ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

Date:

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ವಾಯುಮಾಲಿನ್ಯವು ಆಧುನಿಕ ನಗರೀಕರಣದ ಅತ್ಯಂತ ಗಂಭೀರ ಮತ್ತು ಆತಂಕಕಾರಿ ಸಮಸ್ಯೆಯಾಗಿ ಎದುರಾಗಿದೆ. ತಂತ್ರಜ್ಞಾನ ನಗರಿ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವಂತೆಯೇ, ಇಲ್ಲಿನ ರಸ್ತೆಗಳಲ್ಲಿ ಧೂಳು, ವಾಹನಗಳು ಹೊರಸೂಸುವ ಹೊಗೆ ಹಾಗೂ ತ್ಯಾಜ್ಯದಿಂದ ಉಂಟಾಗುವ ವಾಯುಮಾಲಿನ್ಯದ ಮಟ್ಟವೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಪರಿಣಾಮ, ಬೆಂಗಳೂರಿನ ರಸ್ತೆಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು, ವಾಹನ ದಟ್ಟಣೆಯ ನಡುವೆ ಸಂಚಾರ ನಿಯಂತ್ರಿಸುವ ಪೊಲೀಸರು, ದಿನವಿಡೀ ಬಸ್ ಚಲಾಯಿಸುವ ಚಾಲಕರು ಹಾಗೂ ಧೂಳು ತುಂಬಿದ ಪರಿಸರದಲ್ಲಿ ಕೆಲಸ ಮಾಡುವ ನಿರ್ಮಾಣ ಕಾರ್ಮಿಕರ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತಿದೆ. ದಿನವಿಡೀ ಬೀದಿಗಳಲ್ಲೇ ಇರುವ ಈ ಎಲ್ಲ ಕಾರ್ಮಿಕರು ವಾಯುಮಾಲಿನ್ಯ ಮತ್ತು ಧೂಳಿನಿಂದ ಬಸವಳಿಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಶ್ವಾಸಕೋಶದ ಕಾರ್ಯಕ್ಷಮತೆಯಲ್ಲಿ ಕುಸಿತಕ್ಕೆ ತುತ್ತಾಗಿದ್ದಾರೆ ಎಂದು ಹೊಸ ಅಧ್ಯಯನವೊಂದು ಗಂಭೀರ ಎಚ್ಚರಿಕೆ ನೀಡಿದೆ.

- Advertisement -

ಬೆಂಗಳೂರಿನ ‘ವಾಯು ಆಕ್ಯುಪೇಷನಲ್ ಅಂಡ್ ಎನ್ವಿರಾನ್‌ಮೆಂಟಲ್ ರೆಸ್ಪಿರೇಟರಿ ಇಲ್ನೆಸ್ ಕ್ಲಿನಿಕ್’ (VOERIC) ಸಂಸ್ಥೆಯು 2023ರ ನವೆಂಬರ್‌ ಮೂರು ವರ್ಷಗಳ ಆರೋಗ್ಯ ಅಧ್ಯಯನ ನಡೆಸಿದೆ. ಇದರಲ್ಲಿ 10,350 ಮುಂಚೂಣಿ ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ತಪಾಸಣೆಗೆ ಒಳಗಾದ ಪೌರಕಾರ್ಮಿಕರ ಪೈಕಿ ಸುಮಾರು 45%ರಷ್ಟು ಮಂದಿಯಲ್ಲಿ ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗಿರುವುದನ್ನು ಸೂಚಿಸುವ ಲಕ್ಷಣಗಳು ಕಂಡುಬಂದಿವೆ. ಅಂತೆಯೇ, ಬಿಎಂಟಿಸಿ ಸಿಬ್ಬಂದಿಯಲ್ಲಿ 29.5%, ಸಂಚಾರ ಪೊಲೀಸರಲ್ಲಿ 28% ಹಾಗೂ ನಿರ್ಮಾಣ ಕಾರ್ಮಿಕರಲ್ಲಿ 15%ರಷ್ಟು ಮಂದಿಯಲ್ಲಿ ಇದೇ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...
ಉದ್ಯೋಗತಪಾಸಣೆಗೆ ಒಳಗಾದವರುಶ್ವಾಸಕೋಶದ ಸಾಮರ್ಥ್ಯ ಕುಸಿತದ ಸೂಚನೆ
ಪೌರಕಾರ್ಮಿಕರು37945%
ಬಿಎಂಟಿಸಿ ಚಾಲಕರು/ಸಿಬ್ಬಂದಿ4,51729.5%
ಸಂಚಾರ ಪೊಲೀಸರು3,28528%
ನಿರ್ಮಾಣ ಕಾರ್ಮಿಕರು2,16915%
ಒಟ್ಟು10,350—

