕಾಮಗಾರಿಗೆ ವೇಗ ನೀಡಲು ಆಗ್ರಹ
ಲೋಕಾಪುರದವರೆಗೆ ರೈಲು ಮಾರ್ಗ ನಿರ್ಮಾಣಗೊಂಡಿದ್ದು, ಅಲ್ಲಿ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಬೇಕು. ಲೋಕಾಪುರದಿಂದ ಯಾದವಾಡ, ಮುದೋಳ ಹಾಗೂ ಜಮಖಂಡಿ ಭಾಗದ ಕಾಮಗಾರಿಗಳಿಗೆ ಗುತ್ತಿಗೆ ನೀಡಲಾಗಿದ್ದರೂ, ಕಳೆದ ಮೂರು ವರ್ಷಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದನ್ನು ತ್ವರಿತಗೊಳಿಸಿ, ಬನಹಟ್ಟಿ, ರಬಕವಿ, ತೇರದಾಳ ಹಾಗೂ ಕುಡಚಿವರೆಗೆ ಕಾಮಗಾರಿ ಕೈಗೊಳ್ಳಲು ಅಗತ್ಯ ಗುತ್ತಿಗೆದಾರರನ್ನು ನೇಮಿಸಿ ಕೆಲಸ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಹೊಸ ರೈಲು ಮಾರ್ಗದಿಂದ ಸಮಗ್ರ ಅಭಿವೃದ್ಧಿಗೆ ಬಲ
ಲೋಕಾಪುರ–ಬಟಕುರ್ಕಿ–ರಾಮದುರ್ಗ–ಶಿರಸಂಗಿ–ಯಲ್ಲಮ್ಮನ ಸೌದತ್ತಿ–ಧಾರವಾಡ ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಹೊಸ ರೈಲು ಮಾರ್ಗದ ಸಮೀಕ್ಷೆಗೆ ಕೇಂದ್ರ ಸರ್ಕಾರ ಈಗಾಗಲೇ ಆದೇಶಿಸಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಅಖಂಡ ಬಾಗಲಕೋಟ ಜಿಲ್ಲೆಯ ವಾಣಿಜ್ಯ, ಶಿಕ್ಷಣ, ವ್ಯಾಪಾರ ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ಭಕ್ತಾದಿಗಳು ಸೇರಿದಂತೆ ವಿವಿಧ ವರ್ಗದ ಜನರಿಗೆ ಸುಗಮ ಸಾರಿಗೆ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ರೈಲ್ವೆ ಯೋಜನೆಗಳ ಅನುಷ್ಠಾನಕ್ಕಾಗಿ ರೈತರು, ರೈತ ಮುಖಂಡರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದು ಕುತ್ಬುದ್ದೀನ್ ಖಾಜಿ ಹೇಳಿದರು.
ಸಭೆಯಲ್ಲಿ ಮುತ್ತಪ್ಪ ಕೊಮಾರ , ಸಂಗಮೇಶ ದೊಡ್ಡಮನಿ, ಮೈನುದ್ದೀನ್ ಖಾಜಿ, ಬೊಮ್ಮನಗೌಡ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.





