ನವದೆಹಲಿಯಲ್ಲಿ ನಡೆಯಲಿರುವ ಭಾರತದ ರಾಷ್ಟ್ರಪತಿಯವರ ವಿಶೇಷ ಸಂವಾದ ಕಾರ್ಯಕ್ರಮಕ್ಕೆ ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಗೌತಮ್ ಅವರು ರಾಷ್ಟ್ರ ಮಟ್ಟದ ಅಪರೂಪದ ಗೌರವಕ್ಕೆ ಭಾಜನರಾಗಿದ್ದಾರೆ.
2026ರ ಜೂನ್ 2ರಂದು ನವದೆಹಲಿಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ನಡೆಯುತ್ತಿರುವ “ಜನಜಾತೀಯ ಗರಿಮಾ ಉತ್ಸವ” ಕಾರ್ಯಕ್ರಮದ ಅಂಗವಾಗಿ ಈ ವಿಶೇಷ ಸಂವಾದವನ್ನು ಆಯೋಜಿಸಲಾಗಿದೆ. ರಾಷ್ಟ್ರಪತಿಯವರ ವಿಶೇಷ ಸಂವಾದ ಕಾರ್ಯಕ್ರಮಕ್ಕೆ ಅವರು ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ.
ಮೇ 10ರಿಂದ ಜೂನ್ 9ರವರೆಗೆ ನಡೆಯುತ್ತಿರುವ ಈ ರಾಷ್ಟ್ರೀಯ ಉತ್ಸವದ ಜೊತೆಗೆ “ಬಿರಸಾ ಲೈವ್ಸ್ ಇನ್ ನ್ಯೂ ಭಾರತ್ ವೀಕ್” ಕಾರ್ಯಕ್ರಮವೂ ಮೇ 25ರಿಂದ ಜೂನ್ 2ರವರೆಗೆ ನಡೆಯುತ್ತಿದ್ದು, ಅದರ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿಯವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಪರಂಪರೆ, ರಾಷ್ಟ್ರದ ಅಭಿವೃದ್ಧಿಗೆ ಅವರ ಕೊಡುಗೆ ಹಾಗೂ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರವನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಕೆಲವೇ ಗಣ್ಯರಲ್ಲಿ ಗೌತಮ್ ಅವರಿಗೂ ಸ್ಥಾನ ದೊರೆತಿದ್ದು, ಒಟ್ಟು 202 ಮಂದಿಯ ಪೈಕಿ ಅವರು ಆಯ್ಕೆಯಾಗಿರುವುದು ವಿಶೇಷ ಸಾಧನೆ ಎಂದು ಪರಿಗಣಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮನರೇಗಾ ಯೋಜನೆಯಲ್ಲಿ ನಿಯಮ ಉಲ್ಲಂಘನೆ, ಅವ್ಯವಹಾರ ಆರೋಪ; ತನಿಖೆಗೆ ಆಗ್ರಹ
ನವದೆಹಲಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಗೌತಮ್ ಅವರು ರಾಯಚೂರು ಜಿಲ್ಲೆ ಹಾಗೂ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಲಿದ್ದಾರೆ.




