ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ ಭವಿಷ್ಯ

Date:

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ ಮೋಸದಿಂದ ಹಳ್ಳಿಗಾಡಿನ ಮಣ್ಣಿನ ಮಕ್ಕಳನ್ನು ಕಾಪಾಡಬೇಕಿದೆ. 

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು, ತಮ್ಮ ಬಾಲ್ಯ-ಬದುಕಿನ ಕತೆ ಹೇಳುವಾಗ ತಾನು ನೇರವಾಗಿ ಐದನೇ ತರಗತಿಗೆ ಪ್ರವೇಶ ಪಡೆದವನು; ಅದುವರೆಗೆ ಕುರಿ ಮೇಯಿಸುತ್ತಿದ್ದೆ; ಬಳಿಕ ಬಿ.ಎಸ್ಸಿ, ಎಲ್ಎಲ್ಬಿ ತನಕ ಕಲಿಯಲು ಸಾಧ್ಯವಾಯಿತು. ಈ ಶಿಕ್ಷಣವೇ ಇಂದು ನಾನು ಮುಖ್ಯಮಂತ್ರಿ ಪಟ್ಟದ ತನಕ ಬರಲು ಮೂಲ ಕಾರಣ ಎಂದು ಶಿಕ್ಷಣದ ಮಹತ್ವ ಕುರಿತು ಹಲವು ಸಲ ವಿವರಿಸಿದ್ದಾರೆ. ನಾನಾ ಕಾರಣಕ್ಕೆ ಶಾಲೆ ಸೇರಲಾಗದವರನ್ನು ಮತ್ತು ಶಾಲೆ ಬಿಟ್ಟವರನ್ನು ವಿದ್ಯಾಭ್ಯಾಸದೆಡೆ ಆಕರ್ಷಿಸುವ ಉಪಕ್ರಮ ಈಗಲೂ ನಡೆಯುತ್ತಿದೆ. ಆದರೆ ಸಿದ್ದರಾಮಯ್ಯನವರಿಗಾಗಲಿ ನೇರವಾಗಿ ಎರಡನೇ ತರಗತಿಗೆ ಸೇರಿದ ಹಳ್ಳಿಗಾಡಿನ ವಿದ್ಯಾರ್ಥಿಗಳಿಗಾಗಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೊಡಲಾಗುತ್ತಿರುವ ‘ಗ್ರಾಮೀಣ ಮೀಸಲಾತಿ’ ಸಿಗಲಾರದು!

- Advertisement -

ಏಕೆಂದರೆ, ಗ್ರಾಮೀಣ ಮೀಸಲಾತಿ ಷರತ್ತಿನಂತೆ ಸೌಲತ್ತು ಪಡೆಯಲು ಅಖಂಡ ಹತ್ತು ವರ್ಷ ಶಾಲೆಗೆ ಹೋಗಿ ಕಲಿತಿರಬೇಕು. ಕುಗ್ರಾಮದ ಮಕ್ಕಳು ಬಡತನದಿಂದ ಪಟ್ಟಣದ ಸರಕಾರಿ ವಸತಿ ನಿಯಮದಲ್ಲುಳಿದು ನಗರದ ಶಾಲೆಗೆ ಹೋದರೂ ಗ್ರಾಮೀಣ ಮೀಸಲಾತಿ ದಕ್ಕದು! ಈ ವಿದ್ಯಾರ್ಥಿ/ನಿಯರು ಗ್ರಾಮೀಣ ಮೀಸಲಾತಿ ನಿಯಮದ ಪ್ರಕಾರ ಹಳ್ಳಿಗರಲ್ಲ; ನಗರ ನಿವಾಸಿಗಳು. ಗ್ರಾಮೀಣ ಮೀಸಲಾತಿ ನೀತಿ ನಿರೂಪಕರ ‘ದೃಷ್ಟಿದೋಷ’ದಿಂದ ಅಬಲ-ಅರ್ಹ ಹಳ್ಳಿ ವಿದ್ಯಾರ್ಥಿಗಳು ಗ್ರಾಮೀಣ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಅನರ್ಹ-ಬಲಾಢ್ಯ ನಗರವಾಸಿಗಳು ರಾಜಾರೋಷವಾಗಿ ಗ್ರಾಮೀಣ ಅಭ್ಯರ್ಥಿಗಳ ಅವಕಾಶ ಎಗರಿಸಲು ಅವಕಾಶವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಕನ್ನಡ ಮಾಧ್ಯಮದಲ್ಲಿ ಕಲಿತವರ ಗೋಳೂ ಇದೇ ತೆರನಾಗಿದೆ. ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ನಿಗದಿಸಿರುವ ಮೀಸಲಾತಿಯಲ್ಲಿನ ದೋಷದಿಂದ ಕನ್ನಡದಲ್ಲಿ ವ್ಯಾಸಂಗ ಮಾಡಿದರೂ ಒಂದು ವರ್ಗಕ್ಕೆ ಪ್ರಯೋಜನವಾಗುತ್ತಿಲ್ಲ. ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿತ ಇಂಗ್ಲಿಷ್ ಮಾಧ್ಯಮದವರೊಂದಿಗಿನ ‘ಸಂಘರ್ಷ’ದಲ್ಲಿ ಸೋಲುವಂತಾಗಿದೆ. ಕನ್ನಡ ಹೋರಾಟಗಾರರು, ಶಿಕ್ಷಣ ತಜ್ಞರಿಗೆ ಈ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮೀಸಲಾತಿಯ ಸಾಮಾಜಿಕ ಅನ್ಯಾಯ-ಅವಾಂತರ ಅರ್ಥವಾಗದಿರುವುದು ವಿಪರ್ಯಾಸವೇ ಸರಿ.

