ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 17,08,099 ಮತದಾರರಿದ್ದಾರೆ. ಇವರಲ್ಲಿ 8,69,149 ಪುರುಷರು, 8,38,768 ಮಹಿಳೆಯರು ಹಾಗೂ 182 ಇತರೆ ಮತದಾರರಿದ್ದಾರೆ. ನಾಗಠಾಣದಲ್ಲಿ ಅತಿ ಹೆಚ್ಚು ಮತದಾರರು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಆನಂದ ಕೆ. ತಿಳಿಸಿದ್ದಾರೆ.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026ರ ಪ್ರಕ್ರಿಯೆಯಡಿ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಬಳಿಕ ಅಕ್ಟೋಬರ್ 22ರವರೆಗೆ ಸಾರ್ವಜನಿಕರಿಂದ ಸ್ವೀಕರಿಸಲಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಂಡ ನಂತರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರು?
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ವಿವರ ಹೀಗಿದೆ:
ಮುದ್ದೇಬಿಹಾಳ: 1,95,286 ಮತದಾರರು
ದೇವರಹಿಪ್ಪರಗಿ: 2,02,658 ಮತದಾರರು
ಬಸವನ ಬಾಗೇವಾಡಿ: 1,99,685 ಮತದಾರರು
ಬಬಲೇಶ್ವರ: 2,03,952 ಮತದಾರರು
ವಿಜಯಪುರ ನಗರ: 2,13,068 ಮತದಾರರು
ನಾಗಠಾಣ: 2,42,549 ಮತದಾರರು
ಇಂಡಿ: 2,29,479 ಮತದಾರರು
ಸಿಂದಗಿ: 2,21,422 ಮತದಾರರು
ಈ ಪೈಕಿ ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು, ಅಂದರೆ 2,42,549 ಮತದಾರರಿದ್ದರೆ, ಮುದ್ದೇಬಿಹಾಳ ಕ್ಷೇತ್ರದಲ್ಲಿ ಅತಿ ಕಡಿಮೆ, ಅಂದರೆ 1,95,286 ಮತದಾರರಿದ್ದಾರೆ.
ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿ ವಿತರಣೆ
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಂತಿಮ ಮತದಾರರ ಪಟ್ಟಿಯ ಭಾವಚಿತ್ರ ಸಹಿತ ಹಾರ್ಡ್ ಪ್ರತಿಗಳು ಮತ್ತು ಭಾವಚಿತ್ರ ರಹಿತ ಸಾಫ್ಟ್ ಪ್ರತಿಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲೂ ಪಟ್ಟಿ ಲಭ್ಯ
ಸಾರ್ವಜನಿಕರು ಚುನಾವಣಾ ಆಯೋಗದ ಅಧಿ nmjj .mಕೃತ ವೆಬ್‌ಸೈಟ್ voters.eci.gov.in, ಚುನಾವಣಾ ಆಯೋಗದ ECINET ಅಪ್ಲಿಕೇಶನ್ ಹಾಗೂ ವಿಜಯಪುರ ಜಿಲ್ಲಾಡಳಿತದ ಅಧಿಕೃತ ವೆಬ್‌ಪೋರ್ಟಲ್ ಮೂಲಕ ಅಂತಿಮ ಮತದಾರರ ಪಟ್ಟಿಯನ್ನು ವೀಕ್ಷಿಸಬಹುದು.
ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾಗಿರುವುದರಿಂದ, ಅರ್ಹ ನಾಗರಿಕರು ತಮ್ಮ ಹೆಸರು ಸೇರ್ಪಡೆ, ವಿವರಗಳ ತಿದ್ದುಪಡಿ ಸೇರಿದಂತೆ ಅಗತ್ಯ ಬದಲಾವಣೆಗಳಿಗಾಗಿ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮತಗಟ್ಟೆ ಮಟ್ಟದ ಅಧಿಕಾರಿ (BLO), ಸಹಾಯಕ ಮತದಾರರ ನೋಂದಣಾಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ





