ಗೂಗಲ್ ಡ್ರೈವ್‌ನಲ್ಲಿ (Google Drive) ಅಪ್ರಾಪ್ತ ಬಾಲಕಿಯರು, ತನ್ನ ಸಂಬಂಧದ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಸಂಗ್ರಹಿಸಿಟ್ಟಿದ್ದ ಉತ್ತರ ಪ್ರದೇಶದ ಕಾನಪುರದ ಯುವಕನೊಬ್ಬನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಗೂಗಲ್ ಸಂಸ್ಥೆಯೇ ದೂರು ನೀಡಿದ ಹಿನ್ನೆಲೆ ಈ ಬಂಧನ ನಡೆದಿದೆ. ಈ ಘಟನೆ ಬೆನ್ನಲ್ಲೇ ಗೂಗಲ್ ನಮ್ಮ ವೈಯಕ್ತಿಕ ಡೇಟಾ ಸ್ಕ್ಯಾನ್ ಮಾಡುತ್ತಾ ಎಂಬ ಚರ್ಚೆಯು ನೆಟ್ಟಿಗರಲ್ಲಿ ತೀವ್ರವಾಗಿದೆ. ಹಲವು ನೆಟ್ಟಿಗರು ಖಾಸಗಿತನದ ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಆರೋಪಿ ಕಳೆದ ಮೂರು ತಿಂಗಳುಗಳಿಂದ ತನ್ನ 14 ಮತ್ತು 8 ವರ್ಷದ ಸೋದರಸಂಬಂಧಿ ಬಾಲಕಿಯರು ಹಾಗೂ ನೆರೆಹೊರೆಯ ಅಪ್ರಾಪ್ತರ ಅಶ್ಲೀಲ ವಿಡಿಯೋ ಮಾಡಿ ಅದನ್ನು ತನ್ನ ಗೂಗಲ್ ಡ್ರೈವ್‌ನಲ್ಲಿ ಇಟ್ಟುಕೊಂಡಿದ್ದ. ಗೂಗಲ್ ಸಂಸ್ಥೆಯು ತನ್ನ ಸ್ವಯಂಚಾಲಿತ ತಂತ್ರಜ್ಞಾನದ ಮೂಲಕ ಈ ಕಂಟೆಂಟ್ ಅನ್ನು ಪತ್ತೆಹಚ್ಚಿ, ಭಾರತೀಯ ತನಿಖಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸಣ್ಣ ವಯಸ್ಸಿನ ಬೆತ್ತಲೆ ಚಿತ್ರ ಹಾಕಿದ್ದಕ್ಕೆ ಜಿಮೇಲ್ ನಿರ್ಬಂಧ: ಗೂಗಲ್‌ಗೆ ಗುಜರಾತ್ ಹೈಕೋರ್ಟ್ ನೋಟಿಸ್
ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿರುವ ಗೂಗಲ್, ತನ್ನ ಸರ್ವರ್‌ನಲ್ಲಿ ಇಂತಹ ಮಕ್ಕಳ ಲೈಂಗಿಕ ಶೋಷಣೆಯ ಕಂಟೆಂಟ್ (CSAM – Child Sexual Abuse Material) ಅಪ್‌ಲೋಡ್ ಆಗಿರುವುದನ್ನು ಸ್ವಯಂಚಾಲಿತ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಿದೆ. ಕೂಡಲೇ ಗೂಗಲ್ ಸಂಸ್ಥೆಯು ಭಾರತದ ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ (NCRP) ಮೂಲಕ ದೂರು ನೀಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗೂಗಲ್ ಸಂಸ್ಥೆಯು ಆರೋಪಿಯ ಇ-ಮೇಲ್ ಐಡಿ, ಮೊಬೈಲ್‌ನ IMEI ಸಂಖ್ಯೆ ಹಾಗೂ IP ಅಡ್ರೆಸ್ ಸೇರಿದಂತೆ ಅಗತ್ಯ ತಾಂತ್ರಿಕ ವಿವರಗಳನ್ನು ಪೊಲೀಸರಿಗೆ ಒದಗಿಸಿತ್ತು. ದರ ಆಧಾರದ ಮೇಲೆ ಕಾನಪುರದ ಚಮನ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಿ, ಆತನಿಂದ 15 ಆಕ್ಷೇಪಾರ್ಹ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಡಿಯೋಗಳನ್ನು ಆತ ಬೇರೆ ಯಾರಿಗಾದರೂ ಶೇರ್ ಮಾಡಿದ್ದನೇ ಎಂಬ ಬಗ್ಗೆ ಸದ್ಯ ತನಿಖೆ ನಡೆಯುತ್ತಿದೆ.
ನೆಟ್ಟಿಗರಲ್ಲಿ ಮೂಡಿದ ‘ಖಾಸಗಿತನ’ದ ಭೀತಿ!