ಇದನ್ನು ಓದಿದ್ದೀರಾ?: ಕನ್ನಡಿಗರ ಉದ್ಯೋಗ ಹಕ್ಕುಗಳ ರಕ್ಷಣೆಗೆ ʼನಮ್ಮ ನಾಡು ನಮ್ಮ ಉದ್ಯೋಗʼ ಚಳವಳಿ ಆರಂಭ

ರಾಜ್ಯದಲ್ಲಿ ಶೇಕಡಾ 5ರಷ್ಟು ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮತ್ತು ಶೇಕಡಾ 15ರಷ್ಟು ಹಳ್ಳಿಗಾಡಿನ ಪ್ರಾಥಮಿಕ ಶಾಲೆ-ಮಾಧ್ಯಮಿಕ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ತನಕ ಕಲಿತವರಿಗೆ ಗ್ರಾಮೀಣ ಸಮಾನಾಂತರ ಮೀಸಲಾತಿ ಶಿಕ್ಷಣ ಹಾಗೂ ಉದ್ಯೋಗ ನೇಮಕಾತಿಯಲ್ಲಿ ಒದಗಿಸುವ ನಿಯಮವಿದೆ. ಸದ್ರಿ ಮೀಸಲಾತಿ ಮಾನದಂಡಗಳು ಮೀಸಲು ಪರಿಕಲ್ಪನೆ ಮತ್ತು ನೈಜ ಉದ್ದೇಶಕ್ಕೆ ವ್ಯತಿರಿಕ್ತವಾಗಿದೆ. ವಿರೋಧಾಭಾಸಗಳ ಈ ಮೀಸಲಾತಿ ನೀತಿ ಅರ್ಹ ದುರ್ಬಲರಿಗೆ ಅವಕಾಶದಿಂದ ವಂಚಿಸುತ್ತಿದೆ. ಬಲಾಢ್ಯ ಅನರ್ಹರು ಈ ಮೀಸಲಾತಿಯ ದೌರ್ಬಲ್ಯ ಬಳಸಿಕೊಂಡು ಲಾಭ ಲಪಟಾಯಿಸುತ್ತಿದ್ದಾರೆ. ಎತ್ತಿಂದೆತ್ತ ಯೋಚಿಸಿದರೂ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮೀಸಲಾತಿ ನೀತಿ-ನಿಯಮ ಅನಿವಾರ್ಯವಾಗಿ ನಗರದ ಶಾಲೆಯಲ್ಲಿ ವ್ಯಾಸಂಗ ಮಾಡಿದ/ಮಾಡುವ ಹಳ್ಳಿಗಾಡಿನ ದುರ್ಬಲರಿಗೆ ಆಘಾತಕಾರಿಯಾಗಿದೆ ಎಂಬುದು ನಿಸ್ಸಂಶಯವಾಗಿ ಮನದಟ್ಟಾಗುತ್ತದೆ.

pic1 900x506 4b32b63c5c28c858e051e9d1a2a717a1

ಗ್ರಾಮೀಣ ಮೀಸಲು ನಿಯಮಾವಳಿಯಲ್ಲಿ ಒಂದರಿಂದ ಹತ್ತನೇ ತರಗತಿ ತನಕದ ನಿರಂತರ ಹತ್ತು ವರ್ಷ ಹಳ್ಳಿಯ ಶಾಲೆಯಲ್ಲಿ ಒಳ ವಿದ್ಯಾರ್ಥಿಯಾಗಿ ಕಲಿತಿರಬೇಕೆಂಬ ಷರತ್ತು ವಿಧಿಸಲಾಗಿದೆ. ಕನ್ನಡ ಮಾಧ್ಯಮ ಮೀಸಲಾತಿಗೆ ಕರ್ನಾಟಕದಲ್ಲಿನ ಶೈಕ್ಷಣಿಕ ಸಂಸ್ಥೆಯಲ್ಲಿ ಏಳು ವರ್ಷ ವ್ಯಾಸಂಗ ಮಾಡಿರಬೇಕೆಂಬ ಕಟ್ಟುಪಾಡಿದೆ. ಇದು ಅವಾಸ್ತವಿಕ-ವೈಜ್ಞಾನಿಕವಷ್ಟೇ ಅಲ್ಲ, ಅನ್ಯಾಯ ಎಂಬುದಕ್ಕೆ ಎರಡು ಮಾತಿಲ್ಲ. ಸರಕಾರದ ಶಿಕ್ಷಣ ನೀತಿ ಮತ್ತು ಮೀಸಲಾತಿ ನಿಯಮ ಒಂದಕ್ಕೊಂದು ಪೂರಕವಾಗಿಲ್ಲ. ಕೌಟಂಬಿಕ, ಆರ್ಥಿಕ, ಸಾಮಾಜಿಕವೇ ಮುಂತಾದ ಕಾರಣದಿಂದ ಶಾಲೆ ಮೆಟ್ಟಿಲು ಏರಲಾಗದ ಮತ್ತು ವಿದ್ಯಾಭ್ಯಾಸ ಮುಂದುವರಿಸಲಾಗದೆ ಶಾಲೆ ಬಿಡುವವರನ್ನು ಶಿಕ್ಷಣದತ್ತ ಸೆಳೆಯುವ ಪ್ರಯತ್ನ ಸರಕಾರ ಮಾಡುತ್ತಿದೆ. ಅನೇಕ ರಿಯಾಯಿತಿ-ಸವಲತ್ತು ಕೊಟ್ಟು ಶಿಕ್ಷಣದ ಅವಕಾಶ ಕಲ್ಪಿಸುತ್ತಿದೆ; ಶಿಕ್ಷಣಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಅವರ ವಯಸ್ಸು ಪರಿಗಣಿಸಿ ಮೇಲ್ತರಗತಿಗಳಿಗೆ ಮುಂಬಡ್ತಿಯ ಪ್ರವೇಶವೂ ಕೊಡಲಾಗುತ್ತಿದೆ. ದುರಂತವೆಂದರೆ, ಇಂಥ ಅಭ್ಯರ್ಥಿಗಳಿಗೆ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮೀಸಲಾತಿ ಪ್ರಾಪ್ತವಾಗುತ್ತಿಲ್ಲ!ಬಾಹ್ಯವಾಗಿ ಎಸ್ಎಸ್ಎಲ್ಸಿ ಮುಗಿಸಿದವರಿಗೂ ಈ ಮೀಸಲಾತಿ ನಿಷ್ಪ್ರಯೋಜಕ. ಕಾರಣ, ಒಂದೋ ಸದ್ರಿ ವಿದ್ಯಾರ್ಥಿಗಳು ಸಂಪೂರ್ಣ ಹತ್ತು ವರ್ಷ ಗ್ರಾಮೀಣ ಶಾಲೆಯಲ್ಲಿ ಕಲಿತವರಲ್ಲ ಅಥವಾ ಏಳು ವರ್ಷದ ಕನ್ನಡ ಮಾಧ್ಯಮ ವ್ಯಾಸಂಗಿಗಳಲ್ಲ ಎಂದು ಪರಿಗಣಿಸಲ್ಪಡುತ್ತಾರೆ. ಮಾತೃಭಾಷೆಯ ಅಭಿಮಾನದಿಂದ ಗಡಿನಾಡಿನ ಕನ್ನಡ ಶಾಲೆಗಳಲ್ಲಿ ಕಲಿತವರಿಗಂತೂ ಈ ಮೀಸಲಾತಿಯಿಂದ ಅನುಕೂಲವೇನಿಲ್ಲ.

