ಬಿಡದಿ ಟೌನ್‌ಶಿಪ್: ‘ಲ್ಯಾಂಡ್ ಮಾಫಿಯಾ’ಕ್ಕೆ ಬಗ್ಗದ ರೈತರು

Date:

ರೈತರ ಪ್ರಬಲ ಪ್ರತಿರೋಧದಿಂದಾಗಿ ಸರ್ಕಾರ ಅಂದು ಮುಂದೆ ಹೆಜ್ಜೆ ಇಡಲು ಆಗಲಿಲ್ಲ ಎಂಬುದು ನಿಜ. ಆದರೆ ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಿರುವ ಈ ಭೂಮಿಯ ಮೇಲೆ ಸರ್ಕಾರ ಮತ್ತು ಭೂ ಮಾಫಿಯಾಗಳ ಕಣ್ಣು ಇದ್ದೇ ಇದೆ. ಕಳೆದೊಂದು ವರ್ಷದಿಂದ ಬಿರುಸಾಗಿರುವ ಸಂಘರ್ಷದಲ್ಲಿ ರೈತರು ತಮ್ಮ ಪಟ್ಟು ಬದಲಿಸದೆ ಧರಣಿ ಕುಳಿತ್ತಿದ್ದಾರೆ. ಆದರೆ ಭೂಮಿಯನ್ನು ಪಡೆದೇ ತೀರುತ್ತೇವೆ ಎಂಬ ಹಠದಲ್ಲಿ ಡಿ.ಕೆ. ಶಿವಕುಮಾರ್ ಹೆಜ್ಜೆ ಇಟ್ಟಿದ್ದಾರೆ.

“ಬಿಡದಿ ಟೌನ್‌ಶಿಪ್ (ಬಿಡದಿ ಸಮಗ್ರ ಉಪ ನಗರ ಯೋಜನೆ) ಮಾಡಿಯೇ ಮಾಡುತ್ತೇವೆ ಎಂದು ಹೊರಟಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮಗೆ ಶೇ.80ರಷ್ಟು ರೈತರ ಬೆಂಬಲವಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹೋರಾಡುತ್ತಿರುವವರು ರೈತರೇ ಅಲ್ಲ ಎನ್ನುತ್ತಿದ್ದಾರೆ. ಹೀಗೆ ಹೇಳುವ ಡಿ.ಕೆ.ಶಿವಕುಮಾರ್ ಅವರು ಕೆಂಪೇಗೌಡರ ಮಗನಲ್ಲ. ಅವರು ಕೆಂಪೇಗೌಡರ ಮಗನಾಗಿದ್ದರೆ ನಮ್ಮ ಭೂಮಿಯನ್ನು ಕಾರ್ಪೊರೇಟ್ ಕುಳಗಳಿಗೆ ಕಿತ್ತುಕೊಡಲು ಯೋಚಿಸುತ್ತಿರಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಹೋರಾಟನಿರತ ರೈತ ಮಹಿಳೆಯರು.

- Advertisement -

“ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 25 ಗ್ರಾಮಗಳ ಸುಮಾರು 9,640 ಎಕರೆ ಕೃಷಿ ಭೂಮಿಯನ್ನು ಪ್ರಾಣಕೊಟ್ಟಾದರೂ ಉಳಿಸಿಕೊಳ್ಳುತ್ತೇವೆ” ಎನ್ನುತ್ತಿದ್ದಾರೆ ಇಲ್ಲಿನ ರೈತರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ವರ್ಷಪೂರ್ತಿ ನೀರಾವರಿ ಹೊಂದಿರುವ ಫಲವತ್ತಾದ ನೆಲವನ್ನು ಕಳೆದುಕೊಳ್ಳುವುದಿಲ್ಲ. ಇಲ್ಲಿ ತೆಂಗು, ಅಡಕೆ, ಬಾಳೆ, ಮಾವು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳನ್ನು, ಜೋಳ, ರಾಗಿ ಸೇರಿದಂತೆ ವಿವಿಧ ರೀತಿಯ ಹಣ್ಣು, ತರಕಾರಿಗಳನ್ನು ಬೆಳೆಯುತ್ತಿದ್ದೇವೆ. ರೇಷ್ಮೆ ಕೃಷಿ, ಹೈನುಗಾರಿಕೆಗೆ ಬೆನ್ನೆಲುಬಾಗಿರುವ ಈ ಸಮೃದ್ಧ ಹಸಿರು ಪ್ರದೇಶವನ್ನು ಕಿತ್ತುಕೊಳ್ಳಲು ನಾವ್ಯಾರೂ ಬಿಡುವುದಿಲ್ಲ ಎಂಬುದು ಇಲ್ಲಿನ ರೈತರ ಒಕ್ಕೊರಲ ದನಿ.