ಅಧ್ಯಯನದಲ್ಲಿ ‘ಸಾಮಾನ್ಯ ಅನುಪಾತವಿದ್ದರೂ ಶ್ವಾಸಕೋಶದ ಕಾರ್ಯಕ್ಷಮತೆಯ ವ್ಯತ್ಯಾಸ’ (Preserved Ratio Impaired Spirometry – PRISm) ಎಂಬ ಶ್ವಾಸಕೋಶ ಪರೀಕ್ಷೆ ಮಾದರಿಯನ್ನು ಗುರುತಿಸಲಾಗಿದೆ. ಈ ಮಾದರಿಯಲ್ಲಿ ವ್ಯಕ್ತಿಯು ಉಸಿರನ್ನು ಹೊರಹಾಕುವ ಸಾಮರ್ಥ್ಯದ ಕೆಲವು ಅಳತೆಗಳು ಕಡಿಮೆಯಾಗಿರುತ್ತವೆ. ಇದರಿಂದ ಶ್ವಾಸಕೋಶದ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸವಿದೆ ಎಂಬ ಸೂಚನೆ ಕಂಡುಬರುತ್ತದೆ.

ಅಧ್ಯಯನಕ್ಕೆ ಒಳಪಟ್ಟ ನಾಲ್ಕು ಉದ್ಯೋಗ ವಿಭಾಗಗಳ ಪೈಕಿ ಪೌರಕಾರ್ಮಿಕರಲ್ಲಿ ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗಿರುವ ಸೂಚನೆ ಅತ್ಯಧಿಕ ಪ್ರಮಾಣದಲ್ಲಿ ಕಂಡುಬಂದಿದೆ. ತಪಾಸಣೆಗೆ ಒಳಗಾದ 379 ಪೌರಕಾರ್ಮಿಕರಲ್ಲಿ ಸುಮಾರು 45%ರಷ್ಟು ಮಂದಿಗೆ PRISm ಮಾದರಿಯ ವ್ಯತ್ಯಾಸಗಳಿವೆ. ಇದರರ್ಥ, ಪ್ರತಿದಿನ ನಗರದ ರಸ್ತೆಗಳನ್ನು ಸ್ವಚ್ಛಗೊಳಿಸುವ ಪ್ರತಿ ಇಬ್ಬರು ಪೌರಕಾರ್ಮಿಕರಲ್ಲಿ ಒಬ್ಬರು ತಮ್ಮ ಶ್ವಾಸಕೋಶದ ಕಾರ್ಯಕ್ಷಮತೆಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ಪೌರಕಾರ್ಮಿಕರು ರಸ್ತೆಗಳನ್ನು ಗುಡಿಸುವಾಗ ಧೂಳು, ವಾಹನಗಳಿಂದ ಹೊರಬರುವ ಹೊಗೆ ಹಾಗೂ ರಸ್ತೆಯ ಮೇಲಿನ ಸೂಕ್ಷ್ಮ ಕಣಗಳು ಉಸಿರಾಟದಲ್ಲಿ ದೇಹ ಸೇರುತ್ತವೆ. ತ್ಯಾಜ್ಯ ಸಂಗ್ರಹಣೆ ಮತ್ತು ವಿಂಗಡಣೆಯ ಕೆಲಸದಲ್ಲಿ ಕೊಳೆಯುತ್ತಿರುವ ಕಸ, ಜೈವಿಕ ಕಣಗಳು ಹಾಗೂ ಇತರ ಮಾಲಿನ್ಯಕಾರಕಗಳೂ ಶ್ವಾಸಕೋಶ ಸೇರುತ್ತವೆ. ಇದು ಈ ಕಾರ್ಮಿಕರಲ್ಲಿ ಶ್ವಾಸಕೋಶದ ಕಾರ್ಯಕ್ಷಮತೆಯ ಕುಸಿತಕ್ಕೆ ಕಾರಣವಾಗಿದೆ ಎಂದು ವರದಿ ವಿವರಿಸಿದೆ.

