2027ರ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್) ರೇಸ್ಗೆ ಈಗಿನಿಂದಲೇ ಕೌಂಟ್ಡೌನ್ ಆರಂಭವಾಗಿದೆ. ವಿಶ್ವಪ್ರಸಿದ್ಧ ಕ್ಯಾನ್ಸ್, ವೆನಿಸ್, ಟೆಲ್ಯುರೈಡ್ ಮತ್ತು ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ (TIFF) ಪ್ರದರ್ಶನಗೊಂಡು ವಿಮರ್ಶಕರ ಮೆಚ್ಚುಗೆ ಪಡೆದ ಹಾಗೂ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿರುವ 9 ಪ್ರಮುಖ ಸಿನಿಮಾಗಳು ಈ ಬಾರಿಯ ಆಸ್ಕರ್ ಅಖಾಡದಲ್ಲಿ ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿವೆ. ಅಂತಾರಾಷ್ಟ್ರೀಯ ಡ್ರಾಮಾಗಳು, ಹಾರರ್, ಡಾಕ್ಯುಮೆಂಟರಿ ಹಾಗೂ ಬಹುಕೋಟಿ ವೆಚ್ಚದ ಬ್ರಹ್ಮಾಂಡ ಸಿನಿಮಾಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಆಸ್ಕರ್ ಅಖಡಾದಲ್ಲಿ ಸದ್ದು ಮಾಡಲಿರುವ ಆ 9 ಸಿನಿಮಾಗಳ ವಿವರ ಇಲ್ಲಿದೆ..
ಲಾವೋ ಬೋಲಾ ನೆಗ್ರಾ (La Bola Negra)
ಜೇವಿಯರ್ ಕಾಲ್ವೊ ಮತ್ತು ಜೇವಿಯರ್ ಆಂಬ್ರೋಸಿ ನಿರ್ದೇಶನದ ಈ ಸ್ಪ್ಯಾನಿಷ್ ಪೀರಿಯಡ್ ಡ್ರಾಮಾ, ಕ್ಯಾನ್ಸ್ನಲ್ಲಿ ‘ಬೆಸ್ಟ್ ಡೈರೆಕ್ಟರ್’ ಹಾಗೂ ಟೊರೊಂಟೊ ಫಿಲ್ಮ್ ಫೆಸ್ಟಿವಲ್ನಲ್ಲಿ ‘ಪೀಪಲ್ಸ್ ಚಾಯ್ಸ್’ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದೆ. ನೆಟ್ಫ್ಲಿಕ್ಸ್ ಬೆಂಬಲಿತ ಈ ಚಿತ್ರವು ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ ವಿಭಾಗದ ಜೊತೆಗೆ ಅತ್ಯುತ್ತಮ ಸಿನಿಮಾ, ನಿರ್ದೇಶನ ಮತ್ತು ಚಿತ್ರಕಥೆ ವಿಭಾಗಗಳಲ್ಲೂ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.
ದಿ ಒಡಿಸ್ಸಿ (The Odyssey)
‘ಒಪೆನ್ಹೈಮರ್’ ಯಶಸ್ಸಿನ ಬಳಿಕ ದಿಗ್ಗಜ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶಿಸಿರುವ ‘ದಿ ಒಡಿಸ್ಸಿ’ ಆಸ್ಕರ್ ರೇಸ್ನಲ್ಲಿ ಮುಂದಿದೆ. ಹೋಮರ್ನ ಗ್ರೀಕ್ ಮಹಾಕಾವ್ಯ ಆಧಾರಿತ ಈ ಚಿತ್ರದಲ್ಲಿ ಮ್ಯಾಟ್ ಡ್ಯಾಮನ್, ಆನ್ ಹ್ಯಾಥ್ವೇ, ಟಾಮ್ ಹಾಲೆಂಡ್ ಮತ್ತು ರಾಬರ್ಟ್ ಪ್ಯಾಟಿನ್ಸನ್ ನಟಿಸಿದ್ದಾರೆ. ಬೃಹತ್ ತಾಂತ್ರಿಕ ಸೌಂದರ್ಯ ಮತ್ತು ಬಾಕ್ಸ್ ಆಫೀಸ್ ಯಶಸ್ಸು ಈ ಚಿತ್ರಕ್ಕೆ ಆಸ್ಕರ್ ಪಟ್ಟಿಯಲ್ಲಿ ಪ್ಲಸ್ ಪಾಯಿಂಟ್ ಆಗಲಿದೆ.