“ಇಲ್ಲಿನ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವ ಆರಂಭಿಕ ಪ್ರಯತ್ನಗಳು 2006ರಲ್ಲೇ ಶುರುವಾಗಿದ್ದವು. ಅಂದು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಬಿಡದಿ ಉಪನಗರ ಯೋಜನೆಯನ್ನು ಡಿಎಲ್ಎಫ್ ಕಂಪನಿ ಸಹಭಾಗಿತ್ವದಲ್ಲಿ ಕೈಗೊಳ್ಳುವ ಉದ್ದೇಶಕ್ಕಾಗಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿಗಳನ್ನು ಇಡಿಯಾಗಿ ಹಸಿರು ವಲಯದಿಂದ ಕೆಂಪು ವಲಯಕ್ಕೆ ವರ್ಗಾಯಿಸಲಾಗಿತ್ತು. ಆಗ ರೈತರಿಂದ ಬಂದ ತೀವ್ರ ವಿರೋಧದ ಹಿನ್ನಲೆ ಮತ್ತು ಅವತ್ತು ರೈತರಿಗೆ ಕೊಡಬೇಕಾದ ಭೂ ಸ್ವಾಧೀನ ಪರಿಹಾರ ಮೊತ್ತ ಹಾಗೂ ನಂತರದ ವಹಿವಾಟು ಕುರಿತ ಡಿಎಲ್ಎಫ್ನ ಬಿಗಿ ನಿಲುವುಗಳ ಹಿನ್ನೆಲೆಯಲ್ಲಿ 2006ರಲ್ಲೇ ಪ್ರಸ್ತಾಪವನ್ನು ಕುಮಾರಸ್ವಾಮಿ ಸರ್ಕಾರ ಕೈಬಿಟ್ಟರೂ ಕೆಂಪು ವಲಯದಲ್ಲೇ ಮುಂದುವರೆಸಿತು. ಇದನ್ನೇ ಅಸ್ತ್ರವಾಗಿ ಇಂದು ಬಳಸುತ್ತಿರುವ ಡಿ.ಕೆ. ಶಿವಕುಮಾರ್, ರೈತರ ನಡುವೆ ಅಪಪ್ರಚಾರ ನಡೆಸಲು ಹಾಗೂ ಮುಂದೆ ನ್ಯಾಯಾಲಯಗಳಲ್ಲಿ ಇದು ಕೃಷಿ ಮಾಡುವ ಪ್ರದೇಶವಲ್ಲ ಎಂದು ಸಾಧಿಸಲು ಯೋಚಿಸುತ್ತಿದ್ದಾರೆ” ಎನ್ನುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ  ಟಿ. ಯಶವಂತ್.

ರೈತರ ಪ್ರಬಲ ಪ್ರತಿರೋಧದಿಂದಾಗಿ ಸರ್ಕಾರ ಅಂದು ಮುಂದೆ ಹೆಜ್ಜೆ ಇಡಲು ಆಗಲಿಲ್ಲ ಎಂಬುದು ನಿಜ. ಆದರೆ ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಿರುವ ಈ ಭೂಮಿಯ ಮೇಲೆ ಸರ್ಕಾರ ಮತ್ತು ಭೂ ಮಾಫಿಯಾಗಳ ಕಣ್ಣು ಇದ್ದೇ ಇದೆ. ಕಳೆದೊಂದು ವರ್ಷದಿಂದ ಬಿರುಸಾಗಿರುವ ಸಂಘರ್ಷದಲ್ಲಿ ರೈತರು ತಮ್ಮ ಪಟ್ಟು ಬದಲಿಸದೆ ಧರಣಿ ಕುಳಿತ್ತಿದ್ದಾರೆ. ಆದರೆ ಭೂಮಿಯನ್ನು ಪಡೆದೇ ತೀರುತ್ತೇವೆ ಎಂಬ ಹಠದಲ್ಲಿ ಡಿ.ಕೆ. ಶಿವಕುಮಾರ್ ಹೆಜ್ಜೆ ಇಟ್ಟಿದ್ದಾರೆ.

ಸುಮಾರು 9640 ಎಕರೆ ಕೃಷಿ ಭೂಮಿಯ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಯನ್ನು ದಿನಾಂಕ 13 ಮಾರ್ಚ್, 2025ರಂದು ಸರ್ಕಾರ ಹೊರಡಿಸಿತು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧಿವತ್ತಾಗಿ ಜಾರಿಗೆ ಬರುವ ಮುಂಚೆಯೇ ಈ ಪ್ರಾಧಿಕಾರದ ಹೆಸರಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿತ್ತು ಎನ್ನುವ ಟಿ. ಯಶವಂತ್, “ಬಿಡದಿ ಟೌನ್ ಶಿಪ್ ಯೋಜನೆ ರೈತ ವಿರೋಧಿ, ಕೃಷಿ ವಿರೋಧಿ ಯೋಜನೆ ಮಾತ್ರವೇ ಅಲ್ಲ, ಪರಿಸರ ವಿರೋಧಿ ಕೂಡ. ಈ ಯೋಜನೆಗೆ ಗುರುತಿಸಿರುವ ಪ್ರದೇಶವು ಅತ್ಯಂತ ಫಲವತ್ತಾದ, ನೀರಾವರಿ ಸಮೃದ್ಧ ಹಾಗೂ ಬಹು ವಾರ್ಷಿಕ ಬೆಳೆ ಇರುವ ಕೃಷಿ ಭೂಮಿಯಾಗಿದೆ. ಇಲ್ಲಿರುವ ಎಲ್ಲ ರೈತರು ಮಿಶ್ರ ಬೆಳೆ ಪದ್ದತಿ ಹಾಗೂ ಆಧುನಿಕ ಕೃಷಿ ವಿಧಾನವನ್ನು ಅನುಸರಿಸುತ್ತಾ ಸುಸ್ಥಿರ ಬದುಕು ನಡೆಸುತ್ತಿದ್ದಾರೆ. ಈಗಾಗಲೇ ಬೆಂಗಳೂರು ಮಹಾನಗರವು ತಾಪಮಾನ ಏರಿಕೆಯಿಂದ ಚಳಿಗಾಲದಲ್ಲೂ ಬೇಸಿಗೆ ಅನುಭವ ಪಡೆಯುತ್ತಿದೆ. ಬೆಂಗಳೂರು ಸುತ್ತಲೂ ಇರುವ ಹಸಿರು ಪ್ರದೇಶವನ್ನು ಕಾಂಕ್ರೀಟ್ ಕಾಡಾಗಿಸಿದರೆ ಬೆಂಗಳೂರು ಜನರ ಬದುಕು ಮತ್ತಷ್ಟು ಕಷ್ಟವಾಗುತ್ತದೆ. ಬೆಂಗಳೂರು ಮಹಾನಗರದ ಆಹಾರ ಕಣಜವಾಗಿರುವ ಕೃಷಿ ಪ್ರದೇಶಗಳನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ” ಎಂದು ಅಭಿಪ್ರಾಯಪಡುತ್ತಾರೆ.