PRISm ಮಾದರಿಯ ವ್ಯತ್ಯಾಸದ ಜೊತೆಗೆ, ಮತ್ತೊಂದು ಲಕ್ಷಣವನ್ನೂ ಅಧ್ಯಯನದಲ್ಲಿ ಪರಿಶೀಲಿಸಲಾಗಿದೆ. ಅದು ‘ಉಸಿರಿನ ಹರಿವಿಗೆ ಅಡಚಣೆ’. ಇದರಲ್ಲಿ ಬಿಎಂಟಿಸಿ ಚಾಲಕರಲ್ಲಿ 2.6%, ಪೌರಕಾರ್ಮಿಕರಲ್ಲಿ 2.3%, ನಿರ್ಮಾಣ ಕಾರ್ಮಿಕರಲ್ಲಿ 2.1% ಹಾಗೂ ಸಂಚಾರ ಪೊಲೀಸರಲ್ಲಿ 1%ರಷ್ಟು ಮಂದಿಗೆ ಉಸಿರಿನ ಹರಿವಿನ ಅಡಚಣೆಯನ್ನು ಸೂಚಿಸುವ ಪರೀಕ್ಷಾ ಫಲಿತಾಂಶಗಳು ಕಂಡುಬಂದಿವೆ.

ವರದಿಯ ಮತ್ತೊಂದು ಪ್ರಮುಖ ಆತಂಕಕಾರಿ ಮುಖವೆಂದರೆ, ಈ ಕಾರ್ಮಿಕರನ್ನು ಕೇವಲ ಉಸಿರಾಟದ ತೊಂದರೆಗಳು ಮಾತ್ರವಲ್ಲದೆ, ಇತರ ದೀರ್ಘಕಾಲೀನ ಕಾಯಿಲೆಗಳಾದ ಬೊಜ್ಜು, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಗಳೂ ಬಾಧಿಸುತ್ತಿವೆ. ಪೌರಕಾರ್ಮಿಕರಲ್ಲಿ 62%ರಷ್ಟು ಮಂದಿಗೆ ಅಧಿಕ ತೂಕ ಅಥವಾ ಬೊಜ್ಜು ಕಂಡುಬಂದಿದೆ. ಬಿಎಂಟಿಸಿ ಸಿಬ್ಬಂದಿಯಲ್ಲಿ ಈ ಸಂಖ್ಯೆ 60.7% ಇದ್ದರೆ, ಸಂಚಾರ ಪೊಲೀಸರಲ್ಲಿ 51.3%ರಷ್ಟಿದೆ.

ಮಧುಮೇಹದ ಸಮಸ್ಯೆಯಲ್ಲಿಯೂ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ. ಬಿಎಂಟಿಸಿ ಚಾಲಕರಲ್ಲಿ 18.2%ರಷ್ಟು ಮಂದಿ ಮಧುಮೇಹ ಹೊಂದಿದ್ದರೆ, ಸಂಚಾರ ಪೊಲೀಸರಲ್ಲಿ 14%ರಷ್ಟು ಮಂದಿಗೆ ಮಧುಮೇಹ ಕಂಡುಬಂದಿದೆ.

ಅಧ್ಯಯನದಲ್ಲಿ ಕಾರ್ಮಿಕರ ಮಾಸ್ಕ್ ಬಳಸುವ ಅಭ್ಯಾಸವನ್ನೂ ಪರಿಶೀಲಿಸಲಾಗಿದೆ. ಆದರೆ, ಅಧ್ಯಯನಕ್ಕೆ ಒಳಪಟ್ಟ ನಾಲ್ಕು ವಲಯದ ಕಾರ್ಮಿಕರಲ್ಲಿ ಬಹುತೇಕರು ಮಾಸ್ಕ್‌ ಧರಿಸುವುದಿಲ್ಲ ಎಂಬುದು ಕಂಡುಬಂದಿದೆ

ಉದ್ಯೋಗಎಂದಿಗೂ ಮಾಸ್ಕ್ ಧರಿಸುವುದೇ ಇಲ್ಲ ಎಂದವರು
ಬಿಎಂಟಿಸಿ ಚಾಲಕರು88.2%
ಸಂಚಾರ ಪೊಲೀಸರು55%
ನಿರ್ಮಾಣ ಕಾರ್ಮಿಕರು37.9%
ಪೌರಕಾರ್ಮಿಕರು16.3%

