ಅಭಿವೃದ್ಧಿ ಯೋಜನೆಗಳ ನೆಪದಲ್ಲಿ ನಗರದ ಉದ್ಯಾನವನಗಳ ಶೇ 5ರಷ್ಟು ಜಾಗವನ್ನು ಕಾಂಕ್ರೀಟ್ ಆಧಾರಿತ ಮೂಲಸೌಕರ್ಯಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವ ‘ಕರ್ನಾಟಕ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆ–1975’ರ ಪ್ರಸ್ತಾವಿತ ತಿದ್ದುಪಡಿಯನ್ನು ತಕ್ಷಣವೇ ಹಿಂಪಡೆಯುವಂತೆ ಸರ್ಕಾರವನ್ನು ನಗರದ ನಾಗರಿಕರು ಹಾಗೂ ಪರಿಸರ ಸಂಘಟನೆಗಳು ಒಕ್ಕೊರಲಿನಿಂದ ಒತ್ತಾಯಿಸಿವೆ. ಗುರುವಾರ ಲಾಲ್‌ಬಾಗ್ ಸಸ್ಯತೋಟದಲ್ಲಿ ಜಮಾಯಿಸಿದ 200ಕ್ಕೂ ಹೆಚ್ಚು ನಾಗರಿಕರು ಹಾಗೂ 35ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸರ್ಕಾರದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. “5 ಶೇಕಡಾವೂ ಬೇಡ, ಒಂದು ಇಂಚೂ ಬೇಡ; ನಮ್ಮ ಉದ್ಯಾನಗಳನ್ನು ಹಾಗೆಯೇ ಉಳಿಸಿ” ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ, ಉದ್ಯಾನಗಳ ಉಳಿವಿಗಾಗಿ ದನಿ ಎತ್ತಿದರು.
ಈ ಕುರಿತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಸಂಘಟನೆಗಳು ಪ್ರಮುಖ 4 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿವೆ. 1975ರ ಕಾಯ್ದೆಗೆ ಸೂಚಿಸಿರುವ ತಿದ್ದುಪಡಿಯನ್ನು ತಕ್ಷಣವೇ ವಾಪಸ್ ಪಡೆಯಬೇಕು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಅಸ್ತಿತ್ವದಲ್ಲಿರುವ ಉದ್ಯಾನಗಳನ್ನು ಬಳಸುವ ಬದಲು ಪರ್ಯಾಯ ಮಾರ್ಗಗಳನ್ನು ಕಡ್ಡಾಯವಾಗಿ ಹುಡುಕಬೇಕು ಎಂದು ಆಗ್ರಹಿಸಿವೆ. ಅಲ್ಲದೆ, ಹಸಿರು ಪ್ರದೇಶಗಳ ಮೇಲೆ ಪರಿಣಾಮ ಬೀರುವ ಯಾವುದೇ ಯೋಜನೆ ತರುವ ಮುನ್ನ ಪಾರದರ್ಶಕ ಸಾರ್ವಜನಿಕ ಸಮಾಲೋಚನೆ ಕಡ್ಡಾಯಗೊಳಿಸಬೇಕು ಹಾಗೂ ಇಂತಹ ಯೋಜನೆಗಳಿಗೆ ಸಮಗ್ರ ಪರಿಸರ, ಸಾಮಾಜಿಕ ಮತ್ತು ಆರೋಗ್ಯ ಮೌಲ್ಯಮಾಪನ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ನಗರದ ಪರಿಸರ ನಾಶದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕಾನ್ಷಿಯಸ್ ಕಮ್ಯೂನಿಟೀಸ್‌ನ ಸಂಸ್ಥಾಪಕ ಸಂದೀಪ್ ಅನಿರುಧನ್, ಐದು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಶೇ 70ರಷ್ಟಿದ್ದ ಹಸಿರು ಹೊದಿಕೆ ಇಂದು ಶೇ 2–3ಕ್ಕೆ ಕುಸಿದಿರುವುದು ದುರಂತ. ಆರೋಗ್ಯಕರ ನಗರಕ್ಕೆ ಕನಿಷ್ಠ ಶೇ 30 ಹಸಿರು ಹೊದಿಕೆ ಅಗತ್ಯ. ಈ ಕಾಯ್ದೆ ತಿದ್ದುಪಡಿಯು ಬೆಂಗಳೂರನ್ನು ಶವಪೆಟ್ಟಿಗೆಯಲ್ಲಿಟ್ಟು ಹೊಡೆಯುತ್ತಿರುವ ಮತ್ತೊಂದು ಮೊಳೆಯಾಗಿದೆ. ಸರ್ಕಾರ ಪರಿಸರಕ್ಕಿಂತ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿವಿಕ್ (CIVIC) ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ಪ್ರತಿಕ್ರಿಯಿಸಿ, ಉದ್ಯಾನಗಳ ಸಂರಕ್ಷಣಾ ಕಾಯ್ದೆಯ ಮೂಲ ಉದ್ದೇಶವೇ ಉದ್ಯಾನಗಳನ್ನು ‘ಸಂರಕ್ಷಿಸುವುದು’. ಆದರೆ ತಿದ್ದುಪಡಿ ತರುವ ಮೂಲಕ ಆ ಉದ್ದೇಶವನ್ನೇ ಗಾಳಿಗೆ ತೂರುತ್ತಿರುವುದು ವಿಪರ್ಯಾಸ. ರಾಷ್ಟ್ರೀಯ ಮಾನದಂಡಗಳ ಪ್ರಕಾರ 1.4 ಕೋಟಿ ಜನಸಂಖ್ಯೆ ಇರುವ ನಗರಕ್ಕೆ 30,000 ಎಕರೆ ಉದ್ಯಾನಗಳ ಅಗತ್ಯವಿದೆ, ಆದರೆ ಇರುವುದು ಕೇವಲ 3,000 ಎಕರೆ ಮಾತ್ರ. ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆಗಾಗಿ ಲಾಲ್‌ಬಾಗ್‌ನ ಭೂಮಿ ಬಳಸುವ ಕ್ರಮದ ವಿರುದ್ಧ ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಈ ಕಾಯ್ದೆ ತಿದ್ದುಪಡಿ ತರಲಾಗುತ್ತಿದೆ ಎಂದು ಎಚ್ಚರಿಸಿದರು.