‘ಈದಿನ’ಕ್ಕೆ ಪ್ರತಿಕ್ರಿಯೆ ನೀಡಿದ ಹೋರಾಟ ನಿರತ ಸ್ಥಳೀಯ ರೈತ ಅರಳಾಳುಸಂದ್ರ ಅಶ್ವತ್ಥ್, “ಇಲ್ಲಿರುವ ಬಹುತೇಕ ರೈತರು ತುಂಡು ಭೂಮಿ ಹೊಂದಿದವರು, ಹೈನುಗಾರಿಕೆ ನಂಬಿ ಬದುಕುತ್ತಿರುವವರು. ಎರಡು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಂದ ಪ್ರತಿ ತಿಂಗಳು ಆರು ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಸಾವಿರಾರು ಹಸುಗಳಿವೆ. ಮಲೆನಾಡಿನಂತೆ ಹಸಿರಿನಿಂದ ಕೂಡಿದ ಭೂ ಪ್ರದೇಶ ಇಲ್ಲಿದೆ. 440 ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ತಹಶೀಲ್ದಾರ್, ಜಿಲ್ಲಾಧಿಕಾರಿ, ಶಾಸಕ, ಉಸ್ತುವಾರಿ ಸಚಿವರಿಂದ ಹಿಡಿದು ಮುಖ್ಯಮಂತ್ರಿಯವರೆಗೂ ನಾವು ಮನವಿ ಕೊಟ್ಟಿದ್ದೇವೆ. ಎಲ್ಲ ಗ್ರೇಟರ್ ಬೆಂಗಳೂರು ಕಚೇರಿ ಮುಂದೆಯೂ ಧರಣಿ ಮಾಡಿದ್ದೇವೆ. ರಸ್ತೆ ತಡೆ ನಡೆಸಿದ್ದೇವೆ. ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ ಮಾಡಿದ್ದೇನೆ. ಆದರೆ ಇದ್ಯಾವುದಕ್ಕೂ ಸರ್ಕಾರ ಬಗ್ಗುತ್ತಿಲ್ಲ. ರೈತರು ಸತ್ತರೆ ಸಾಯಲಿ, ನಮಗೇನು ಆಗಬೇಕಿದೆ ಎಂಬ ಲೆಕ್ಕಾಚಾರದಲ್ಲಿ ಸರ್ಕಾರವಿದೆ. ರೈತರ ಹೆಸರಲ್ಲೇ ಪ್ರಮಾಣವಚನ ಸ್ವೀಕರಿಸಿ, ರೈತರನ್ನು ಗುಲಾಮರನ್ನಾಗಿ ಮಾಡಲು ಯತ್ನಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಶೇ.80ರಷ್ಟು ರೈತರ ಬೆಂಬಲ ಭೂ ಸ್ವಾಧೀನಕ್ಕಿದೆ” ಎನ್ನುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಖಾರವಾಗಿ ಪ್ರತಿಕ್ರಿಯಿಸುವ ಅವರು, “ಎಲ್ಲೋ ಯಾರೋ ಹತ್ತು ಜನ ರೈತರನ್ನು ಕರೆದುಕೊಂಡು ಹೋಗಿ ಕೂರಿಸಿಕೊಂಡು ಮಾತನಾಡುವುದಲ್ಲ. ಧರಣಿ ಸ್ಥಳಕ್ಕೆ ಅವರೂ ಬರಲಿ. ಆಧಾರ್ ಕಾರ್ಡ್, ಪಹಣಿ ಹಿಡಿದುಕೊಂಡು ನಾವೂ ಅವರೆದುರಿಗೆ ನಿಲ್ಲುತ್ತೇವೆ. ಶೇ.80 ರೈತರು ಸ್ವಾಧೀನಕ್ಕೆ ಒಪ್ಪಿಗೆ ಕೊಟ್ಟಿದ್ದಾರೋ ಇಲ್ಲವೋ ಎಂದು ಆಗ ಗೊತ್ತಾಗುತ್ತದೆ. ನಾವೆಲ್ಲ ಭೂಮಿ ಕೊಡಲು ಒಪ್ಪಿಕೊಂಡಿದ್ದರೆ 440 ದಿನಗಳಿಂದ  ಧರಣಿಯನ್ನೇಕೆ ಮಾಡುತ್ತಿದ್ದೆವು?” ಎಂದು ಪ್ರಶ್ನಿಸುತ್ತಾರೆ. ಮುಂದುವರಿದು, “ಕೆಲವು ಏಜೆಂಟರುಗಳು ಹುಟ್ಟಿಕೊಂಡಿದ್ದಾರೆ. ಜಿಬಿಎ ಒಳಗೆ ಇರುವ ಏಜೆಂಟರುಗಳ ಬಗ್ಗೆಯೇ ತನಿಖೆಯಾಗಬೇಕು. ಬಿಡದಿ ಇಂಡಸ್ಟ್ರಿ ಮತ್ತು ಹಾರೋಹಳ್ಳಿ ಇಂಡಸ್ಟ್ರಿ ನಡುವೆ ಈ ಜಾಗ ಇರುವುದರಿಂದ ಭೂ ಮಾಫಿಯಾಗಳ ಕಣ್ಣು ಬಿದ್ದಿದೆ” ಎನ್ನುತ್ತಾರೆ.