ಪೌರಕಾರ್ಮಿಕರಲ್ಲಿ ಇತರ ವಿಭಾಗಗಳಿಗಿಂತ ಮಾಸ್ಕ್ ಬಳಕೆ ಹೆಚ್ಚು ಕಂಡುಬಂದರೂ, ಅವರು ಬಳಸುವ ಮಾಸ್ಕ್‌ಗಳ ಗುಣಮಟ್ಟ, ಮುಖಕ್ಕೆ ಹೊಂದಿಕೊಳ್ಳುವಿಕೆ ಹಾಗೂ ಸೂಕ್ಷ್ಮ ಧೂಳಿನ ಕಣಗಳನ್ನು ತಡೆಯುವ ಸಾಮರ್ಥ್ಯವು ಕಳವಳಕಾರಿಯಾಗಿದೆ ಎಂದು ಹೇಳಲಾಗಿದೆ.

VOERIC ವರದಿಯಂತೆ ಪೌರಕಾರ್ಮಿಕರು ಶ್ವಾಸಕೋಶದ ಕಾರ್ಯಕ್ಷಮತೆ ಸೇರಿದಂತೆ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ, ಅವರ ಬದುಕು ಕೂಡ ಜರ್ಜರಿತವಾಗಿದೆ. ಸೊಚಾರಾ (SOCHARA) ಸಂಸ್ಥೆ ಪ್ರಕಟಿಸಿರುವ ‘ಕಸದಡಿಯಲ್ಲಿ ಮುಚ್ಚಿಹೋದ ಸತ್ಯ: ಬೆಂಗಳೂರು ಪೌರಕಾರ್ಮಿಕರ ಆರೋಗ್ಯ ಪರಿಸ್ಥಿತಿಯ ಅಧ್ಯಯನ’ (Swept Under: A Study on the Health Status of Municipal Pourakarmikas in Bengaluru) ವರದಿಯು ಪೌರ ಕಾರ್ಮಿಕರು ಕೆಲಸದ ಸ್ಥಳದಲ್ಲಿನ ಗಾಯಗಳು, ಅಲರ್ಜಿ, ಸೋಂಕುಗಳು, ದೈಹಿಕ ನೋವು ಮತ್ತು ವೈದ್ಯಕೀಯ ಸೌಲಭ್ಯ ಪಡೆಯಲು ಎದುರಿಸುತ್ತಿರುವ ಅಡೆತಡೆಗಳನ್ನು ದಾಖಲಿಸಿದೆ. ವರದಿ ದಾಖಲಿಸಿರುವ ಪೌರಕಾರ್ಮಿಕರ ಆರೋಗ್ಯ ಸಮಸ್ಯೆಯ ಅಂಕಿಅಂಶಗಳು ಹೀಗಿವೆ;

ಆರೋಗ್ಯ ಸಮಸ್ಯೆವರದಿ ಮಾಡಿದವರ ಪ್ರಮಾಣ
ಬೆನ್ನು, ಸೊಂಟ, ಕೀಲು ಸೇರಿದಂತೆ ಸ್ನಾಯು–ಮೂಳೆ ಸಂಬಂಧಿತ ನೋವು42%
ತಲೆನೋವು39%
ನೆಗಡಿ, ಕೆಮ್ಮು, ಜ್ವರ36%
ದೈಹಿಕ ಆಯಾಸ ಮತ್ತು ಮೈಕೈ ನೋವು26%
ಕಣ್ಣುರಿ ಮತ್ತು ಕಣ್ಣು ಕೆಂಪಾಗುವುದು15%
ಉಸಿರಾಟದ ತೊಂದರೆ8%
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು7%