ಗ್ರಾಮೀಣ ಪರಿಸರದಲ್ಲಿ ಪ್ರತಿ ಹಂತದಲ್ಲೂ ಹೆಣಗಾಡುತ್ತಲೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸುವ ಹಳ್ಳಿಯ ವಿದ್ಯಾರ್ಥಿ-ವಿಧ್ಯಾರ್ಥಿನಿಯರಿಗೆ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಮೀಸಲಾತಿಯ ಅತಾರ್ಕಿಕ ಷರತ್ತುಗಳು ಮೋಸ ಮಾಡುತ್ತಿವೆ. ಒಂದನೇ ತರಗತಿಯಿಂದ ಎಸ್ಎಸ್ಎಲ್ಸಿವರೆಗಿನ ಹತ್ತು ವರ್ಷದ ಅವಧಿಯಲ್ಲಿ ಒಂದೇ ಒಂದು ತರಗತಿ ಅನಿವಾರ್ಯವಾಗಿ ನಗರದ ಶಾಲೆಯಲ್ಲಿ ಮುಗಿಸಿದರೂ ಗಂಡಾಂತರ ಖಂಡಿತ! ಈ ಎಡವಟ್ಟು ನಿಯಮಾವಳಿಗಳು ಪ್ರಭಾವಿ ಪ್ರತಿಷ್ಠಿತ ವಂಚಕರಿಗೆ ಲಾಭದಾಯಕವಾಗಿದೆ. ಗ್ರಾಮೀಣ ಮೀಸಲಾತಿಗೆ ಅಭ್ಯರ್ಥಿಯ ಗ್ರಾಮೀಣ ಹಿನ್ನಲೆ, ಸಂಸ್ಕೃತಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ-ಗತಿ ಮಾನದಂಡ ಆಗಬೇಕಿತ್ತು. ಆದರೆ ಮೀಸಲಾತಿ ನಿಯಮಾವಳಿ ರೂಪಿಸುವಾಗ ಆಳುವವರು ಮತ್ತವರ ಸಲೆಹೆಗಾರ ಪಂಡಿತರು ಸಹಜ ಸಾಮಾಜಿಕ-ನೈಸರ್ಗಿಕ ನ್ಯಾಯ ತತ್ವಗಳನ್ನೇ ಪಾಲಿಸಿಲ್ಲ.

ವಿರ್ಯಾಸವೆಂದರೆ, ಅಭ್ಯರ್ಥಿ ಕಲಿತ ಶಾಲಾ ಕಟ್ಟಡದ ಸ್ಥಳ(Location) ಆತ/ಕೆ ಗ್ರಾಮೀಣ ಮೀಸಲಾತಿಗೆ ಅರ್ಹನೋ/ಳೋ ಅಲ್ಲವೋ ಎಂಬುದನ್ನು ನಿರ್ಧರಿಸುತ್ತಿದೆ. ಮೀಸಲಾತಿ ಬಯಸುವವರ ಶಾಲೆ ಹಳ್ಳಿಯಲ್ಲಿದೆಯೋ, ಪಟ್ಟಣಲ್ಲಿದೆಯೋ ಎಂಬ ಆಧಾರದಲ್ಲಿ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ಕೊಡಲಾಗುತ್ತಿದೆ. ಅಭ್ಯರ್ಥಿ ಹುಟ್ಟಿ-ಬೆಳೆದ-ಬದುಕಿದ ಪ್ರದೇಶಕ್ಕಿಂತಲೂ ಕಲಿತ ಶಾಲೆಯ ಸ್ಥಾವರ ಸ್ಥಿತಿಗೆ ಪ್ರಾಧಾನ್ಯತೆ ಕೊಡಲಾಗಿದೆ! ಗ್ರಾಮೀಣ ಮೀಸಲಾತಿಗೆ ನ್ಯಾಯವಾಗಿ ಅಭ್ಯರ್ಥಿ/ನಿಯ ಸಾಮಾಜಿಕ ಸಂಕಷ್ಟ-ಸಮಸ್ಯೆ ಮಾನದಂಡವಾಗಬೇಕೇ ವಿನಃ ನಗರದ ಹಾಸ್ಟೆಲ್‌ನಲ್ಲಿ ಉಳಿದು ವ್ಯಾಸಂಗ ಮಾಡಿದ್ದು ಸೌಲತ್ತಿಗೆ ಸಂಚಕಾರ ತರಬಾರದು ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಡುತ್ತಾರೆ.