‘ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಪಂ ಸುತ್ತಮುತ್ತಲಿನ ರೈತರ ಭೂ ಹಿತರಕ್ಷಣಾ ಸಮಿತಿ’ಯ ಖಜಾಂಚಿ ನಾಗರಾಜ್ ಮಂಡಲಹಳ್ಳಿ ಪ್ರತಿಕ್ರಿಯಿಸಿ’, “ಶೇ.80ರಷ್ಟು ಒಪ್ಪಿಗೆ ಇದ್ದಿದ್ದರೆ, ಇಷ್ಟು ದಿನ ಸ್ವಾಧೀನ ಏಕೆ ಸಾಧ್ಯವಾಗಲಿಲ್ಲ? 80% ಅಲ್ಲ, 15% ಜನನೂ ಅವರ ಪರ ಇಲ್ಲ. ಏಕಾಏಕಿ ನೋಟಿಫಿಕೇಷನ್ ಮಾಡಿದರೆ, ಜನ ಒಪ್ಪಬೇಕಲ್ಲ! ದರ ನಿಗದಿ ಮಾಡಲಾಗಿದೆ ಎಂದು ಮನೆ ಬಾಗಿಲಿಗೆ ಚೀಟಿ ಅಂಟಿಸಿ ಹೋದರು. ರೈತರ ಜೊತೆ ಒಂದೇ ಒಂದು ಮಾತನಾಡಲಿಲ್ಲ. ಪರಿಹಾರ ಬಿಡುಗಡೆ ಮಾಡುತ್ತಿದ್ದೇವೆ ಎಂದು 2025ರ ಡಿಸೆಂಬರ್ನಿಂದಲೂ ಹೇಳಿಕೊಂಡೇ ಬಂದಿದ್ದಾರೆ. ಇಲ್ಲಿಯವರಿಗೂ ಪರಿಹಾರ ನೀಡಲು ಆಗಿಲ್ಲ. ಯಾಕೆಂದರೆ ಪರಿಹಾರ ಬಿಡುಗಡೆ ಮಾಡುವುದಕ್ಕೆ ಅವರಿಗೆ ಅವಕಾಶವೇ ಇಲ್ಲ. ರೈತರು ಒಪ್ಪಿದರಲ್ಲವೇ ಮುಂದಿನ ಮಾತು” ಎಂದರು.

“ಸಾವಿರಾರು ರೈತರನ್ನು ಪ್ರತಿನಿಧಿಸಿ ಭೇಟಿ ನೀಡಿದ್ದ ನಿಯೋಗದಿಂದ ಅಹವಾಲು ಸ್ವೀಕರಿಸಿದ್ದ ಡಿ.ಕೆ.ಶಿವಕುಮಾರ್ ಅವರು ರೈತರ ಆಗ್ರಹಗಳನ್ನು ಪರಿಹರಿಸಲು ಸಮಯ ಕೋರಿದ್ದರು. ಇನ್ನೊಂದು ಕಡೆ ರೈತರೆಲ್ಲ ಒಪ್ಪಿಕೊಂಡಿದ್ದಾರೆಂದು ಸಭೆ ಮಾಡಿದ್ದಾರೆ. ಎಷ್ಟೇ ದಬ್ಬಾಳಿಕೆ ಮಾಡಿದರೂ ನಾವು ಹೋರಾಟ ಕೈಬಿಡುವುದಿಲ್ಲ. ಇದೆಲ್ಲನ್ನೆಲ್ಲ ನೋಡುತ್ತಿರುವ ರಾಜ್ಯದ ರೈತ, ಕಾರ್ಮಿಕ, ದಲಿತ, ಕನ್ನಡಪರ ಸಂಘಟನೆಗಳೆಲ್ಲ  ನಮ್ಮ ಹೋರಾಟದೊಂದಿಗೆ ಕೈಜೋಡಿಸುತ್ತಿದ್ದಾರೆ. ಹೋರಾಟ ಇನ್ನಷ್ಟು ಕಾವೇರಲಿದೆ” ಎಂದು ಎಚ್ಚರಿಸಿದರು.

“ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಅನುಷ್ಠಾನಗೊಳಿಸುತ್ತಿರುವ ಬಿಡದಿ ಸಮಗ್ರ ಉಪ ನಗರ ಯೋಜನೆಗಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ  1987 ರ ಕಲಂ 17(1) ರ ಅಡಿಯಲ್ಲಿ ದಿನಾಂಕ 12-03-25 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ತಕ್ಷಣವೇ ಸುಮಾರು 3500 ಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಈ ಭೂ ಸ್ವಾಧೀನಕ್ಕೆ ಒಪ್ಪಿಗೆ ಇಲ್ಲ ಎಂದು ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಇದುವರೆಗೂ ಈ ಯಾವ ರೈತರ ಆಕ್ಷೇಪಣೆಗಳನ್ನು ಆಲಿಸಿಲ್ಲ. 2013ರ ಭೂ ಸ್ವಾಧೀನ ಕಾಯ್ದೆ ಕಡ್ಡಾಯಗೊಳಿಸಿರುವ  ಸಾಮಾಜಿಕ ಪರಿಣಾಮ ಅಧ್ಯಯನದಿಂದ ಈ ಭೂ ಸ್ವಾಧೀನವನ್ನು ಹೊರಗಿಡಲಾಗಿದೆ.  ನಗರಾಭಿವೃದ್ಧಿ ಇಲಾಖೆ ಮೂಲಕ ಭೂ ಸ್ವಾಧೀನವನ್ನು ಅನುಷ್ಠಾನಗೊಳಿಸುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ರಿಯಲ್ ಎಸ್ಟೇಟ್ ಮಾಫಿಯಾ ದುರುದ್ದೇಶಕ್ಕೆ ಬಿಡದಿ ಟೌನ್ ಶಿಪ್ ಯೋಜನೆ ಎಂದು ಬಣ್ಣ ಬಣ್ಣದ ಕಥೆಗಳನ್ನು ಹೆಣೆದಿದೆ. ಸ್ವತಃ ರಿಯಲ್ ಎಸ್ಟೇಟ್ ಉದ್ದಿಮೆ ನಡೆಸುವ ಉಪಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್ ರವರು ರೈತರ  ಬಲವಾದ ವಿರೋಧವನ್ನು ಕಡೆಗಣಿಸಿ ಈ ಯೋಜನೆ ಪರವಾಗಿ ರಾಜ್ಯ ಸರ್ಕಾರದ ಮೇಲೆ ಹಾಗೂ ಅಧಿಕಾರಿಗಳ ಮೇಲೆ ಪ್ರಭಾವ ಹಾಗೂ ಒತ್ತಡವನ್ನು ಉಂಟು ಮಾಡುತ್ತಿದ್ದಾರೆ” ಎಂದು ಹೋರಾಟಗಾರರು ಆರೋಪಿಸುತ್ತಿದ್ದಾರೆ.