ಅಧ್ಯಯನದಲ್ಲಿ ಸುರಕ್ಷತಾ ಸಾಧನಗಳನ್ನು ಬಳಸಿದ ಕಾರ್ಮಿಕರಲ್ಲಿಯೂ ಬಹಳಷ್ಟು ಮಂದಿ ‘ತಮಗೆ ನೀಡಲಾಗಿರುವ ಸುರಕ್ಷತಾ ಸಾಧನಗಳ ಗುಣಮಟ್ಟ ಸರಿಯಿಲ್ಲ’ ಎಂದು ದೂರಿದ್ದರು. 33%ರಷ್ಟು ಮಂದಿ ಮಾಸ್ಕ್‌ಗಳ ಕುರಿತು ಮತ್ತು 29%ರಷ್ಟು ಮಂದಿ ಕೈಗವಸುಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೇ ಅಧ್ಯಯನವು ಕೆಲಸದ ಸ್ಥಳದಲ್ಲಿ ಶೌಚಾಲಯ, ಕುಡಿಯುವ ನೀರು, ವಿಶ್ರಾಂತಿ ಸ್ಥಳ ಹಾಗೂ ಮಹಿಳೆಯರಿಗೆ ಬಟ್ಟೆ ಬದಲಾಯಿಸುವ ವ್ಯವಸ್ಥೆಗಳ ಕೊರತೆಯನ್ನೂ ಉಲ್ಲೇಖಿಸಿತ್ತು. ಜೊತೆಗೆ, ಅನಾರೋಗ್ಯಕ್ಕೆ ತುತ್ತಾದಾಗಲೂ ವೇತನ ಕಡಿತದ ಭೀತಿಯಿಂದ ಕಾರ್ಮಿಕರು ರಜೆ ತೆಗೆದುಕೊಳ್ಳದಿರುವುದು, ಇಎಸ್‌ಐ ಸೌಲಭ್ಯದ ಮಾಹಿತಿ ಇಲ್ಲದಿರುವುದು ಅಥವಾ ಅದನ್ನು ಬಳಸುವಲ್ಲಿ ತೊಂದರೆ ಎದುರಿಸುತ್ತಿರುವುದು ಕಾರ್ಮಿಕರ ಆರೋಗ್ಯ ಪರಿಸ್ಥಿತಿಯನ್ನು ಇನ್ನಷ್ಟು ಭೀಕರಗೊಳಿಸಿದೆ ಎಂದು ವರದಿ ಹೇಳಿತ್ತು.

ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಕೆಲಸದ ಸ್ಥಳದಲ್ಲಿನ ಅವ್ಯವಸ್ಥೆ, ಮೂಲ ಸೌಕರ್ಯಗಳ ಕೊರತೆ ಕುರಿತು ಪೌರಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ದಿನ.ಕಾಮ್‌ ಜೊತೆ ಮಾತನಾಡಿದ ಮರಿಯಪ್ಪನಪಾಳ್ಯದ ಪೌರಕಾರ್ಮಿಕೆ ವಿಜಯಲಕ್ಷ್ಮಿ, “ನಮ್ಮ ಊರಿನಲ್ಲಿ ಬೆಳೆ ಸರಿಯಾಗಿ ಬರಲಿಲ್ಲ. ಬಡತನದಿಂದ ಜೀವನ ನಡೆಸಲು ಸಾಧ್ಯವಾಗದೆ ಬೆಂಗಳೂರಿಗೆ ಬಂದೆವು. ಮಕ್ಕಳನ್ನು ಸಾಕಲು ಮನೆಗೆಲಸ ಆರಂಭಿಸಿದೆ. ನಂತರ ಪೌರಕಾರ್ಮಿಕಳಾಗಿ ಕೆಲಸಕ್ಕೆ ಸೇರಿದೆ. ಆದರೆ, ಕೆಲಸ ಮಾಡಲು ಅಗತ್ಯವಿರುವ ಸರಿಯಾದ ಮೂಲ ಸೌಕರ್ಯಗಳಿಲ್ಲ. ಮಾಸ್ಕ್‌-ಕೈಗವಸುಗಳನ್ನು ಕೊಟ್ಟಿದ್ದಾರೆ. ಆದರೆ, ಅವುಗಳನ್ನು ಹೆಚ್ಚು ಕಾಲ ಬಳಸಲು ಸಾಧ್ಯವಿಲ್ಲ” ಎಂದು ದೂರಿದ್ದಾರೆ.

