ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪ ಮತ್ತು ಹಠಾತ್ ಪ್ರವಾಹದಲ್ಲಿ ನಾಪತ್ತೆಯಾದ ಕರ್ನಾಟಕ ಮೂಲದ ಪ್ರವಾಸಿಗರ ಪತ್ತೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ನೇಪಾಳಕ್ಕೆ ತೆರಳಿದ್ದ ಕರ್ನಾಟಕ ಮೂಲದ ಪ್ರವಾಸಿಗರು ಅಥವಾ ನಾಗರಿಕರು ಯಾರಾದರೂ ನಾಪತ್ತೆಯಾಗಿದ್ದರೆ ಅಥವಾ ಸಂಪರ್ಕಕ್ಕೆ ಸಿಗದೇ ಇದ್ದರೆ ತಕ್ಷಣವೇ ಅವರ ವಿವರಗಳನ್ನು ಹಂಚಿಕೊಳ್ಳುವಂತೆ ಸಾರ್ವಜನಿಕರಲ್ಲಿ ರಾಜ್ಯ ಸರ್ಕಾರವು ಮನವಿ ಮಾಡಿದೆ.
ಕೇಂದ್ರ ಗೃಹ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ರಾಜ್ಯ ಸರ್ಕಾರ ಹೇಳಿಕೊಂಡಿದೆ. ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಮತ್ತು ನಾಪತ್ತೆಯಾದವರನ್ನು ಪತ್ತೆಹಚ್ಚಲು ಸಮರಪಾದಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದೆ.
ನೇಪಾಳದಲ್ಲಿ ತಮ್ಮ ಕುಟುಂಬಸ್ಥರು, ಸ್ನೇಹಿತರು ಅಥವಾ ಪರಿಚಿತರು ನಾಪತ್ತೆಯಾಗಿದ್ದಾರೆಂದು ಶಂಕಿಸಲಾಗಿದ್ದರೆ, ಸಾರ್ವಜನಿಕರು ಆ ವ್ಯಕ್ತಿಯ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ಕೊನೆಯದಾಗಿ ಸಂಪರ್ಕಿಸಿದ ಸ್ಥಳ ಮತ್ತು ಸಮಯ ಹಾಗೂ ಖಾಯಂ ವಿಳಾಸದ ವಿವರಗಳನ್ನು ಒದಗಿಸಬೇಕೆಂದು ಸರ್ಕಾರ ಮನವಿ ಮಾಡಿದೆ. ಈ ಮಾಹಿತಿಯನ್ನು ಸುಲಭವಾಗಿ ಸಂಗ್ರಹಿಸಲು ಸರ್ಕಾರವು ವಿಶೇಷ ಗೂಗಲ್ ಫಾರ್ಮ್ (docs.google.com/forms/d/1gnw8B…) ಲಿಂಕ್‌ಅನ್ನು ಕೂಡ ಹಂಚಿಕೊಂಡಿದೆ.
ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರ ನೆರವಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು (SEOC) 24×7 ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ತೆರೆದಿದೆ. ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 1070 ಅಥವಾ 080-22253707 ಮೂಲಕ ಕಂಟ್ರೋಲ್ ರೂಮ್ ಸಂಪರ್ಕಿಸಬಹುದು. ಜೊತೆಗೆ [email protected] ಇಮೇಲ್ ವಿಳಾಸಕ್ಕೂ ಮಾಹಿತಿ ರವಾನಿಸಬಹುದು ಎಂದು ತಿಳಿಸಿದೆ.
ಇನ್ನೊಂದೆಡೆ, ನೇಪಾಳದಲ್ಲಿ ಸಿಲುಕಿರುವ ಭಾರತೀಯ ನಾಗರಿಕರಿಗೆ ನೆರವಾಗಲು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ಸಹ ತುರ್ತು ವಾಟ್ಸ್‌ಆ್ಯಪ್ ಮತ್ತು ಕರೆ ಸಂಖ್ಯೆಗಳನ್ನು (+977 9851316807, +977 9709107500 ಮತ್ತು +977 9810326117) ಬಿಡುಗಡೆ ಮಾಡಿದೆ. ಬಾಧಿತರು ಈ ಸಂಖ್ಯೆಗಳ ಮೂಲಕ ನೇರವಾಗಿ ಸಂಪರ್ಕಿಸಿ ಸಹಾಯ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



