ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ (ಚೌ) ಗ್ರಾಮದಲ್ಲಿ ಕಳೆದ ಸುಮಾರು 15 ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಿಶೇಷವಾಗಿ ದಲಿತರ ಓಣಿಯಲ್ಲಿ ಕಲುಷಿತ ಹಾಗೂ ಹೊಲಸು ನೀರು ಬರುತ್ತಿದ್ದು, ಇದು ಕುಡಿಯಲು ಯೋಗ್ಯವಾಗಿಲ್ಲ ಎಂದು ಸ್ಥಳೀಯ ನಿವಾಸಿ ಅರವಿಂದ್ ಮಲ್ಲಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನೀರನ್ನು ಸೇವಿಸಿದರೆ ವಾಂತಿ, ಜ್ವರ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ದಲಿತರ ಓಣಿಯ ಜನರು ಅನಿವಾರ್ಯವಾಗಿ ಇದೇ ನೀರನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ತಾಲೂಕು ಪಂಚಾಯತ್ ಇಒ ಹಾಗೂ ಬೆಳಕುಣಿ (ಚೌ) ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ದಲಿತರ ಓಣಿಯ ಸಮಸ್ಯೆಯನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಿಇಒ, ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅವರು ತಕ್ಷಣ ಗಮನಹರಿಸಿ, ಸಮಸ್ಯೆ ಪರಿಹರಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅರವಿಂದ್ ಮಲ್ಲಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬೀದರ್ | ‘ಮಿಯಾಝಕಿ’ ಮಾವು ಕೆಜಿಗೆ ₹2.5 ಲಕ್ಷ : ಜಗತ್ತಿನ ದುಬಾರಿ ಬೆಲೆಯ ಬೆಳೆ ಬೆಳೆದು ಮಾದರಿಯಾದ ರೈತ