ಮತ್ತೊಬ್ಬ ಪೌರಕಾರ್ಮಿಕರಾದ ಲತಾ ಅವರು, “ಸುಮಾರು 15 ವರ್ಷಗಳಿಂದ ಪೌರಕಾರ್ಮಿಕರಾಗಿ ದುಡಿಯುತ್ತಿದ್ದೇನೆ. ಬೆಳಿಗ್ಗೆ ಐದು ಗಂಟೆಗೆ ಎದ್ದು, ಕೆಲಸಕ್ಕೆ ಹೊರಡಬೇಕು. ಕೆಲಸಕ್ಕೆ ಹಾಜರಾಗುವುದು ಹತ್ತು ನಿಮಿಷ ತಡವಾದರೂ ಬಯೋಮೆಟ್ರಿಕ್ ಹಾಜರಾತಿಯಲ್ಲಿ ತೊಂದರೆಯಾಗುತ್ತದೆ. ಜೊತೆಗೆ, ನಾವು ಮಾಡುವ ಕೆಲಸಕ್ಕೆ ಬಹಳ ದೈಹಿಕ ಶ್ರಮ ಬೇಕು. ದಿನದ ಕೆಲಸ ಮುಗಿಯುವಷ್ಟರಲ್ಲಿ ಸಂಪೂರ್ಣ ದಣಿದುಹೋಗುತ್ತೇವೆ. ನಮ್ಮಲ್ಲಿ ಬಹುತೇಕ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಗಳು ಇವೆ” ಎಂದು ಹೇಳಿಕೊಂಡಿದ್ದಾರೆ.

ಪೌರಕಾರ್ಮಿಕರಾದ ಹನುಮಂತಮ್ಮ ಎಂಬವರು ಈ ದಿನ.ಕಾಮ್‌ ಜೊತೆ ಮಾತನಾಡಿದ್ದು, “ನಾವು ಇತರರಿಗಿಂತ ಬೇಗ ವಯಸ್ಸಾದವರಂತೆ, ದುರ್ಬಲಗೊಳ್ಳುತ್ತೇವೆ. ಕಡಿಮೆ ಸಂಬಳದಿಂದ ಪೌಷ್ಟಿಕ ಆಹಾರ ಖರೀದಿಸಲು ಸಾಧ್ಯವಾಗುವುದಿಲ್ಲ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕೆಲಸ ಮಾಡುವುದರಿಂದ ಸಮಯಕ್ಕೆ ಸರಿಯಾಗಿ ಊಟ ಮಾಡಲೂ ಸಾಧ್ಯವಾಗುವುದಿಲ್ಲ. ಧೂಳು, ಕೊಳಚೆಗಳಿಂದಾಗಿ ಆರೋಗ್ಯವೂ ಪದೇ-ಪದೇ ಹದಗೆಡುತ್ತದೆ. ಆದರೂ, ಮಾತ್ರೆ ತೆಗೆದುಕೊಂಡು, ಕೆಲಸಕ್ಕೆ ಹಾಜರಾಗಲೇಬೇಕಾದ ಅನಿವಾರ್ಯತೆ ಇದೆ” ಎಂದಿದ್ದಾರೆ.

ಈ ಲೇಖನ ಓದಿದ್ದೀರಾ?: ಗಡಿಯಲ್ಲಿ ಚೀನಾ ಅತಿಕ್ರಮಣ; ಮೌನಕ್ಕೆ ಸರಿದ 56 ಇಂಚಿನ ಎದೆಯ ಮೋದಿ!

ಕಸ ನಿರ್ವಹಣೆ ಕೆಲಸ ಮಾಡುವ ನಾಗಪ್ಪ ಎಂಬವರು, “ನನ್ನ ಕಾಲಿನ ಹೆಬ್ಬೆರಳಿಗೆ ಗಾಯವಾಗಿ ಹಲವು ತಿಂಗಳುಗಳಾಗಿವೆ. ಇನ್ನೂ ವಾಸಿಯಾಗಿಲ್ಲ. ಪ್ರತಿದಿನ ಕಸದ ನಡುವೆ ಇಳಿದು ಕೆಲಸ ಮಾಡಲೇಬೇಕಾದ್ದರಿಂದ, ಗಾಯ ಬೇಗನೆ ವಾಸಿ ಆಗುತ್ತಿಲ್ಲ. ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಬೇಕೆಂದು ರಜೆ ತೆಗೆದುಕೊಂಡರೆ ಸಂಬಳ ಕಡಿತವಾಗುತ್ತದೆ. ನಾವು ಊಟ ಮಾಡುವ ಸ್ಥಳದಲ್ಲಿಯೂ ಕುಡಿಯಲು ನೀರಿಲ್ಲ. ಕೆಲಸದ ಮಧ್ಯೆ ನೀರು ಹುಡುಕಿಕೊಂಡು ಹೋಗಬೇಕು” ಎಂದು ನೋವು ತೋಡಿಕೊಂಡಿದ್ದಾರೆ.