ಫ್ಜೋರ್ಡ್ (Fjord)
ಕ್ರಾಸ್ ಫಿಲ್ಮ್ಗಳ ಖ್ಯಾತಿಯ ಕ್ರಿಸ್ಟಿಯನ್ ಮುಂಜಿಯು ನಿರ್ದೇಶನದ ‘ಫ್ಜೋರ್ಡ್’, ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಅತ್ಯುನ್ನತ ‘ಪಾಮ್ ಡಿ ಓರ್’ ಪ್ರಶಸ್ತಿ ಪಡೆದಿದೆ. ಸೆಬಾಸ್ಟಿಯನ್ ಸ್ಟಾನ್ ಮತ್ತು ರೆನೇಟ್ ರೇನ್ಸ್ವೆ ಮುಖ್ಯಭೂಮಿಕೆಯಲ್ಲಿದ್ದು, ಪ್ರಸಿದ್ಧ ‘ನಿಯಾನ್’ (Neon) ಸಂಸ್ಥೆ ಇದನ್ನು ವಿತರಿಸುತ್ತಿದೆ. ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಹಾಗೂ ನಟನಾ ವಿಭಾಗಗಳಲ್ಲಿ ಈ ಚಿತ್ರಕ್ಕೆ ಭಾರಿ ಬೇಡಿಕೆಯಿದೆ.
ವೈಲ್ಡ್ ಹಾರ್ಸ್ ನೈನ್ (Wild Horse Nine)
‘ತ್ರೀ ಬಿಲ್ಬೋರ್ಡ್ಸ್’ ಖ್ಯಾತಿಯ ಮಾರ್ಟಿನ್ ಮೆಕ್ಡೊನಾಗ್ ಅವರ ನಿರ್ದೇಶನದ ಸಿಐಎ ಅಸಾಸಿನ್ ಡಾರ್ಕ್ ಕಾಮಿಡಿ ಚಿತ್ರವಿದು. ವೆನಿಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಧೂಳೆಬ್ಬಿಸಿದ ಈ ಚಿತ್ರದಲ್ಲಿ ಸ್ಯಾಮ್ ರಾಕ್ವೆಲ್ ಮತ್ತು ಜಾನ್ ಮಲ್ಕೊವಿಚ್ ಅಭಿನಯಿಸಿದ್ದು, ಅತ್ಯುತ್ತಮ ಮೂಲ ಚಿತ್ರಕಥೆ (Best Original Screenplay) ಮತ್ತು ನಟನಾ ವಿಭಾಗಗಳಲ್ಲಿ ನಾಮಿನೇಷನ್ ಪಡೆಯುವ ಸಾಧ್ಯತೆಯಿದೆ.
ದಿ ಇನ್ವೈಟ್ (The Invite)
ಎ24 (A24) ಸಂಸ್ಥೆ ನಿರ್ಮಿಸಿರುವ ಈ ಸಣ್ಣ ಬಜೆಟ್ ಸಿನಿಮಾ, ಒಂದು ಡಿನ್ನರ್ ಪಾರ್ಟಿಯಲ್ಲಿ ನಡೆಯುವ ಸ್ವಾರಸ್ಯಕರ ಘಟನೆಗಳನ್ನು ಆಧರಿಸಿದೆ. ಆಲಿವಿಯಾ ವೈಲ್ಡ್ ನಿರ್ದೇಶಿಸಿ ನಟಿಸಿರುವ ಈ ಚಿತ್ರದಲ್ಲಿ ಪೆನೆಲೋಪ್ ಕ್ರೂಜ್ ಮತ್ತು ಎಡ್ವರ್ಡ್ ನಾರ್ಟನ್ ಅವರ ಅಭಿನಯಕ್ಕೆ ದೊಡ್ಡ ಮಟ್ಟದ ಶ್ಲಾಘನೆ ವ್ಯಕ್ತವಾಗಿದೆ.
ದಿ ಡೆಬ್ಯೂಟ್ (The Debut)
ಜೆಸ್ಸಿ ಐಸೆನ್ಬರ್ಗ್ ನಿರ್ದೇಶನದ ಈ ಕಾಮಿಡಿ-ಡ್ರಾಮಾದಲ್ಲಿ ಪ್ರಸಿದ್ಧ ನಟಿ ಜೂಲಿಯನ್ ಮೂರ್ ಪ್ರಮುಖ ಪಾತ್ರದಲ್ಲಿದ್ದಾರೆ. ನಾಟಕ ರಂಗಕ್ಕೆ ಸೇರುವ ಮಹಿಳೆಯೊಬ್ಬಳ ಜೀವನದ ಬದಲಾವಣೆಯನ್ನು ಈ ಸಿನಿಮಾ ಸುಂದರವಾಗಿ ಬಿಂಬಿಸಿದ್ದು, ಜೂಲಿಯನ್ ಮೂರ್ ಅವರಿಗೆ ಅತ್ಯುತ್ತಮ ನಟಿ (Best Actress) ಪ್ರಶಸ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಪಾಲ್ ಜಿಯಾಮಾಟಿ ಅವರ ನಟನೆಯೂ ಗಮನಸೆಳೆದಿದೆ.