ದೇಶದ ಅತಿದೊಡ್ಡ ರೈತ ಸಂಘಟನೆ  ಅಖಿಲ ಭಾರತ ಕಿಸಾನ್ ಸಭಾ (AIKS) ರಾಷ್ಟ್ರೀಯ ನಾಯಕರು ಕೂಡ ಭೂ ಸ್ವಾಧೀನಕ್ಕೆ ಒಳಪಟ್ಟಿರುವ ಕೃಷಿ ಪ್ರದೇಶಕ್ಕೆ ಭೇಟಿ ಕೊಟ್ಟು ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ಸಂಪುಟ ಸಭೆ ಅನುಮೋದನೆ ಬೆನ್ನಲ್ಲೇ ಸುಮಾರು ಎರಡು ಸಾವಿರ ಎಕರೆಗೂ ಮಿಗಿಲಾದ ಭೂಮಿಯಲ್ಲಿ ಮಂಜೂರಾತಿ ಪಡೆದ ಬಗರ್ ಹುಕಂ ಸಾಗುವಳಿದಾರರನ್ನು ವಂಚಿಸುವ ಬೆದರಿಕೆ ಸೇರಿದಂತೆ  ವ್ಯವಸ್ಥಿತವಾಗಿ ನಡೆಯುತ್ತಿರುವ  ರಿಯಲ್ ಎಸ್ಟೇಟ್ ಅಪಪ್ರಚಾರಕ್ಕೆ ಬಲಿಯಾಗದೆ  ಭೂ ಸ್ವಾಧಿನದ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಗೆಲುವು ಪಡೆಯಲು ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು” ಎಂದು ರೈತ ಸಂಘಟನೆಗಳು ತಿಳಿಸಿವೆ.

ಈ ಲೇಖನ ಓದಿದ್ದೀರಾ?: ಭಾರತದಲ್ಲೂ GEN-Z ಕ್ರಾಂತಿ? ನೆರೆಹೊರೆಯ ತಲ್ಲಣಗಳೂ, ‌ʼಕಾಕ್ರೋಚ್ʼ ನೀಡುತ್ತಿರುವ ಎಚ್ಚರಿಕೆಯೂ!

‘ಈದಿನ’ದ ಜೊತೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, “ಬೆಂಗಳೂರು ಒಂದನ್ನೇ ಯಾಕೆ ಅಭಿವೃದ್ಧಿಯ ಕೇಂದ್ರವನ್ನಾಗಿ ನೋಡಬೇಕು ಎಂದು ರೈತ ಸಂಘ ಮೊದಲಿನಿಂದಲೂ ಪ್ರಶ್ನಿಸುತ್ತಾ ಬಂದಿದೆ. ಬೆಂಗಳೂರನ್ನು ವಕ್ರವಾಗಿ ಬೆಳಸಲಾಗುತ್ತಿದೆ. ಬಡವರಿಗೆ ನಿವೇಶನ ಸಿಗುವುದೇ ಕಷ್ಟವಾಗಿದೆ. ಕಸವಿಲೇವಾರಿಗೆ ತೊಂದರೆ ಇದೆ. ಇಂತಹ ವಕ್ರ ಯೋಜನೆಗಳ ಕಾರಣ ಕಾವೇರಿ, ಕಬಿನಿ ನೀರನ್ನು ಸ್ಥಳೀಯ ರೈತರಿಗೆ ವಂಚಿಸಿ ಬೆಂಗಳೂರಿಗೆ ಹರಿಸಬೇಕಾಗುತ್ತದೆ. ಬೇರೆಯ ಜಲಾಶಯಗಳ ನೀರು ಕೊಟ್ಟರೂ ಬೆಂಗಳೂರಿನ ದಾಹ ತಗ್ಗುವುದಿಲ್ಲ. ನಗರಗಳನ್ನು ಬೆಳೆಸುವುದರ ಬಗ್ಗೆಯೇ ನಮಗೆ ತಾತ್ವಿಕವಾಗಿ ವಿರೋಧವಿದೆ” ಎನ್ನುತ್ತಾರೆ.