ಈ ಎಲ್ಲ ಬೆಳವಣಿಗೆ ನಡುವೆ ನೆಟ್ಟಿಗರಲ್ಲಿ ಖಾಸಗಿತನದ ಭೀತಿ ಉಂಟಾಗಿದೆ. ಈ ಕೃತ್ಯ ಎಸಗಿದಾತನಿಗೆ ಶಿಕ್ಷೆಯಾಗಬೇಕು ಎಂಬುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದಿದ್ದರೂ, ಗೂಗಲ್‌ನ ಈ ಕ್ರಮವು ಇಂಟರ್ನೆಟ್ ಬಳಕೆದಾರರಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ನಮ್ಮ ವೈಯಕ್ತಿಕ ಫೈಲ್‌ಗಳನ್ನು ಗೂಗಲ್ ಗಮನಿಸುತ್ತಿದೆಯೇ? ಎಂದು ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ. ಅಪರಾಧ ತಡೆಗೆ ತಂತ್ರಜ್ಞಾನದ ನೆರವು ಅತ್ಯಗತ್ಯವಾದರೂ, ಸುರಕ್ಷತೆ ಮತ್ತು ಖಾಸಗಿತನದ ನಡುವಿನ ಈ ತೆಳುವಾದ ಗೆರೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ನಿತ್ಯ ಬಳಸುವ ವಾಟ್ಸಾಪ್‌ನಲ್ಲಿ ನಿಮಗೆ ಗೊತ್ತಿರದ ಪ್ರಮುಖ ಫೀಚರ್‌ಗಳು
ಸಾಮಾನ್ಯವಾಗಿ ಗೂಗಲ್ ಡ್ರೈವ್ ಅನ್ನು ಬಳಸುವುದು ನಮ್ಮ ಖಾಸಗಿ ಫೋಟೋ, ಡಾಕ್ಯುಮೆಂಟ್‌ಗಳನ್ನು ಇಟ್ಟುಕೊಳ್ಳಲು. ಅಲ್ಲಿರುವ ಫೈಲ್‌ಗಳನ್ನು ಗೂಗಲ್ ಸ್ಕ್ಯಾನ್ ಮಾಡುತ್ತದೆ ಎಂದರೆ ನಮ್ಮ ವೈಯಕ್ತಿಕ ಬದುಕಿಗೆ ರಕ್ಷಣೆ ಎಲ್ಲಿದೆ ಎಂಬುದು ನೆಟ್ಟಿಗರ ವಾದ.
ಹಾಗೆಯೇ ಈ ಹಿಂದೆ ವಿದೇಶಗಳಲ್ಲಿ ಹಾಗೂ ಭಾರತದಲ್ಲೇ ಕೆಲವು ಪ್ರಕರಣಗಳಲ್ಲಿ, ಪೋಷಕರು ತಮ್ಮದೇ ಸಣ್ಣ ಮಕ್ಕಳ ಸಹಜವಾದ (ಉದಾಹರಣೆಗೆ ಸ್ನಾನ ಮಾಡುವಾಗ ಅಥವಾ ವೈದ್ಯಕೀಯ ತಪಾಸಣೆಯ) ಫೋಟೋಗಳನ್ನು ಡ್ರೈವ್‌ನಲ್ಲಿ ಇಟ್ಟಾಗಲೂ ಗೂಗಲ್ ಅದನ್ನು ‘ಚೈಲ್ಡ್ ಅಬ್ಯೂಸ್’ ಎಂದು ತಪ್ಪಾಗಿ ಭಾವಿಸಿ ಖಾತೆಗಳನ್ನು ಶಾಶ್ವತವಾಗಿ ಬ್ಲಾಕ್ ಮಾಡಿದ ಉದಾಹರಣೆಗಳಿವೆ. ಇದರಿಂದಾಗಿ ಯಾವುದೇ ತಪ್ಪಿಲ್ಲದೆ ಅಮಾಯಕರು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ ಎಂಬ ಆತಂಕವನ್ನೂ ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಆತಂಕದ ಬಗ್ಗೆ ಗೂಗಲ್ ಈ ಹಿಂದೆಯೇ ಸ್ಪಷ್ಟಣೆ ನೀಡಿತ್ತು. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗತಿಕ ಕಾನೂನುಗಳ ಅನ್ವಯ ಗೂಗಲ್ ಸ್ವಯಂಚಾಲಿತ ಇಮೇಜ್ ಮ್ಯಾಚಿಂಗ್ ತಂತ್ರಜ್ಞಾನವನ್ನು (PhotoDNA) ಬಳಸುತ್ತದೆ. ಇದು ಕೇವಲ ಮಕ್ಕಳ ಶೋಷಣೆಯ ಅಕ್ರಮ ಕಂಟೆಂಟ್‌ಗಳನ್ನು ಮಾತ್ರ ಗುರುತಿಸುತ್ತದೆಯೇ ಹೊರತು ಸಾಮಾನ್ಯ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತರುವುದಿಲ್ಲ ಎಂದು ಗೂಗಲ್ ಈ ಹಿಂದೆ ಹೇಳಿಕೊಂಡಿದೆ. ಆದರೆ ಈ ಯುವಕನ ಬಂಧನ ಸಂಬಂಧ ಗೂಗಲ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.




