ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ, ಪ್ರಾಮಾಣಿಕತೆ ಹಾಗೂ ವಚನ ಸಾಹಿತ್ಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ರವಿ ಹಂಜ್ ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಅವರ ‘ಬಸವ ಮಂಟಪ’ ಕೃತಿಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ನಾಳೆ (ನ.19) ನಗರದ ಬಸವೇಶ್ವರ ವೃತ್ತದಲ್ಲಿ ವಿವಿಧ ಬಸವಪರ ಸಂಘಟನೆಗಳಿಂದ ಪ್ರತಿಭಟನೆ, ಪ್ರತಿಕೃತಿ ದಹನ ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ್ ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಕುರಿತು ರವಿ ಹಂಜ್ ನೀಡಿರುವ ಹೇಳಿಕೆಗಳು ದೇಶ-ವಿದೇಶಗಳಲ್ಲಿರುವ ಬಸವಭಕ್ತರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ ಒಂದೆರಡು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಸವತತ್ತ್ವ, ಲಿಂಗಾಯತ ಧರ್ಮ, ಬಸವಾದಿ ಶರಣರು, ಮಠಾಧೀಶರು ಹಾಗೂ ಬಸವಪರ ಹೋರಾಟಗಾರರ ವಿರುದ್ಧ ರವಿ ಹಂಜ್ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ತಮ್ಮ ಲೇಖನಗಳನ್ನು ಸಂಗ್ರಹಿಸಿ ಸುಮಾರು 600 ಪುಟಗಳ ‘ಬಸವ ಮಂಟಪ’ ಕೃತಿಯನ್ನು ಹೊರತಂದಿದ್ದಾರೆ. ನವೆಂಬರ್ 15ರಂದು ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭಕ್ಕೂ ಮುನ್ನ ನೀಡಿದ ಮಾಧ್ಯಮ ಸಂದರ್ಶನದಲ್ಲಿ ಬಸವಣ್ಣನವರ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ” ಎಂದು ಆರೋಪಿಸಿದರು.
“ಬಸವಣ್ಣನವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನ ಇಡೀ ಮನುಕುಲಕ್ಕೆ ನೈತಿಕ ಬದುಕಿನ ಸಂದೇಶ ನೀಡುತ್ತದೆ. ಆದರೆ, ರವಿ ಹಂಜ್ ಅವರು ಈ ವಚನದ ಆಶಯವನ್ನು ತಪ್ಪಾಗಿ ಅರ್ಥೈಸಿಕೊಂಡು ಬಸವಣ್ಣನವರು ಬಿಜ್ಜಳನ ಖಜಾನೆಯ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಹಾಗೂ ಬಿಜ್ಜಳನ ಹತ್ಯೆಯಲ್ಲಿ ಅವರ ಪಾತ್ರವಿತ್ತು ಎಂಬ ರೀತಿಯಲ್ಲಿ ಆರೋಪಿಸಿದ್ದಾರೆ. ಇಂತಹ ಹೇಳಿಕೆಗಳಿಗೆ ಯಾವುದೇ ವಿಶ್ವಾಸಾರ್ಹ ಐತಿಹಾಸಿಕ ಆಧಾರಗಳನ್ನು ಒದಗಿಸಿಲ್ಲ” ಎಂದು ದೂರಿದರು.
‘ಬಸವ ಮಂಟಪ’ ಕೃತಿ ನಿಷೇಧಕ್ಕೆ ಒತ್ತಾಯಿಸಿ ನಾಳೆ ಪ್ರತಿಭಟನೆ
ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಯಲ್ಲಿ ಬಸವತತ್ತ್ವದ ಪ್ರಚಾರಕರು, ಮಠಾಧೀಶರು ಹಾಗೂ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಸಿದ ಅನೇಕ ಮುಖಂಡರ ವಿರುದ್ಧ ಅವಹೇಳನಕಾರಿ ಬರಹಗಳಿವೆ. ಕೃತಿಯಲ್ಲಿರುವ ಆಕ್ಷೇಪಾರ್ಹ ಅಂಶಗಳನ್ನು ಪರಿಶೀಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಪುಸ್ತಕ ನಿಷೇಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ, ರವಿ ಹಂಜ್ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯಿಸಲಾಗುವುದು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ರವಿ ಹಂಜ್ ವಿರುದ್ಧ ದೂರು ಸಲ್ಲಿಸಲಾಗುವುದು. ಅವರ ಹೇಳಿಕೆಗಳು ಪ್ರಸಾರವಾಗುತ್ತಿರುವ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧವೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾಳೆ (ನ.19) ಗುರುವಾರ ಬೆಳಿಗ್ಗೆ 10 ಗಂಟೆಗೆ ನಗರದ ಬಸವೇಶ್ವರ ವೃತ್ತದಲ್ಲಿ ವಿವಿಧ ಬಸವಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ರವಿ ಹಂಜ್ ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ಧನ್ನೂರ್ ತಿಳಿಸಿದರು.
ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಿ: ಬಾಬುವಾಲಿ
ಮುಖಂಡ ಬಾಬುವಾಲಿ ಮಾತನಾಡಿ, “ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಆದರೆ, ಮತ್ತೊಂದು ಧರ್ಮವನ್ನು ಅವಹೇಳನ ಮಾಡುವ ಮೂಲಕ ಅದರ ಅನುಯಾಯಿಗಳ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ. ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅವರ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ಪ್ರಕರಣದಲ್ಲಿ ಸ್ವಯಂಪ್ರೇರಿತವಾಗಿ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಬಸವಣ್ಣನವರ ಪ್ರಾಮಾಣಿಕತೆಗೆ ಇತಿಹಾಸವೇ ಸಾಕ್ಷಿ
ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, “12ನೇ ಶತಮಾನದಲ್ಲಿಯೂ ಕೊಂಡಿ ಮಂಚಣ್ಣನವರಂತಹವರು ಬಸವಣ್ಣನವರ ವಿರುದ್ಧ ಅನೇಕ ಆರೋಪಗಳನ್ನು ಮಾಡುತ್ತಿದ್ದರು. ಆದರೆ, ಒಂಬತ್ತು ಶತಮಾನಗಳು ಕಳೆದರೂ ಬಸವಣ್ಣನವರ ತತ್ತ್ವ, ಆದರ್ಶ ಮತ್ತು ವಿಚಾರಧಾರೆಗಳು ವಿಶ್ವಾದ್ಯಂತ ಬೆಳೆಯುತ್ತಲೇ ಇವೆ. ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನಗಳು ಇಂದಿಗೂ ಮುಂದುವರಿದಿರುವುದು ವಿಷಾದನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಸವಪ್ರಭು ಸ್ವಾಮೀಜಿ ಮಾತನಾಡಿ, “ಬಸವಣ್ಣನವರ ಪ್ರಾಮಾಣಿಕತೆ ಮತ್ತು ಕಾಯಕನಿಷ್ಠೆಯನ್ನು ವಿವರಿಸುವ ಹಲವು ಪ್ರಸಂಗಗಳು ಶರಣ ಸಾಹಿತ್ಯದಲ್ಲಿ ಉಲ್ಲೇಖವಾಗಿವೆ. ಬಸವಣ್ಣನವರು ರಾಜಭಂಡಾರದ ಲೆಕ್ಕಪತ್ರಗಳನ್ನು ಬರೆಯುವಾಗ ಸರ್ಕಾರಿ ಕೆಲಸಕ್ಕಾಗಿ ದೊಡ್ಡ ದೀಪವನ್ನು ಬಳಸುತ್ತಿದ್ದರು. ಒಮ್ಮೆ ರಾತ್ರಿ ಸಾಧುವೊಬ್ಬರು ಅವರನ್ನು ಭೇಟಿಯಾಗಲು ಬಂದಾಗ, ಲೆಕ್ಕಪತ್ರಗಳ ಕೆಲಸ ಪೂರ್ಣಗೊಳಿಸಿದ ಬಳಿಕ ದೊಡ್ಡ ದೀಪವನ್ನು ಆರಿಸಿ, ತಮ್ಮ ವೈಯಕ್ತಿಕ ಹಣದಿಂದ ಖರೀದಿಸಿದ ಎಣ್ಣೆಯ ಸಣ್ಣ ದೀಪವನ್ನು ಹಚ್ಚಿಕೊಂಡು ಅತಿಥಿಯೊಂದಿಗೆ ಮಾತನಾಡಿದರು. ಸಾರ್ವಜನಿಕ ಹಣವನ್ನು ವೈಯಕ್ತಿಕ ಕೆಲಸಕ್ಕೆ ಬಳಸಬಾರದು ಎಂಬುದು ಅವರ ದೃಢ ನಿಲುವಾಗಿತ್ತು. ಇಂತಹ ಪ್ರಾಮಾಣಿಕ ವ್ಯಕ್ತಿಯ ವಿರುದ್ಧ ರಾಜಭಂಡಾರದ ಹಣ ದುರುಪಯೋಗದ ಆರೋಪ ಮಾಡುವುದು ಖಂಡನೀಯ” ಎಂದರು.

