ವ್ಯಸನ ಹಾಗೂ ಮೂಢನಂಬಿಕೆಗಳಿಂದ ದೂರವಿದ್ದು, ಶಿಕ್ಷಣ, ಜ್ಞಾನ ಮತ್ತು ವೈಚಾರಿಕ ಚಿಂತನೆಯ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಚಿಂತಕ ವಿಠ್ಠಲದಾಸ ಪ್ಯಾಗೆ ಕರೆ ನೀಡಿದರು.
ಭಾಲ್ಕಿ ತಾಲೂಕಿನ ನಿಟ್ಟೂರು (ಬಿ) ಗ್ರಾಮದ ಮಹಾತ್ಮ ಜ್ಯೋತಿಬಾ ಫುಲೆ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಮಂಗಳವಾರ ಮಂಗಳವಾರ ಆಯೋಜಿಸಿದ್ದ ‘ವ್ಯಸನ ಮತ್ತು ಮೂಢನಂಬಿಕೆ ಮುಕ್ತ ಸಮಾಜ ನಿರ್ಮಾಣ ಮಾಡೋಣ’ ಹಾಗೂ ‘ಮಾನಸಿಕ ರೋಗಗಳ ಕುರಿತು ವಿಚಾರ ಸಂಕಿರಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಸಮಾಜದಲ್ಲಿ ಅನೇಕರು ವಿವಿಧ ರೀತಿಯ ವ್ಯಸನಗಳಿಗೆ ತುತ್ತಾಗುತ್ತಿದ್ದು, ಇದರಿಂದ ವಿಶೇಷವಾಗಿ ಯುವಜನರ ಮಾನಸಿಕ ಸ್ಥೈರ್ಯ ಮತ್ತು ವ್ಯಕ್ತಿತ್ವದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಾರಾಯಿ, ಸಿಗರೇಟ್, ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳಂತಹ ದುಶ್ಚಟಗಳು ವ್ಯಕ್ತಿಯ ಆರೋಗ್ಯದ ಜೊತೆಗೆ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯವನ್ನೂ ಹಾಳು ಮಾಡುತ್ತವೆ. ಆದ್ದರಿಂದ ಇಂತಹ ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಬೇಕು” ಎಂದು ಸಲಹೆ ನೀಡಿದರು.
“ಗ್ರಾಮೀಣ ಪ್ರದೇಶಗಳಲ್ಲಿ ಮೂಢನಂಬಿಕೆಗಳಿಗೆ ಜನರು ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಾಣಿ ಬಲಿ ಸೇರಿದಂತೆ ಅನಗತ್ಯ ಆಚರಣೆಗಳಿಂದ ಯಾವುದೇ ಪ್ರಯೋಜನವಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವನ ರೂಪಿಸಿಕೊಳ್ಳಲು ಕಾಯಕ, ಜ್ಞಾನ ಹಾಗೂ ಪರಿಶ್ರಮವನ್ನು ನಂಬಬೇಕು. ಕಷ್ಟಗಳನ್ನು ಎದುರಿಸುವ ಶಕ್ತಿ ನಮ್ಮ ಪರಿಶ್ರಮದಲ್ಲಿಯೇ ಇದೆ” ಎಂದು ಹೇಳಿದರು.
ಚಿಂತಕರಾದ ಗಣಪತಿ ಭಕ್ತ ಮಾತನಾಡಿ, “ವಿದ್ಯಾರ್ಥಿಗಳು ವ್ಯಸನ ಮತ್ತು ಮೂಢನಂಬಿಕೆಗಳಿಂದ ಸಂಪೂರ್ಣವಾಗಿ ದೂರವಿದ್ದು, ಶಿಕ್ಷಣ, ಜ್ಞಾನ ಹಾಗೂ ಉತ್ತಮ ಚಿಂತನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದು ಕರೆ ನೀಡಿದರು.
ಸಾಹಿತಿ ಶರಣು ಫುಲೆ ಮಾತನಾಡಿ, “ಆಧುನಿಕ ಜೀವನಶೈಲಿಯಲ್ಲಿ ಒತ್ತಡ, ಖಿನ್ನತೆ, ನಿದ್ರಾಹೀನತೆ ಹಾಗೂ ಕೌಟುಂಬಿಕ ಸಮಸ್ಯೆಗಳು ಸೇರಿದಂತೆ ಹಲವು ಕಾರಣಗಳಿಂದ ಜನರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸೂಕ್ತ ಅರಿವು ಪಡೆದು ಅಗತ್ಯ ನೆರವು ಪಡೆಯಬೇಕು. ವಿದ್ಯಾರ್ಥಿಗಳು ವ್ಯಸನ ಹಾಗೂ ಮೂಢನಂಬಿಕೆಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಹಾಗೂ ‘ಮಾರ್ಗದಾತ’ ಕನ್ನಡ ದಿನಪತ್ರಿಕೆ ಬಿಡುಗಡೆ ಮಾಡಲಾಯಿತು. ನಿಟ್ಟೂರು ಗ್ರಾಮದ ಸಿದ್ಧಾರ್ಥ ಭಜನಾ ಮಂಡಳಿ ಹಾಗೂ ಕಲಾವಿದರಿಂದ ಜಾನಪದ ಗೀತೆಗಳು ಮತ್ತು ಭಜನೆಗಳ ಗಾಯನ ಗಮನ ಸೆಳೆಯಿತು.
ಇದನ್ನೂ ಓದಿ : ವಚನ ಕಲ್ಯಾಣ | ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ!
ನಿವೃತ್ತ ಪ್ರಾಚಾರ್ಯ ಬಾಬುರಾವ್ ಮಾಳಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸೂರ್ಯಕಾಂತ ಭಾವಿದೊಡ್ಡಿ, ಆಯುಷ್ಮಾನ್ ಕಲ್ಲಪ್ಪ ಕೈವಾರೆ, ಹರ್ಷಿತ್ ದಾಂಡೇಕರ್, ನಾಗೇಶ ಚಲ್ವಾ, ಅಶೋಕ ಬೋರಳೆ, ನರ್ಸಿಂಗ, ಗೋರಕನಾಥ್, ತುಳಸಿರಾಮ, ಗೌತಮಿ, ಶಾಂತಮ್ಮ ಫುಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಭೀಮರಾವ್ ಮಾಲಗತ್ತಿ ಸ್ವಾಗತಿಸಿದರು, ಮುಕೇಶ ಚಲ್ವಾ ನಿರೂಪಿಸಿದರು.




