ಪ್ರತಿ ಟನ್ ಕಬ್ಬಿಗೆ ₹5,500 ದರ ನೀಡಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಇದೀಗ ಹೊಸ ರೂಪ ಪಡೆದುಕೊಂಡಿದೆ. ‘ಖೈದಿ ನಂಬರ್ 5500’ ಘೋಷಣೆಯೊಂದಿಗೆ ರೈತರು ಜೈಲ್ ಭರೋ ಹೋರಾಟಕ್ಕೆ ಮುಂದಾಗಿದ್ದಾರೆ.
ಗುರ್ಲಾಪೂರ ಕ್ರಾಸ್‌ನಿಂದ ಕಬ್ಬೂರು ಗ್ರಾಮದ ಕಡೆಗೆ ಕಬ್ಬು ಬೆಳೆಗಾರರು ಪಾದಯಾತ್ರೆ ಆರಂಭಿಸಿದ್ದು, ರೈತರು ಘೋಷಣೆಗಳನ್ನು ಕೂಗುತ್ತಾ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಇಂದು ರಾತ್ರಿ ಕಬ್ಬೂರು ಗ್ರಾಮದಲ್ಲಿ ವಾಸ್ತವ್ಯ ಮಾಡಲಿರುವ ರೈತರು, ಮುಂದಿನ ಹೋರಾಟದ ರೂಪುರೇಷೆಗಳನ್ನು ಅಲ್ಲಿಯೇ ನಿರ್ಧರಿಸಲಿದ್ದಾರೆ.
ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ರೈತರು ಹೋರಾಟ ಮುಂದುವರಿಸಿದ್ದು, ಕಬ್ಬು ಬೆಳೆಗಾರರ ಈ ಜೈಲ್ ಭರೋ ಹೋರಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.