ಸಿದ್ಧರಾಮ ಶರಣರು ಬೆಲ್ದಾಳ ಮಾತನಾಡಿ, “ಹರಿಹರ ಮಹಾಕವಿ ಹಾಗೂ ಭೀಮಕವಿಯ ಬಸವಪುರಾಣ ಸೇರಿದಂತೆ ಶರಣ ಸಾಹಿತ್ಯದಲ್ಲಿ ಬಸವಣ್ಣನವರ ಪ್ರಾಮಾಣಿಕತೆ, ಕಾಯಕನಿಷ್ಠೆ ಮತ್ತು ರಾಜಭಂಡಾರದ ನಿರ್ವಹಣೆಗೆ ಸಂಬಂಧಿಸಿದ ಅನೇಕ ಪ್ರಸಂಗಗಳು ದೊರೆಯುತ್ತವೆ. ಇಂತಹ ಮಹಾನ್ ವ್ಯಕ್ತಿಯನ್ನು ಕಳ್ಳ, ಸುಳ್ಳುಗಾರ ಎಂದು ಬಿಂಬಿಸುವ ಪ್ರಯತ್ನ ಖಂಡನೀಯ. ವೀರಶೈವ ಪದ 14ನೇ ಶತಮಾನದಲ್ಲಿ ಬಳಕೆಗೆ ಬಂದಿದ್ದು, ಸಿದ್ಧಾಂತ ಶಿಖಾಮಣಿಯನ್ನು 15ನೇ ಶತಮಾನದಲ್ಲಿ ರಚಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಶಂಕರ ಬಿದರಿಗೆ ಉಚ್ಚಾಟಿಸಲಿ
ರವಿ ಹಂಜ್ ಅವರ ʼಬಸವ ಮಂಟಪʼ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಶಂಕರ್ ಬಿದರಿ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಅನುಮತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆಯೇ ಅಥವಾ ವೈಯಕ್ತಿಕ ನೆಲೆಯಲ್ಲಿ ಭಾಗವಹಿಸಿದ್ದಾರೆಯೇ ಎಂಬುದನ್ನು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಬೇಕು. ಅಲ್ಲದೆ, ಬಿದರಿ ಅವರನ್ನು ಮಹಾಸಭಾದಿಂದ ಉಚ್ಚಾಟಿಸಬೇಕು. ರವಿ ಹಂಜ ಅವರ ಹೇಳಿಕೆಗಳನ್ನು ಶಂಕರ್ ಬಿದರಿ ಅವರು ಸಮರ್ಥಿಸುತ್ತಾರೆಯೇ ಅಥವಾ ವಿರೋಧಿಸುತ್ತಾರೆಯೇ ಎಂಬುದನ್ನು ಸಮಾಜಕ್ಕೆ ತಿಳಿಸಬೇಕು ಎಂದು ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಬುಳ್ಳಾ ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ನ.21, 22ರಂದು ಜಿಲ್ಲಾ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಭಿತ್ತಿಪತ್ರ ಬಿಡುಗಡೆ
ರವಿ ಹಂಜ್ ಅವರು ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾಗಿದ್ದು, ಅವರ ಹೇಳಿಕೆಗಳು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯವು ಅವರ ಪಾಸ್ಪೋರ್ಟ್ ಜಪ್ತಿ ಹಾಗೂ ಭಾರತ ಪ್ರವೇಶಕ್ಕೆ ನಿರ್ಬಂಧ ವಿಧಿಸುವ ಬೇಡಿಕೆಯನ್ನು ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸಬೇಕು ಎಂದು ಬುಳ್ಳಾ ಒತ್ತಾಯಿಸಿದರು.