ಈಗ ಅನುಸರಿಸುತ್ತಿರುವ ಗ್ರಾಮೀಣ ಮೀಸಲಾತಿ ನೀತಿ-ನಿಯಮಗಳು ಹಳ್ಳಿಯ ಬಡ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಹತ್ತಿರದಲ್ಲಿ ಶಾಲೆ, ಹೈಸ್ಕೂಲ್ ಇಲ್ಲದ ಕುಗ್ರಾಮಗಳ ವಿದ್ಯಾರ್ಥಿಗಳು ಪಟ್ಟಣದ ಹಾಸ್ಟೆಲ್‌ಗಳಲ್ಲಿ ಉಳಿದು ಅಲ್ಲಿಯ ಶಾಲೆಯಲ್ಲಿ ಕಲಿತರೆ ಗ್ರಾಮೀಣ ಮೀಸಲಾತಿ ಸವಲತ್ತು ಸಿಗಲಾರದು. ಈ ವಿವೇಚನಾ ರಹಿತ ಷರತ್ತುಗಳು ಪಟ್ಟಣ-ನಗರ ಪ್ರದೇಶದಲ್ಲಿ ಸಕಲ  ಅನುಕೂಲ ಅನುಭವಿಸುತ್ತಿರುವ ‘ಅನರ್ಹ’ರಿಗೆ ಗ್ರಾಮೀಣ ಮೀಸಲಾತಿ ಅಪಹರಿಸಲು ಅನುವು ಮಾಡಿಕೊಡುತ್ತಿದೆ. ಆಧುನಿಕ ಸೌಕರ್ಯ, ಸೌಲಭ್ಯವಿರುವ ಖಾಸಗಿ ಶಾಲೆ ಕಂದಾಯ ಇಲಾಖೆಯ ದಾಖಲೆ ಪ್ರಕಾರ ಗ್ರಾಮ ಪಂಚಾಯತ್ ಪರಿಧಿಯಲ್ಲಿದ್ದರೆ ಅಲ್ಲಿ ದಾಖಲಾದ ಮುಂದುವರಿದ, ಸ್ಥಿತಿವಂತ ಕುಟುಂಬದ ನಗರವಾಸಿ ವಿದ್ಯಾರ್ಥಿ/ನಿಗೆ ಸಲೀಸಾಗಿ ಗ್ರಾಮೀಣ ಮೀಸಲಾತಿ ‘ಅದೃಷ್ಟ’ ಖುಲಾಯಿಸುತ್ತದೆ! ರಾಜ್ಯದ ಹಲವೆಡೆ ಇಂಥ ದೋಖಾ ಇಂಗ್ಲಿಷ್ ಮಿಡಿಯಮ್ ಗ್ರಾಮೀಣ ಶಾಲೆಗಳ ಹಾವಳಿ ಜೋರಾಗಿದೆ.

ಸರಕಾರದ ಯಾವ್ಯಾವುದೋ ಧೋರಣೆಯಿಂದ ನಗರ-ಪಟ್ಟಣಗಳ ವ್ಯಾಪ್ತಿ ರಾತ್ರಿ ಬೆಳಗಾಗುವುದರಲ್ಲಿ ಹಿಗ್ಗಿಬಿಡುವ  ಕಾಲಮಾನವಿದು. ನಗರ-ಪಟ್ಟಣಗಳ ವ್ಯಾಪ್ತಿಗೆ ಹೊರವಲಯದ ಹಳ್ಳಿಗಳು ಸೇರಿ ಗ್ರಾಮೀಣ ಮೀಸಲಾತಿಯ ವ್ಯಾಖ್ಯಾನದಿಂದ ಹೊರದಬ್ಬಲ್ಪಡುತ್ತಿವೆ. ಗ್ರಾಮ ಪಂಚಾಯ್ತಿಯೊಂದು ಪಟ್ಟಣ ಪಂಚಾಯ್ತಿಯಾಗಿ ಪೌರಾಡಳಿತ ಇಲಾಖೆಯ ಸುಪರ್ದಿ ಸೇರಿತೆಂದರೆ ಆಗ ಅಪ್ಪಟ ಹಳ್ಳಿಗಾಡಿನ ಹಿಂದುಳಿದ ವರ್ಗದವರಿಗೆ ಗ್ರಾಮೀಣ ಮೀಸಲಾತಿ ಕೈಗೆಟುಕುವುದಿಲ್ಲ. ಹಾಗಂತ ಇಲ್ಲೇನೂ ಹೈಟೆಕ್ ಶಿಕ್ಷಣ ಸಿಗುವುದಿಲ್ಲ. ಹೊಸ ಪಟ್ಟಣ ಪಂಚಾಯ್ತಿ ಪರಿಸರದ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರು ಗ್ರಾಮೀಣ ಮೀಸಲಾತಿಯಿಂದ ವಂಚಿತರಾಗುತ್ತಾರೆ. ಪಟ್ಟಣದ ಅಂಚಿನಲ್ಲಿರುವ ಪ್ರದೇಶಗಳಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮೂಲ ಸೌಕರ್ಯ, ಅಭಿವೃದ್ಧಿ… ಹೀಗೆ ಯಾವ ಕ್ಷೇತ್ರದಲ್ಲೂ ಪ್ರಗತಿ ಆಗಿರುವುದಿಲ್ಲ. ‘ಹಳ್ಳಿತನ’ದಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಆದರೆ ಗ್ರಾಮೀಣ ಚಹರೆಯ ಊರು ಪಟ್ಟಣವೆಂಬ ಸರ್ಕಾರಿ ಪರಿಗಣನೆಗೆ ಒಳಗಾಗಿ ಎಲ್ಲ ಜಾತಿ-ಧರ್ಮದ ಅಸಾಯಕ ಹಿಂದುಳಿದವರ ಗ್ರಾಮೀಣ ಮೀಸಲಾತಿಗೆ ಸಂಚಕಾರ ಬಂದುಬಿಡುತ್ತದೆ.