“ಧೂಳಿನಿಂದಾಗಿ ಹಲವರಲ್ಲಿ ಉಸಿರಾಟದ ಸೋಂಕುಗಳು ಮತ್ತು ಕಣ್ಣಿನ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಪ್ರತಿದಿನ ನಾಲ್ಕೈದು ಗಂಟೆಗಳ ಕಾಲ ಬಾಗಿ ರಸ್ತೆ ಗುಡಿಸುವುದರಿಂದ ಬೆನ್ನು, ಕಾಲು ಹಾಗೂ ಕೈಗಳು ತೀವ್ರವಾಗಿ ನೋವು ಬರುತ್ತವೆ” ಎಂದು ಪೌರಕಾರ್ಮಿಕ ಮಲ್ಲೇಶ್ ಹೇಳಿದ್ದಾರೆ.

ಇತ್ತೀಚೆಗೆ, ಪೌರ ಕಾರ್ಮಿಕರ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದ್ದ ಗ್ರೇಟರ್ ಬೆಂಗಳೂರು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪಿ.ಎನ್ ಮುತ್ತಯ್ಯಪ್ಪ, “ಅನೇಕ ಕಾರ್ಮಿಕರ ಬಳಿ ಆರೋಗ್ಯ ಕಾರ್ಡ್ ಮತ್ತು ಇಎಸ್‌ಐ ಕಾರ್ಡ್‌ಗಳಿಲ್ಲ. ಅನಾರೋಗ್ಯದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಅವರಿಗೆ ತೊಂದರೆಯಾಗುತ್ತಿದೆ” ಎಂದು ಹೇಳಿದ್ದರು.

ಅಂದಹಾಗೆ, VOERIC ವರದಿಯನ್ನು ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ ನಡೆದ ‘ನಮ್ಮ ನಗರವನ್ನು ರಕ್ಷಿಸುವವರ ರಕ್ಷಣೆ’ ದುಂಡುಮೇಜಿನ ಸಭೆಯಲ್ಲಿ ಮಂಡಿಸಲಾಗಿದೆ. ಈ ಸಭೆಯಲ್ಲಿ ಮಾತನಾಡಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ, ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್, ವಾಯುಮಾಲಿನ್ಯವನ್ನು ‘ಹೊಸ ತಂಬಾಕು’ ಎಂದು ಬಣ್ಣಿಸಿದ್ದಾರೆ.

“ವಾಯುಮಾಲಿನ್ಯದ ಪರಿಣಾಮ ಶ್ವಾಸಕೋಶಕ್ಕೆ ಮಾತ್ರ ಸೀಮಿತವಾಗಿಲ್ಲ. ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೂ ಅಪಾಯ ಉಂಟುಮಾಡಬಹುದು. ಮೆದುಳಿನ ಪಾರ್ಶ್ವವಾಯುವಿಗೂ ಕಾರಣವಾಗಬಹುದು. ಗರ್ಭಾವಸ್ಥೆಯ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು. ಬೆಂಗಳೂರಿನಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವುದು, ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಿಸುವುದು ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ಧೂಳು ಹರಡದಂತೆ ಕ್ರಮ ಕೈಗೊಳ್ಳುವುದು ಅಗತ್ಯ” ಎಂದು ಅವರು ಹೇಳಿದ್ದಾರೆ.

ಇದೇ ಸಭೆಯಲ್ಲಿ ಮಾತನಾಡಿದ ‘VOERIC’ ಸಂಸ್ಥೆಯ ಸ್ಥಾಪಕ, ನಿರ್ದೇಶಕ ಡಾ. ರವೀಂದ್ರ ಮೆಹ್ತಾ, “ತಪಾಸಣೆಗೆ ಒಳಗಾದ ಕಾರ್ಮಿಕರಲ್ಲಿ ಗಮನಾರ್ಹ ಪ್ರಮಾಣದ ಜನರಿಗೆ ಶ್ವಾಸಕೋಶದ ಕಾರ್ಯಕ್ಷಮತೆಯ ವ್ಯತ್ಯಾಸ ಕಂಡುಬಂದಿದೆ. ಅನೇಕ ಕಾರ್ಮಿಕರಿಗೆ ರೋಗಲಕ್ಷಣಗಳಿಲ್ಲದಿದ್ದರೂ ಅವರ ಆರೋಗ್ಯ/ಶ್ವಾಸಕೋಶ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸ ಕಂಡುಬಂದಿದೆ” ಎಂದು ಹೇಳಿದ್ದಾರೆ.