ಯು ಕ್ಯಾನ್ ಸೀ ಎವೆರಿಥಿಂಗ್ (You Can See Everything)
ನೇಥನ್ ಫೀಲ್ಡರ್ ಮತ್ತು ಲ್ಯಾನ್ಸ್ ಒಪ್ಪನ್ಹೈಮ್ ನಿರ್ದೇಶನದ ಮೂರು ಗಂಟೆಗಳ ಈ ಸಾಕ್ಷ್ಯಚಿತ್ರವು ಉದ್ಯಮಿ ಎಲಿಜಬೆತ್ ಹೋಮ್ಸ್ ಜೈಲಿಗೆ ಹೋಗುವ ಮುಂಚಿನ ದಿನಗಳ ಮೇಲಿದೆ. ಶೇಕಡಾ 98ರಷ್ಟು ವಿಮರ್ಶಕರ ಮೆಚ್ಚುಗೆ ಪಡೆದಿರುವ ಈ ಚಿತ್ರವು ಸಾಕ್ಷ್ಯಚಿತ್ರ ವಿಭಾಗವನ್ನು ಮೀರಿ ‘ಅತ್ಯುತ್ತಮ ಸಿನಿಮಾ’ (Best Picture) ರೇಸ್ಗೂ ಧುಮುಕಿದೆ.
ಆಬ್ಸೆಷನ್ (Obsession)
ಕೇವಲ 7.5 ಲಕ್ಷ ಡಾಲರ್ ಬಜೆಟ್ನಲ್ಲಿ ನಿರ್ಮಾಣವಾಗಿ ಜಗತ್ತಿನಾದ್ಯಂತ 500 ಮಿಲಿಯನ್ ಡಾಲರ್ಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆದಿರುವ ಹಾರರ್ ಚಿತ್ರವಿದು. ಕರಿ ಬಾರ್ಕರ್ ನಿರ್ದೇಶನದ ಈ ಚಿತ್ರದ ನಾಯಕಿ ಇಂಡೆ ನಾವರೆಟೆ ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ‘ಆಸ್ಕರ್ ಅತ್ಯುತ್ತಮ ನಟಿ’ ರೇಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’: ಪುರಾಣ, ಅಸ್ತಿತ್ವ ಮತ್ತು ಸಿನೆಮಾದ ಹೊಸ ಭಾಷೆ
ದಿ ಸೋಶಿಯಲ್ ರೆಕನಿಂಗ್ (The Social Reckoning)
ಆರನ್ ಸೊರ್ಕಿನ್ ಬರೆದು ನಿರ್ದೇಶಿಸಿರುವ ಈ ಚಿತ್ರವು 2010ರ ಸೂಪರ್ ಹಿಟ್ ‘ದಿ ಸೋಶಿಯಲ್ ನೆಟ್ವರ್ಕ್’ ಚಿತ್ರದ ಮುಂದುವರಿದ ಭಾಗವಾಗಿದೆ. ಮೈಕಿ ಮ್ಯಾಡಿಸನ್, ಜೆರೆಮಿ ಸ್ಟ್ರಾಂಗ್ ಮತ್ತು ಜೆರೆಮಿ ಅಲೆನ್ ವೈಟ್ ಅವರಂತಹ ದಿಗ್ಗಜ ನಟರ ದಂಡೇ ಇಲ್ಲಿದ್ದು, ಅತ್ಯುತ್ತಮ ಮೂಲ ಚಿತ್ರಕಥೆ ಹಾಗೂ ನಟನಾ ವಿಭಾಗಗಳಲ್ಲಿ ಮುಂಚೂಣಿಯಲ್ಲಿದೆ.
2027ರ ಆಸ್ಕರ್ ರೇಸ್ ಸದ್ಯಕ್ಕೆ ತೀವ್ರ ಕುತೂಹಲ ಕೆರಳಿಸಿದ್ದು, ಬೃಹತ್ ಬಜೆಟ್ನ ‘ದಿ ಒಡಿಸ್ಸಿ’ಯಿಂದ ಹಿಡಿದು ‘ಲಾವೋ ಬೋಲಾ ನೆಗ್ರಾ’ ಮತ್ತು ‘ಫ್ಜೋರ್ಡ್’ನಂತಹ ಅಂತಾರಾಷ್ಟ್ರೀಯ ಚಿತ್ರಗಳು ಪ್ರಶಸ್ತಿ ಕಿರೀಟಕ್ಕಾಗಿ ಸೆಣೆಸಾಡಲಿವೆ. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗುವ ಇನ್ನುಳಿದ ಸಿನಿಮಾಗಳು ಹಾಗೂ ಅಕಾಡೆಮಿ ವೋಟರ್ಗಳ ತೀರ್ಪು ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.