ಇದನ್ನು ಓದಿದ್ದೀರಾ?: ಸೌಜನ್ಯ ಪ್ರಕರಣ ಮರು ತನಿಖೆಗೆ ವೇಗ: ಹಿಂದಿನ ತನಿಖಾಧಿಕಾರಿಗಳಿಗೆ SIT ನೋಟಿಸ್, 15ಕ್ಕೂ ಹೆಚ್ಚು ಮಂದಿಗೆ ಬುಲಾವ್

ಶಿಕ್ಷಣ ದಂಧೆಕೋರರಿಗೆ ಗ್ರಾಮೀಣ ಮೀಸಲಾತಿಯ ಅಧ್ವಾನಗಳು ವ್ಯಾವಹಾರಿಕ ತಂತ್ರಗಾರಿಕೆಗೆ ಅನುಕೂಲಕರವಾಗಿದೆ. ಪಟ್ಟಣಗಳ ಸರಹದ್ದಿನಲ್ಲಿರುವ ಹಳ್ಳಿಗಳಲ್ಲಿ ಅತ್ಯಾಧುನಿಕ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆದು ಗ್ರಾಮೀಣ ಮೀಸಲಾತಿಗೆ ಪಂಗನಾಮ ಹಾಕಲಾಗುತ್ತಿದೆ. ಈ ಶಾಲೆಯಿರುವ ಪ್ರದೇಶದಲ್ಲಿ ನಗರದಲ್ಲಿ ಸಿಗುವ ಎಲ್ಲ ಕಲಿಕೆಯ ಅನುಕೂಲತೆ ಇರುತ್ತದೆ. ಶಾಲೆಗಳು ಹೈಟೆಕ್ ಆಗಿರುತ್ತವೆ. ಆದರೆ ಗ್ರಾಮ ಪಂಚಾಯುತ್ ವ್ಯಾಪ್ತಿಯಲ್ಲಿರುತ್ತದೆ. ತಮ್ಮ ಶಾಲೆಗಳಲ್ಲಿ ಕಲಿತರೆ ಗ್ರಾಮೀಣ ಮೀಸಲಾತಿ ‘ಭಾಗ್ಯ’ ಬರುತ್ತದೆ ಎಂದು ಈ ಖಾಸಗಿ ಶಿಕ್ಷಣ ಉದ್ಯಮಪತಿಗಳ ಲಾಬಿ ವ್ಯವಸ್ಥಿತ ಪ್ರಚಾರವೂ ನಡೆಸುತ್ತದೆ. ಪಟ್ಟಣದ ಅಂಚಿನ ಹಳ್ಳಿಗಳಲ್ಲಿ ರೆಸಿಡೆನ್ಸಿಯಲ್ ಶಾಲೆಗಳೆಂಬ ಹೈಟೆಕ್ ಶೈಕ್ಷಣಿಕ ಸಂಕೀರ್ಣಗಳು ತೆರೆಯಲಾಗುತ್ತಿದೆ. ಇಲ್ಲಿ ಕಲಿಯುವ ದುಬಾರಿ-ಆರಾಮದಾಯಕ ಜೀವನ ಶೈಲಿಯ ಮತ್ತು ಸಾಮಾಜಿಕವಾಗಿಯೂ ಮುಂದುವರಿದ ಉಳ್ಳವರ ಮಕ್ಕಳಿಗೆ ಗ್ರಾಮೀಣ ಮೀಸಲಾತಿಯ ಪ್ರಯೋಜನ ಫಲಿಸುತ್ತಿದೆ! ಆದರೆ ಅದೇ ನಗರದ ಹಿಂದುಳಿದ ಏರಿಯಾದ ಸರಕಾರಿ ಶಾಲೆಯಲ್ಲಿ ಕಲಿಯುವ ದುರ್ಬಲರಿಗೆ ಮೀಸಲಾತಿ ದುರ್ಲಭವಾಗಿದೆ.

prajavani 2023 05 533c939c e839 4f2c 88fe 47f64b5af2c5 file75k4ek52p0o13tvof4av15999196211601260690

ಕಲಿಕೆಗೆ ಪೂರಕವಾದ ಶೈಕ್ಷಣಿಕ ಪರಿಸರವಿರುವ ಅತ್ಯಾಧುನಿಕ ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡಿದ ‘ಸರ್ವ ಸನ್ನದ್ಧ’ರು ಮತ್ತು ಸರಕಾರಿ ಶಾಲೆಗಳ ಅಮಾಯಕ ನತದೃಷ್ಟರನ್ನು ಗ್ರಾಮೀಣ ಮೀಸಲಾತಿಯ ಒಂದೇ ಮಾನದಂಡದಿಂದ ಅಳೆಯುವುದೇ ಘೋರ ಅನ್ಯಾಯ. ಇದು ಅಜ ಮತ್ತು ಗಜವನ್ನು ಪಂಥಕ್ಕೆ ಇಳಿಸಿದಂತಷ್ಟೇ! ಸಹಜವಾಗಿಯೇ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಶೈಕ್ಷಣಿಕ, ಔದ್ಯೋಗಿಕ ಪೈಪೋಟಿಯಲ್ಲಿ ಗೆಲ್ಲುತ್ತಿದ್ದಾರೆ. ಸರಕಾರಿ ಶಾಲೆಯಲ್ಲಿ ಕಲಿತ ನಗರ ಮತ್ತು ಹಳ್ಳಿಯ ಮಕ್ಕಳೂ ಸ್ವಂತ ಪರಿಶ್ರಮದಿಂದ ಸಾಧನೆ ಮಾಡಿರಲೂಬಹುದು. ಆದರೆ ಈ ಪ್ರಮಾಣ ತೀರ ಕಡಿಮೆ. ಹಳ್ಳಿ ಮಕ್ಕಳು ಸ್ಪರ್ಧೆಗಳಲ್ಲಿ ಎಡವುತ್ತಿದ್ದಾರೆ. ಪ್ರತಿಭೆ ಪ್ರದರ್ಶಿಸಲು ಪ್ರೋತ್ಸಾಹವಿಲ್ಲದೆ ಸೊರಗುತ್ತಿದ್ದಾರೆ. ಸರಿಯಾದ ಸೂರು, ಶೈಕ್ಷಣಿಕ ವ್ಯವಸ್ಥೆ, ಶಿಕ್ಷಕರಿಲ್ಲದ, ಶಿಕ್ಷಕರಿದ್ದರೂ ಅವರಿಗೆ ಕರ್ತವ್ಯಪ್ರಜ್ಞೆಯಿಲ್ಲದ ಅದೆಷ್ಟೋ ಸರಕಾರಿ ಶಾಲೆಗಳಿವೆ. ಇದೆಲ್ಲ ಹಳ್ಳಿಯ ಮಕ್ಕಳ ಶೈಕ್ಷಣಿಕ ಭವಿಷ್ಯ ಬರಡಾಗಿಸುತ್ತಿದೆ. ಇತ್ತ ಶಿಕ್ಷಣ ತಜ್ಞರು, ಕನ್ನಡ ಹೋರಾಟಗಾರರು ಗಮನ ಹರಿಸುವ ಅನಿವಾರ್ಯತೆಯಿದೆ.

ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲವೆಂಬ ಹತಾಶೆ ಮಡುಗಟ್ಟಿದೆ. ‘ಕನ್ನಡ ಶಾಲೆ’ಗಳೆಂದೇ ಜನಜನಿತವಾಗಿದ್ದ ಹೆಮ್ಮೆಯ ಸರಕಾರಿ ಶಾಲೆಗಳೀಗ ಕಣ್ಮರೆಯಾಗುತ್ತಿವೆ. ಸರಕಾರಿ ಶಾಲೆಗಳು ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸುವುದಿರಲಿ, ಅಸ್ತಿತ್ವ ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಕಳೆದ ಐದು ವರ್ಷದಲ್ಲಿ ಕರ್ನಾಟಕದಲ್ಲಿ 3,617 ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ ಎಂದು ಸಮೀಕ್ಷಾ ವರದಿಯೊಂದು ಹೇಳುತ್ತದೆ. ಖಾಸಗಿ ಶಾಲೆಗಳು ಅತ್ಯುತ್ತಮ ಫಲಿತಾಂಶ ಕೊಡುತ್ತಿವೆ. ಉತ್ಕೃಷ್ಟತೆ ಕಾಪಾಡಿಕೊಳ್ಳದಿದ್ದರೆ ‘ವ್ಯವಹಾರ’ ಕುಸಿಯುವ ಆತಂಕ ಖಾಸಗಿಯವರನ್ನು ಸದಾ ಎಚ್ಚರದಲ್ಲಿ ಇಟ್ಟಿರುತ್ತದೆ. ಇದವರ ವ್ಯಾವಹಾರಿಕ  ಸವಾಲೇ ಆಗಿರಬಹುದು. ಆದರೆ ಸರಕಾರಿ ಶಾಲೆಗಳಲ್ಲಿ ಈ ಜಾಗ್ರತೆ, ಹೊಣೆಗಾರಿಕೆ ಕಾಣುತ್ತಿಲ್ಲ. ಶಾಲೆಯ ಶೈಕ್ಷಣಿಕ ಮಟ್ಟ-ಫಲಿತಾಂಶ ಹೆಚ್ಚಿಸಿಕೊಳ್ಳಬೇಕೆಂಬ ನೈತಿಕ ಒತ್ತಡಕ್ಕಿಂತ ವೇತನ-ಸೌಲತ್ತು ಹೆಚ್ಚಳಕ್ಕೆ ಯಾವ್ಯಾವ ರೀತಿಯಲ್ಲಿ ಪ್ರತಿಭಟನೆ, ಮೌಲ್ಯಮಾಪನ ಬಹಿಷ್ಕಾರ ಮಾಡಿ ಸರಕಾರವನ್ನು ಪಳಗಿಸಬಹುದೆಂಬ ಘಾತುಕ ತಂತ್ರಗಾರಿಕೆಯ ದುರಂತ ಸನ್ನಿವೇಶದಲ್ಲಿ ನಾವಿದ್ದೇವೆ. ಖಾಸಗಿ ಶಾಲೆಗಳು ರಜಾ ದಿಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಿದರೆ, ಸರಕಾರಿ ಶಾಲೆಯ ಶಿಕ್ಷಕ-ಶಿಕ್ಷಕಿಯರು ರಜಾ ದಿನಗಳ ತರಗತಿಯ ಮಾತೆತ್ತಿದರೆ ಸಿಡಿಮಿಡಿಗೊಳ್ಳುತ್ತಾರೆ ಎಂಬ ವಿಷಾದದ ಮಾತುಗಳು ಕೇಳಿಬರುತ್ತಿವೆ.

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ ಮೋಸದಿಂದ ಹಳ್ಳಿಗಾಡಿನ ಮಣ್ಣಿನ ಮಕ್ಕಳನ್ನು ಕಾಪಾಡಬೇಕಿದೆ. ಹಳ್ಳಿಗಾಡಿನ ಮಕ್ಕಳಿಗೆ ನ್ಯಾಯವಾಗಿ ಸಿಗಬೇಕಾದ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಮೀಸಲಾತಿ ಪಟ್ಟಣಿಗರ ಪಾಲಾಗುತ್ತಿರುವುದನ್ನು ತಡೆಯಬೇಕಾಗಿದೆ. ಅವೈಜ್ಞಾನಿಕ ಮತ್ತು ನೈಸರ್ಗಿಕ ನ್ಯಾಯ ತತ್ವ ವಿರೋಧಿ ಗ್ರಾಮೀಣ ಮೀಸಲಾತಿ ಹಾಗೂ ಕನ್ನಡ ಮಾಧ್ಯಮ ಮೀಸಲಾತಿ ಹಳ್ಳಿಗಳ ಮಕ್ಕಳನ್ನು ಹತಾಶರನ್ನಾಗಿಸುತ್ತಿದೆ. ಕನ್ನಡ ಶಾಲೆಗಳಲ್ಲಿ ಕಲಿತವರು-ಕಲಿಯುವವರು ಇಂಗ್ಲಿಷ್ ಮಾಧ್ಯಮದ ಬಡಿವಾರದೆದುರು ಮಂಕಾಗದಂತೆ ಸರಕಾರ ನಡೆಸುವವರು ನಿಗಾ ವಹಿಸಬೇಕಿದೆ.

