ಪತ್ನಿಯ ಚಾರಿತ್ರ್ಯದ ಮೇಲೆ ಶಂಕೆ ವ್ಯಕ್ತಪಡಿಸಿ, ಆರು ವರ್ಷದ ಮಗುವಿನ ಕಣ್ಣೆದುರೇ ಕೊಡಲಿಯಿಂದ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಥಣಿ ತಾಲೂಕಿನ ಖವಟಗೊಪ್ಪ ಗ್ರಾಮದಲ್ಲಿ ಜೂನ್ 28ರಂದು ಈ ಘಟನೆ ನಡೆದಿದ್ದು, ಹತ್ಯೆಯಾದ ಮಹಿಳೆಯನ್ನು ಶೋಭಾ ಪರಗೊಂಡ ಸಾರವಾಡ (35) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಆಕೆಯ ಪತಿ ಪರಗೊಂಡ ಸಂಗಪ್ಪ ಸಾರವಾಡ (35)ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಜೂನ್ 27ರ ರಾತ್ರಿ ದಂಪತಿ ನಡುವೆ ಪತ್ನಿಯ ಚಾರಿತ್ರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜಗಳ ನಡೆದಿತ್ತು. ಜಗಳ ತೀವ್ರಗೊಂಡ ವೇಳೆ ಆರೋಪಿ ಕೊಡಲಿಯಿಂದ ಹಲ್ಲೆ ನಡೆಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪತ್ನಿ ಶೋಭಾ ಅವರು ಸಂಬಂಧಿಕರು ಹಾಗೂ ಕೆಲಸದ ಸ್ಥಳದ ಸಹೋದ್ಯೋಗಿಗಳೊಂದಿಗೆ ಮಾತನಾಡಿದರೂ ಅನುಮಾನ ಪಡುತ್ತಿದ್ದ ಸಂಗಪ್ಪನ ವರ್ತನೆಯಿಂದ ಅವರು ಬೇಸತ್ತಿದ್ದರು. ಇದೇ ವಿಚಾರವಾಗಿ ಎರಡೂ ಕುಟುಂಬಗಳ ಹಿರಿಯರು ಹಲವು ಬಾರಿ ಸಂಗಪ್ಪನಿಗೆ ಬುದ್ಧಿವಾದ ಹೇಳಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಎಸ್‌ಪಿ ಹೇಳಿದರು.
ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಈ ಕೃತ್ಯ ದಂಪತಿಯ ಆರು ವರ್ಷದ ಮಗುವಿನ ಕಣ್ಣೆದುರೇ ನಡೆದಿರುವುದು ಪ್ರಕರಣವನ್ನು ಇನ್ನಷ್ಟು ಮನಕಲಕುವಂತಾಗಿದೆ.