ಪೌರ ಕಾರ್ಮಿಕರು ಮತ್ತು ಬೀದಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿರುವ VOERIC ಅಧ್ಯಯನ ವರದಿ ಸೇರಿದಂತೆ ಹಲವಾರು ವರದಿಗಳು ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಕೈಗೊಳ್ಳಬೇಕಾದ ಹಲವು ಅಗತ್ಯ ಕ್ರಮಗಳನ್ನು ಸೂಚಿಸಿವೆ.

  • ಪೌರಕಾರ್ಮಿಕರು, ಬಿಎಂಟಿಸಿ ಚಾಲಕರು, ಸಂಚಾರ ಪೊಲೀಸರು ಹಾಗೂ ನಿರ್ಮಾಣ ಕಾರ್ಮಿಕರಿಗೆ ನಿಯಮಿತ ಶ್ವಾಸಕೋಶ, ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ನಡೆಸಬೇಕು.
  • ಕೆಲಸದ ಸ್ವರೂಪಕ್ಕೆ ತಕ್ಕ ಗುಣಮಟ್ಟದ ಮಾಸ್ಕ್, ಕೈಗವಸು, ಪಾದರಕ್ಷೆ ಹಾಗೂ ಇತರ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ಸಮರ್ಪಕವಾಗಿ ಪೂರೈಸಬೇಕು.
  • ರಸ್ತೆ ಗುಡಿಸುವಾಗ ಧೂಳು ಏಳುವುದನ್ನು ಕಡಿಮೆ ಮಾಡುವ ಯಾಂತ್ರಿಕ ಮತ್ತು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಬೇಕು.
  • ಪೌರಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಸ್ಥಳ ಮತ್ತು ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಬೇಕು.
  • ನಿರ್ಮಾಣ ಕಾಮಗಾರಿಗಳಲ್ಲಿ ಧೂಳು ನಿಯಂತ್ರಣ, ತ್ಯಾಜ್ಯ ನಿರ್ವಹಣೆ ಮತ್ತು ವಾಹನಗಳ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.
  • ಗುತ್ತಿಗೆ ಮತ್ತು ನೇರ ನೇಮಕಾತಿಯ ಕಾರ್ಮಿಕರಿಗೂ ಅರ್ಹತೆಗೆ ಅನುಗುಣವಾಗಿ ಆರೋಗ್ಯ ವಿಮೆ, ಇಎಸ್‌ಐ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ತಲುಪಿಸಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ: ಡಿಪಿಡಿಪಿ ಕಾಯ್ದೆ ಪ್ರಶ್ನಿಸಿ ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ (ಡಿಪಿಡಿಪಿ) ಕಾಯ್ದೆ ಮತ್ತು ನಿಯಮಗಳು ಮಾಧ್ಯಮ...

ಬಾಗಲಕೋಟೆ | ಮುಳುಗಡೆ ಸಂತ್ರಸ್ತರ ನರಕ ಸದೃಶ ಬದುಕು: ಪರಿಹಾರ ಆಗ್ರಹಿಸಿ ಬೃಹತ್‌ ಪಾದಯಾತ್ರೆ

ರಸ್ತೆ ಸಂಪರ್ಕ ಕಡಿತ, ಕೊಳಚೆ ನೀರು, ಸೊಳ್ಳೆಗಳ ಕಾಟ, ವಿಷಜಂತುಗಳ ಭೀತಿ,...

ಮತದಾರರ ಪಟ್ಟಿಯ ಯಡವಟ್ಟು; ಉತ್ತರ ಪ್ರದೇಶ ಚುನಾವಣಾ ಆಯೋಗದಿಂದ ಕ್ಷಮೆಯಾಚನೆ

ಮತದಾರರ ಪಟ್ಟಿಯಲ್ಲಿ ಕಂಡುಬಂದ ವಿಚಿತ್ರ ದೋಷಗಳ ಕುರಿತು ವ್ಯಕ್ತವಾದ ಟೀಕೆಗಳಿಗೆ ಸಾಮಾಜಿಕ...

ಬೀದರ್‌ | ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ ಕಲ್ಪಿಸಿದ ಶಿಕ್ಷಕ!

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಮಾನಯಾನದ ಅನುಭವವನ್ನು ಬಹುಮಾನವಾಗಿ...