ಬೆಂಗಳೂರಿನ 262 ಹಸಿರು ಪ್ರದೇಶಗಳಲ್ಲಿ ನಡೆಸಿದ ಇತ್ತೀಚಿನ ಅಧ್ಯಯನದ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಗ್ರೀನ್‌ಪೀಸ್ ಇಂಡಿಯಾದ ಸೆಲೋಮಿ ಗರ್ನಾಯಕ್, ಉದ್ಯಾನಗಳು ಅವುಗಳ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಸರಾಸರಿ 2.23 ಡಿಗ್ರಿ ಸೆಲ್ಸಿಯಸ್‌ನಷ್ಟು ತಂಪಾಗಿರುತ್ತವೆ. ಈ ತಂಪಾದ ವಾತಾವರಣ ಉದ್ಯಾನದ ಆಚೆಗೂ 347 ಮೀಟರ್‌ವರೆಗೆ ವಿಸ್ತರಿಸುತ್ತದೆ. ಮಳೆನೀರನ್ನು ಹೀರಿಕೊಳ್ಳಲು ಮತ್ತು ಬಿಸಿಲಿನ ತಾಪ ತಗ್ಗಿಸಲು ಉದ್ಯಾನಗಳು ಅತ್ಯಗತ್ಯ. ಸರ್ಕಾರ ಇವುಗಳನ್ನು ಖಾಲಿ ಬಿದ್ದಿರುವ ಲ್ಯಾಂಡ್ ಬ್ಯಾಂಕ್‌ಗಳಂತೆ ನೋಡಬಾರದು ಎಂದರು.
ಬೆಂಗಳೂರು ಎನ್ವಿರಾನ್‌ಮೆಂಟ್ ಫೋರಂನ ಲಿಯಾನ್ ಮಾತನಾಡಿ, ಹಸಿರು ಪ್ರದೇಶಗಳು ಜನರ ಮೂಲಭೂತ ಹಕ್ಕು. ಯಾವುದೇ ಯೋಜನೆ ತರುವ ಮುನ್ನ ಬಿಎಂಪಿಟಿಸಿ (BMPC) ಮೂಲಕ ಸಾರ್ವಜನಿಕರ ಸಮಾಲೋಚನೆ ನಡೆಸದೆ, ಗುತ್ತಿಗೆದಾರರ ಹಿತಾಸಕ್ತಿಗೆ ಕಾನೂನು ಸಡಿಲಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದರು. ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಸ್ಥಾಪಕ ರಾಜ್‌ಕುಮಾರ್ ದುಗ್ಗರ್, ಪರಿಸರ ಹೋರಾಟಗಾರ ದತ್ತಾತ್ರೇಯ ಟಿ. ದೇವರೆ, ಪಿಎನ್‌ಎಲ್‌ಐಟಿಯ (PNLIT) ಆರತಿ ಮನಯ್ ಹಾಗೂ ಮಲ್ಲೇಶ್ವರಂ ನಿವಾಸಿ ರಾಜೀವ್ ಉಲ್ಪೆ ಅವರು ಸಹ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಉದ್ಯಾನವನಗಳನ್ನು ಕಾಂಕ್ರೀಟ್ ರಚನೆಗಳಿಗೆ, ಗುತ್ತಿಗೆಗೆ ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಲಿ ಕೊಡುವುದರಿಂದ 2 ಕೋಟಿಗೂ ಹೆಚ್ಚು ಜನರ ಜೀವನಮಟ್ಟ ಕುಸಿಯಲಿದೆ, ಉದ್ಯಾನಗಳನ್ನು ಉಳಿಸುವುದೇ ನಿಜವಾದ ಸಾರ್ವಜನಿಕ ಹಿತಾಸಕ್ತಿ ಎಂದು ಸ್ಪಷ್ಟಪಡಿಸಿದ್ದಾರೆ.
ಗ್ರೀನ್‌ಪೀಸ್ ಇಂಡಿಯಾ, ಸಿವಿಕ್, ಸಿಟಿಜನ್ಸ್ ಫಾರ್ ಸಿಟಿಜನ್ಸ್, ಬಿ.ಇ.ಎಫ್ ಸೇರಿದಂತೆ 35ಕ್ಕೂ ಹೆಚ್ಚು ಪ್ರತಿಷ್ಠಿತ ನಾಗರಿಕ ಮತ್ತು ಪರಿಸರ ಸಂಘಟನೆಗಳು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಯಾವುದೇ ಕಾರಣಕ್ಕೂ ಅಭಿವೃದ್ಧಿ ಹೆಸರಿನಲ್ಲಿ ಇರುವ ಅಲ್ಪಸ್ವಲ್ಪ ಪರಿಸರವನ್ನು ನಾಶ ಮಾಡಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿವೆ.




