ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ವಾರ್ಷಿಕ ಅಖಿಲ ಭಾರತ ಪ್ರಾಂತ ಪ್ರಚಾರಕರ ಸಭೆ ಶುಕ್ರವಾರ ನಗರದಲ್ಲಿ ಆರಂಭಗೊಂಡಿದ್ದು, ದೇಶದ ವಿವಿಧ ಭಾಗಗಳ ಸಂಘಟನಾ ಚಟುವಟಿಕೆಗಳ ಪರಿಶೀಲನೆ ಹಾಗೂ ಮುಂದಿನ ವರ್ಷದ ಕಾರ್ಯತಂತ್ರ ರೂಪಿಸುವ ಕುರಿತು ಮಹತ್ವದ ಚರ್ಚೆಗಳು ನಡೆಯುತ್ತಿವೆ.
ಸಭೆಯಲ್ಲಿ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹ-ಸರಕಾರ್ಯವಾಹರು, ಅಖಿಲ ಭಾರತ ವಿಭಾಗಗಳ ಮುಖ್ಯಸ್ಥರು, ಕಾರ್ಯಕಾರಿ ಸಮಿತಿ ಸದಸ್ಯರು, ಕ್ಷೇತ್ರ ಹಾಗೂ ಸಹ-ಕ್ಷೇತ್ರ ಪ್ರಚಾರಕರು, ದೇಶದ 46 ಪ್ರಾಂತಗಳ ಪ್ರಾಂತ ಪ್ರಚಾರಕರು ಮತ್ತು ಸಹ-ಪ್ರಚಾರಕರು, ಸಂಘ ಪ್ರೇರಿತ ವಿವಿಧ ಸಂಘಟನೆಗಳ ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಿದ್ದಾರೆ.
ದೇಶಾದ್ಯಂತ ಸಂಘದ ಶಾಖೆಗಳ ವಿಸ್ತರಣೆ, ಶತಮಾನೋತ್ಸವ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ, ಸಂಘಟನೆಯ ತಳಮಟ್ಟದ ಬಲವರ್ಧನೆ ಹಾಗೂ ಮುಂದಿನ ದಿನಗಳ ಸಂಘಟನಾ ಆದ್ಯತೆಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಲಿದೆ.
ಕಳೆದ ಮಾರ್ಚ್ ನಂತರ ವಿವಿಧ ರಾಜ್ಯಗಳಲ್ಲಿ ನಡೆದ ತರಬೇತಿ ಶಿಬಿರಗಳ ವರದಿಗಳನ್ನು ಪರಿಶೀಲಿಸುವುದರ ಜೊತೆಗೆ, ಶಾಖಾ ಮಟ್ಟದಲ್ಲಿ ರೂಪಿಸಿರುವ ಕಾರ್ಯಯೋಜನೆಗಳ ಅನುಷ್ಠಾನದ ಮೌಲ್ಯಮಾಪನವೂ ನಡೆಯುತ್ತಿದೆ. ಶತಮಾನೋತ್ಸವ ವರ್ಷದಲ್ಲಿ ಸಮಾಜದ ವಿವಿಧ ವರ್ಗಗಳನ್ನು ತಲುಪುವ ಕಾರ್ಯಕ್ರಮಗಳ ರೂಪುರೇಷೆಗೂ ಸಭೆಯಲ್ಲಿ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.
ಮೂರು ದಿನಗಳ ಈ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಮುಂದಿನ ಒಂದು ವರ್ಷದ ಸಂಘಟನಾ ಕಾರ್ಯಚಟುವಟಿಕೆಗಳಿಗೆ ದಿಕ್ಕೂಚಿಯಾಗಲಿವೆ ಎಂದು ಸಂಘದ ಮೂಲಗಳು ತಿಳಿಸಿವೆ.




