ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನದಿಗಳಲ್ಲಿ ನೀರಿನ ಹರಿವು ಇಳಿಮುಖವಾಗಿದ್ದು, ಲಭ್ಯವಿರುವ ನೀರನ್ನು ಸಂರಕ್ಷಿಸಲು ಬ್ರಿಡ್ಜ್-ಕಮ್-ಬ್ಯಾರೇಜ್‌ಗಳ ಗೇಟ್‌ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಬಂದ್ ಮಾಡುವಂತೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಳೆಯ ಕೊರತೆಯಿಂದ ನೀರಿನ ಲಭ್ಯತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೀರಿನ ಸಂರಕ್ಷಣೆ ಅತ್ಯಗತ್ಯ ಎಂದು ಸಚಿವರು ಹೇಳಿದ್ದಾರೆ. ನದಿಗಳ ಹರಿವು, ಜಲಮಟ್ಟ ಹಾಗೂ ನೀರಿನ ಸಂಗ್ರಹ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಿ, ಅಗತ್ಯವಿರುವ ಕಡೆಗಳಲ್ಲಿ ಬ್ಯಾರೇಜ್‌ಗಳ ಗೇಟ್‌ಗಳನ್ನು ನಿಯಂತ್ರಿತವಾಗಿ ಮುಚ್ಚಿ ನೀರನ್ನು ಉಳಿಸಿಕೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಮತ್ತು ನದಿಗಳ ಹರಿವಿನ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕ ಬಳಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಉಂಟಾಗದಂತೆ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.




