ಬೆಳಗಾವಿ: ಪ್ರಸಕ್ತ 2026-27ನೇ ಸಾಲಿನ ಕಬ್ಬು ಖರೀದಿ ದರವನ್ನು ಪರಿಷ್ಕರಿಸಿ ಪ್ರತಿ ಟನ್‌ಗೆ ₹4,500 ನಿಗದಿಪಡಿಸುವಂತೆ ರಾಜ್ಯ ರೈತ ಸಂಘಟನೆಗಳು ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ (ರಿ.) ಗುಡಗುಂಟಿ ಶುಗರ್ಸ್‌ಗೆ ಮನವಿ ಸಲ್ಲಿಸಿ. ರೈತರಿಗೆ ಬೇಡಿಕೆ ನೀಡಲು ನಾಲ್ಕು ದಿನಗಳ ಗಡುವು ನೀಡಿರುವ ಸಂಘಟನೆಗಳು, ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ.
ಬಾಗಲಕೋಟೆ ಜಿಲ್ಲೆಯ ಕಬ್ಬಿನ ಇಳುವಂ ಪ್ರಮಾಣ ಕಡಿಮೆಯಾದರೂ ಅಲ್ಲಿನ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಮೊದಲು ಕಂತಾಗಿ ₹3,800 ಘೋಷಿಸಿವೆ. ಜೊತೆಗೆ, ಸಕ್ಕರೆ ಮಾರಾಟದಿಂದ ಬರುವ ಲಾಭಾಂಶದಲ್ಲಿ ಶೇ.75ರಷ್ಟು ಪಾಲನ್ನು ರೈತರಿಗೆ ನೀಡುವುದಾಗಿ ತಿಳಿಸಿವೆ.
ಇದೇ ಮಾದರಿಯಲ್ಲಿ ಬೆಳಗಾವಿ ಜಿಲ್ಲೆಯ ಗುಡಗುಂಟಿ ಶುಗರ್ಸ್‌ನ ಶಿವಸಾಗರ ಕಾರ್ಖಾನೆಯೂ ಮೊದಲ ಕಂತಾಗಿ ಟನ್‌ಗೆ ₹3,800 ನೀಡುತ್ತಿದೆ. ಸಕ್ಕರೆಯ ಮಾರಾಟ ದರ ಪ್ರತಿ ಕ್ವಿಂಟಾಲ್‌ಗೆ ₹5,000 ದಾಟಿದರೆ ಲಾಭದಲ್ಲಿ ಶೇ.70ರಷ್ಟು ಪಾಲನ್ನು ರೈತರಿಗೆ ನೀಡಲಾಗುತ್ತದೆ. ಆದರೂ ಒಟ್ಟಾರೆ ಪ್ರತಿ ಟನ್ ಕಬ್ಬಿಗೆ ₹4,500 ದೊರೆಯುವಂತೆ ನಿಗದಿಪಡಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ರೈತರ ಬೇಡಿಕೆಯನ್ನು ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷಿಸಿದರೆ, ಹೆಚ್ಚಿನ ದರ ನೀಡುವ ಇತರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುವಂತೆ ರೈತರಿಗೆ ಸಂಘಟನೆ ಸೂಚಿಸಿದೆ.
ನ.14ರಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಸಂಘಟನೆಗಳು, ನಾಲ್ಕು ದಿನಗಳಲ್ಲಿ ಪರಿಷ್ಕೃತ ದರ ಕುರಿತು ಸೂಕ್ತ ನಿರ್ಧಾರ ಪ್ರಕಟಿಸುವಂತೆ ಗಡುವು ನೀಡಿವೆ. ನಿಗದಿತ ಅವಧಿಯಲ್ಲಿ ಸ್ಪಂದನೆ ದೊರೆಯದಿದ್ದರೆ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಸುರೇಶ ಮಲ್ಲನಗೌಡ ಪಾಟೀಲ, ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಎಸ್.ಬಿ. ಸಿನ್ನಾಳ, ಶಂಕರಗೌಡ ಹೊಸಗೌಡರ, ಸಾಸಪ್ಪ ನಾವಿ, ಶಂಕರಗೌಡ ಬಿ. ಪಾಟೀಲ, ಯಲ್ಲಪ್ಪ ಕುಲಗೋಡ, ಬಿ.ಎಸ್. ನಾಯಕ್, ಶಿವನಗೌಡ ಪಾಟೀಲ, ಅರುಣ ರೆಡ್ಡಿ, ಗೋಪಾಲ ಲಕ್ಷಣಿ ಹಾಗೂ ಸದಾಶಿವಗೌಡ ಪಾಟೀಲ ಇದ್ದರು.