ಈಗಿನ ಗ್ರಾಮೀಣ ಮೀಸಲಾತಿ ಮತ್ತು ಕನ್ನಡ ಮಾಧ್ಯಮ ಮೀಸಲಾತಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿದರೆ ವಿದ್ಯಾರ್ಥಿ ಮತ್ತು ಪಾಲಕರನ್ನು ಕನ್ನಡ ಮಾಧ್ಯಮದತ್ತ-ಹಳ್ಳಿ ಶಾಲೆಗಳತ್ತ ಸೆಳೆಯಲು ಒಂದಿಷ್ಟು ಅನಕೂಲ ಆಗಬಹುದೆನ್ನಲಾಗಿದೆ. ಸರಕಾರಿ ಶಾಲೆಗಳಲ್ಲಿ ವಿಶ್ವಾಸಾರ್ಹತೆ, ಚೈತನ್ಯ, ಹುಮ್ಮಸ್ಸು ಇಲ್ಲದಿದ್ದರೆ ಎಷ್ಟೇ ಆರ್ಥಿಕ ಅಡಚಣೆಯಿದ್ದರೂ ಸಾಲ-ಸೂಲ ಮಾಡಿಯಾದರೂ ಪಾಲಕರು ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಹಾತೊರೆಯುತ್ತಾರೆ ಎಂಬ ವಾಸ್ತವ ಪ್ರಭುತ್ವದ ಪಂಡಿತರಿಗೆ ಅರ್ಥವಾಗಬೇಕಿದೆ. ಕಾನೂನಿನ ತೊಡಕಿನಿಂದಾಗಿ ಕನ್ನಡವನ್ನು ಕಡ್ಡಾಯವಾಗಿ ಶಿಕ್ಷಣ ಮಾಧ್ಯಮ ಮಾಡಲು ಸಾಧ್ಯವಾಗದಿರಬಹುದು. ಆದರೆ ಕನ್ನಡದಲ್ಲಿ ಕಲಿಯುವವರಿಗೆ ಪ್ರೋತ್ಸಾಹ-ಪ್ರಾಶಸ್ತ್ಯ ನೀಡಲು ಅಡ್ಡಿಯೇನಿಲ್ಲ. ಕನ್ನಡ ಮಾಧ್ಯಮ ಮೀಸಲಾತಿ ಮತ್ತು ಗ್ರಾಮೀಣ ಮೀಸಲಾತಿ ಅರ್ಹರಿಗೆ ಅನುಕೂಲಕರವಾಗಿ ಮಾರ್ಪಡಿಸುವುದು ಈಗಿನ ತುರ್ತಾಗಿದೆ.

images 17 2

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಏಳು ವರ್ಷಗಳ ವ್ಯಾಸಂಗದ ಬದಲಿಗೆ ಎಸ್ಎಸ್ಎಲ್ಸಿ ಕನ್ನಡ ಮಾಧ್ಯಮದಲ್ಲಿ ಮುಗಿಸಿದವರಿಗೆ ‘ಕನ್ನಡ ಮಾಧ್ಯಮ’ ಮೀಸಲಾತಿ ಸಿಗುವಂತಾಗಬೇಕು. ಕಲಿತ ಶಾಲೆ ಗ್ರಾಮೀಣ ಪ್ರದೇಶದಲ್ಲಿ ಇರಬೇಕೆಂಬ ನಿಯಮದ ಬದಲಿಸಿ ವಿದ್ಯಾರ್ಥಿ/ನಿ ಮತ್ತವರ ಪೋಷಕರ ಮೂಲ ಹಳ್ಳಿಯಾಗಬೇಕು ಎಂಬ ಷರತ್ತು ‘ಗ್ರಾಮೀಣ ಮೀಸಲಾತಿ’ಗೆ ನಿಗದಿಸಬೇಕು. ತಾತ್ಕಾಲಿಕ ವಸತಿಗಿಂತ ಮೂಲ ನೆಲೆಗೆ ಪ್ರಾಮುಖ್ಯತೆ ಸಿಗಬೇಕು. ಇದರಿಂದ ಶಾಲೆಯ ಕಟ್ಟಡವಿರುವ ಸ್ಥಳ(ಗ್ರಾಮೀಣ)ದ ನೆಪದಿಂದ ಗ್ರಾಮೀಣ ಮೀಸಲಾತಿ ಲಪಟಾಯಿಸುವವರಿಗೆ ಕಡಿವಾಣ ಬೀಳುತ್ತದೆ. ಸಾಮಾಜಿಕ-ಶೈಕ್ಷಣಿಕ-ಆರ್ಥಿಕವಾಗಿ ಹಿಂದುಳಿವ ಗ್ರಾಮೀಣ ಭಾಗದ ಅರ್ಹರಿಗೆ ವೈದ್ಯಕೀಯ, ಇಂಜಿನಿಯರಿಂಗ್ ಮುಂತಾದ ವೃತ್ತಿಪರ ಕೋರ್ಸ್ ಸೇರ್ಪಡೆ ಮತ್ತು ಸರಕಾರಿ ಉದ್ಯೋಗ ನೇಮಕಾತಿಯಲ್ಲಿ ಆಗುತ್ತಿರುವ ವಂಚನೆ ತಪ್ಪುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿಯುವ ಹೊರನಾಡು ಕನ್ನಡಿಗರಿಗೂ ಈ ಮೀಸಲಾತಿ ಸಿಗುವಂತಾಗಬೇಕು. ರಾಜ್ಯ ಕೋಟಾದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಬರೆಯಲು ಕನಿಷ್ಠ ಏಳು ವರ್ಷ ಕರ್ನಾಟಕದಲ್ಲಿ ಕಲಿತಿರಬೇಕೆಂಬ ನಿಯಮದಿಂದಲೂ ಹೊರನಾಡು ಕನ್ನಡಿಗರಿಗೆ ವಿನಾಯತಿ ಕೊಡಬೇಕು. ಆಗ ಗ್ರಾಮೀಣ ಮೀಸಲಾತಿ ಮತ್ತು ಕನ್ನಡ ಮಾಧ್ಯಮ ಮೀಸಲಾತಿಗೆ ಒಂದು ಅರ್ಥ ಬರಬಹುದು. 