“ಟೌನ್ ಶಿಪ್ಗಾಗಿ ಭೂಮಿ ಸ್ವಾಧೀನ ಮಾಡುತ್ತೇವೆ ಎನ್ನುವುದು ತುಂಬಾ ಪಾಪದ ಕೆಲಸ. ಈ ಟೌನ್ ಶಿಪ್ ಯಾರಿಗಾಗಿ? ಈಗಾಗಲೇ ನೀಡಲಾಗಿರುವ ಭೂಮಿಗೆ ಸಂಬಂಧಿಸಿದಂತೆ ಆಡಿಟ್ ಮಾಡಲಿ. ಬೆಂಗಳೂರು ಸುತ್ತಮುತ್ತ ಎಷ್ಟು ಬಡಾವಣೆಗಳಿವೆ? ಎಷ್ಟು ಜನ ನಿವೇಶನ ತೆಗೆದುಕೊಂಡಿದ್ದಾರೆ? ನಿಜವಾಗಿಯೂ ಅಲ್ಲಿ ಮನೆಗಳನ್ನು ಕಟ್ಟಿದ್ದಾರಾ? – ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿ. ಈ ಟೌನ್ ಶಿಪ್ ಹಿಂದೆ ರಿಯಲ್ ಎಸ್ಟೇಟ್ ಲಾಬಿ ಇದೆ. ಬಂಡವಾಳ ಹಾಕೋದು ರಾಜಕಾರಣಿಗಳು ಮತ್ತು ಅವರ ಸುತ್ತಲಿನವರೇ. ಡಿ.ಕೆ. ಶಿವಕುಮಾರ್ ಕೂಡ ಮೂಲತಃ ಲ್ಯಾಂಡ್ ಡೆವಲಪರ್. ‘ನಾನು ಬೇಸಿಕಲಿ ಬಿಸಿನೆಸ್ಮ್ಯಾನ್, ರಾಜಕೀಯ ಫ್ಯಾಷನ್’ ಎನ್ನುವ ವ್ಯಕ್ತಿ ಆತ. ಇಂತಹ ವ್ಯಕ್ತಿಗಳು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ರಿಯಲ್ ಎಸ್ಟೇಟ್ ದಂಧೆಗೆ ರೈತರ ಭೂಮಿಯನ್ನು ಕಿತ್ತುಕೊಳ್ಳಲು ಅಭಿವೃದ್ಧಿ ಹೆಸರು ಹೇಳಲಾಗುತ್ತಿದೆ. ಇದನ್ನು ನಾವು ವಿರೋಧ ಮಾಡುತ್ತಿದ್ದೇವೆ. ಈ ಸಂಬಂಧ ಸಂಪೂರ್ಣ ಹೋರಾಟ ಮಾಡಲು ‘ಸಂಯುಕ್ತ ಹೋರಾಟ ಕರ್ನಾಟಕ’ ತೀರ್ಮಾನ ಕೈಗೊಂಡಿದೆ. ದೇವನಹಳ್ಳಿಯಲ್ಲಿ ಭೂಮಿ ಸ್ವಾಧೀನ ತಡೆದೆವು. ಈಗ ಬಿಡದಿ ಹೋರಾಟವನ್ನು ರಾಷ್ಟ್ರಮಟ್ಟದ ಚಳವಳಿಯನ್ನಾಗಿ ರೂಪಿಸಲು ನಿರ್ಧರಿಸಿದ್ದೇವೆ” ಎಂದು ಸರ್ಕಾರಕ್ಕೆ ಎಚ್ಚರಿಸುತ್ತಾರೆ.

“ಮಹಿಳೆಯರ ನೇತೃತ್ವದಲ್ಲಿ ಬಿಡದಿ ರೈತ ಹೋರಾಟ ನಡೆಯುತ್ತಿದೆ. ಇಲ್ಲಿ ಇರುವವರು ರೈತರೇ ಅಲ್ಲ ಎನ್ನುವ ಧೋರಣೆಯನ್ನು ಡಿ.ಕೆ. ಶಿವಕುಮಾರ್ ಬಿಡಬೇಕು. ನಾವು ಅಧಿಕಾರ ಕೊಟ್ಟಿದ್ದೇವೆಯೇ ಹೊರತು, ಸರ್ವಾಧಿಕಾರಿಯನ್ನಾಗಿ ಅವರನ್ನು ಮಾಡಿಲ್ಲ. ಜನರ ಹಿತಾಸಕ್ತಿಗಾಗಿ ಸರ್ಕಾರ ಇರಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಚಳವಳಿಯನ್ನು ನಾವು ನಡೆಸುತ್ತೇವೆ” ಎಂದು ತಿಳಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು ಸಾಧ್ಯವಲ್ಲವೇ?

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...