ಬಸವಾದಿ ಶರಣರ ಕುರಿತ ಅಧ್ಯಯನ ಶರಣಲೋಕ ಗ್ರಂಥದ ಮೂಲಕ ಸಕಾರಗೊಂಡಿದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿಯ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಶುಕ್ರವಾರ ಆಯೋಜಿದ್ದ 332ನೆಯ ಮಾಸಿಕ ಶರಣ ಸಂಗಮ ಮತ್ತು ಶರಣಲೋಕ ಗ್ರಂಥ ಲೋಕಾರ್ಪಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
“ಶರಣಲೋಕ ಗ್ರಂಥದಲ್ಲಿ ಎಲ್ಲ ಸಮುದಾಯದ ಶರಣರ ಕುರಿತು ಇದುವರೆಗೂ 152 ಲೇಖನಗಳು ಪ್ರಕಟಗೊಂಡಿವೆ. ಪ್ರತಿಯೊಬ್ಬರು ಈ ಗ್ರಂಥ ಕೊಂಡುಕೊಂಡು ಶರಣರ ಇತಿಹಾಸ ಅರಿಯುವ ಪ್ರಯತ್ನ ಮಾಡಬೇಕು” ಎಂದು ತಿಳಿಸಿದರು.
ನೇತ್ರತ್ವ ವಹಿಸಿದ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಬಸವತತ್ವ ಪ್ರಚಾರ ಪ್ರಸಾರಕ್ಕಾಗಿ ಪರಮ ಪೂಜ್ಯರು 43 ಗ್ರಂಥಗಳು ರಚಿಸಿದ್ದಾರೆ. ಅದರಲ್ಲಿ ಶರಣಲೋಕ ಅಮೂಲ್ಯ ಗ್ರಂಥವಾಗಿದೆ. ಪರಮ ಪೂಜ್ಯರು ಬಿಡುವಿಲ್ಲದ ನಡುವೆಯೂ ಕಳೆದ ಮುರ್ನಾಲ್ಕು ವರ್ಷಗಳಿಂದ ಬೋಧಿವೃಕ್ಷ ಪತ್ರಿಕೆಗೆ ಪರಮ ಪೂಜ್ಯರು ತಪ್ಪದೇ ಲೇಖನ ನೀಡುತ್ತಿದ್ದಾರೆ’ ಎಂದರು.
ಗ್ರಂಥ ಲೋಕಾರ್ಪಣೆಗೊಳಿಸಿದ ಹಿರಿಯ ಪತ್ರಕರ್ತ ದೇವಯ್ಯ ಗುತ್ತೇದಾರ್ ಮಾತನಾಡಿದರು. ಹಿರಿಯ ಸಾಹಿತಿ ಬಂಡೆಪ್ಪ ಎಂ. ಶರಣರು ಅಧ್ಯಕ್ಷತೆ ವಹಿಸಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ ಬಸವ ಗುರುಪೂಜೆ ನೆರವೇರಿಸಿದರು. ಸಾಹಿತಿ ರಾಜು ಜುಬರೆ ಗ್ರಂಥ ಪರಿಚಯ ಮಾಡಿದರು.
ಇದನ್ನೂ ಓದಿ : ಬೀದರ್ | ಎಸ್ಐಆರ್, ಇವಿಎಂ ವಿರುದ್ದದ 21 ದಿನಗಳ ಏಕಾಂಗಿ ಉಪವಾಸ ಸತ್ಯಾಗ್ರಹ ಅಂತ್ಯ
ಈ ಸಂದರ್ಭದಲ್ಲಿ ಸಂಗಮೇಶ ಬಿ. ಬಿರಾದಾರ ಸೇರಿದಂತೆ ಹಲವರು ಇದ್ದರು. ಸವಿತಾ ಭೂರೆ ವಚನ ಗಾಯನ ಮಾಡಿದರು. ದೀಪಕ ಠಮಕೆ ನಿರೂಪಿಸಿದರು. ಶ್ರೀಮಠದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನೆರವೇರಿತು.