ಗ್ರಾಮೀಣ ಮೀಸಲಾತಿ ಮತ್ತು ಕನ್ನಡ ಮಾಧ್ಯಮ ಮೀಸಲಾತಿಯ ಮೋಸ-ವಂಚನೆ ಡಿ.ಕೆ. ಶಿವಕುಮಾರ್ ಅವರ ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೀಸಲಾತಿಯ ಈ ನ್ಯೂನತೆಗಳ ಸರಿಪಡಿಸಲು ಇಚ್ಛಾಶಕ್ತಿ ತೋರಬೇಕಿದೆ. ಈ ಎರಡೂ ಮೀಸಲಾತಿ ಜಾರಿಗೆ ಬಂದಿದ್ದು ಮಧು ತಂದೆ ಬಂಗಾರಪ್ಪರ ಒತ್ತಾಸೆಯಿಂದ. ಆಗವರು ಮುಖ್ಯಮಂತ್ರಿಯಾಗಿದ್ದರು. ಗ್ರಾಮೀಣ ಬಡ-ಅಸಹಾಯಕ ವಿದ್ಯಾರ್ಥಿ/ನಿಯರು ಶಿಕ್ಷಣ-ಉದ್ಯೋಗ ಪಡೆಯುವಿಕೆಯಲ್ಲಿ ಪಟ್ಟಣದ ಉಳ್ಳವರ ಮಕ್ಕಳೊಂದಿಗಿನ ಪೈಪೋಟಿಯಲ್ಲಿ ಮುಗ್ಗರಿಸಬಾರದು, ಹಿಂದುಳಿಯಬಾರದೆಂಬ ಕಳಕಳಿ-ಕಾಳಜಿಯೇನೋ ಬಂಗಾರಪ್ಪರಲ್ಲಿತ್ತು. ಆದರೆ ಬಂಗಾರಪ್ಪ ಅಧಿಕಾರಶಾಹಿ ರೂಪಿಸಿದ ಮೀಸಲಾತಿ ನಿಯಮಗಳ ಸಾಧಕ-ಬಾಧಕಗಳತ್ತ ಗಮನ ಹರಿಸಿದಂತಿಲ್ಲ. ಬಂಗಾರಪ್ಪರ ಆಶಯ ಮತ್ತು ಈ ಮೀಸಲಾತಿ ಅನುಷ್ಠಾನದಲ್ಲಾಗಿರುವ ಅಧ್ವಾನ ಅವರ ಮಗ-ಶಿಕ್ಷಣ ಮಂತ್ರಿ ಮಧು ಬಂಗಾರಪ್ಪರಿಗಾದರೂ ಅರ್ಥವಾದೀತೆ, ಹಳ್ಳಿಗಾಡಿನ ಮಕ್ಕಳಿಗೆ ನ್ಯಾಯ ಸಿಕ್ಕೀತೆ ಎಂಬ ಜಿಜ್ಞಾಸೆ ನಾಡಿನ ಗ್ರಾಮೀಣ ಕರ್ನಾಟಕದಲ್ಲಿದೆ.

-ನಹುಷ                                                                                                                                                                                                                             

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕನ್ನಡಿಗರ ಉದ್ಯೋಗ ಹಕ್ಕುಗಳ ರಕ್ಷಣೆಗೆ ʼನಮ್ಮ ನಾಡು ನಮ್ಮ ಉದ್ಯೋಗʼ ಚಳವಳಿ ಆರಂಭ

ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗಾವಕಾಶಗಳ ರಕ್ಷಣೆ ಹಾಗೂ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ನ್ಯಾಯಯುತ...

ಚುನಾವಣಾ ಆಯೋಗದಲ್ಲಿ ಗ್ಯಾನೇಶ್‌ ಕುಮಾರ್ ಏಕಪಕ್ಷೀಯ ನಿರ್ಧಾರ; ಅರ್ಜಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್‌

ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಕಾರ್ಯವೈಖರಿಯನ್ನು ಪ್ರಶ್ನಿಸಿ...

ವಿಜಯಪುರ ಪೊಲೀಸರ ಕಾರ್ಯಾಚರಣೆ: ರೂ. 1.07 ಕೋಟಿ ಮೌಲ್ಯದ 537 ಮೊಬೈಲ್ ಪತ್ತೆ!

ಸಾರ್ವಜನಿಕರು ಕಳೆದುಕೊಂಡಿದ್ದ, ಕಳ್ಳತನವಾಗಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ...

ಕಿವೀಸ್ ಬಗ್ಗುಬಡಿದ ಭಾರತ: ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ, 3-0 ಅಂತರದಲ್ಲಿ ಸರಣಿ ಕೈವಶ

ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿರುವ ಹೆನ್ರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 27ರಂದು ನಡೆದ ಆತಿಥೇಯ ನ್ಯೂಜಿಲೆಂಡ್...