ಗೃಹಲಕ್ಷ್ಮೀ ಯೋಜನೆ ಹಣದಲ್ಲಿ ತನಗೂ ಪಾಲು ನೀಡುವಂತೆ ಒತ್ತಾಯಿಸಿ, ಹಣ ಕೊಡಲು ನಿರಾಕರಿಸಿದ ಸ್ವಂತ ಅಜ್ಜಿಯನ್ನೇ ಮೊಮ್ಮಗ ಕೊಲೆ ಮಾಡಿರುವ ಕೃತ್ಯಕಾರಿ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಅರಳಿಕಟ್ಟಿ ಗ್ರಾಮದ ಹಮ್ಮವ್ವ ಬಾಳಪ್ಪ ಸನದಿ (78) ಅವರು ನ.10ರಂದು ಪಾಶ್ಚಾಪುರ ಸಂತೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದರು. ಆದರೆ ಮನೆಗೆ ಬರಲಿಲ್ಲ. ನ.15ರಂದು ಜಿನರಾಳ ಗ್ರಾಮದ ಹದ್ದಿಯಲ್ಲಿರುವ ಘಟಪ್ರಭಾ ನದಿ ಡ್ಯಾಂ ಹಿನ್ನೀರಿನಲ್ಲಿ ಎರಡು ಗೋಣಿ ಚೀಲಗಳಲ್ಲಿ ಕಲ್ಲುಗಳನ್ನು ಕಟ್ಟಿ ಎಸೆದ ಸ್ಥಿತಿಯಲ್ಲಿ ಅವರ ಶವ ಒಪ್ಪಿಕೊಂಡಿತ್ತು.
ಈ ಕುರಿತು ಮೃತ ಮಗಳು ನೀಡಿದ ದೂರಿನ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ಮೃತಳ ಸ್ವಂತ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿ (20) ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಕೊಲೆ ಮಾಡಿದ ಬಳಿಕ ಶವವನ್ನು ಗುಡ್ಡದಲ್ಲೇ ಬಿಟ್ಟು ಪಾಶ್ಚಾಪುರಕ್ಕೆ ತೆರಳಿ ಎರಡು ಗೋಣಿ ಚೀಲಗಳನ್ನು ತಂದಿದ್ದಾನೆ. ಅಜ್ಜಿಯ ಬಳಿ ₹2,300 ನಗದು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ರಾತ್ರಿ ಬೈಕ್‌ನಲ್ಲಿ ಶವ ಸಾಗಿಸಿ ಜಿನರಾಳ ಸಮೀಪದ ಘಟಪ್ರಭಾ ನದಿ ಡ್ಯಾಂ ಹಿನ್ನೀರಿಗೆ ಎಸೆದಿದ್ದಾನೆ. ಜೊತೆಗೆ, ಅಜ್ಜಿಯ ಕೊರಳಲ್ಲಿದ್ದ ಎರಡು ಬಂಗಾರದ ಸರಗಳನ್ನು ಕಿತ್ತುಕೊಂಡು, ಸಾಕ್ಷ್ಯನಾಶಪಡಿಸುವ ಉದ್ದೇಶದಿಂದ ಗೋಣಿ ಚೀಲಗಳಿಗೆ ದೊಡ್ಡ ಕಲ್ಲುಗಳನ್ನು ಕಟ್ಟಿ ನೀರಿಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಗಂಭೀರತೆ ಪರಿಗಣಿಸಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಗೋಕಾಕ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಯಮಕನಮರಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಜಾವೀದ್ ಎಫ್. ಮುಶಾಪುರಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


