ರಾಜಕಾರಣದಲ್ಲಿ ಆಧ್ಯಾತ್ಮ, ಬಸವವಾದಿ ಶರಣರ ಚಿಂತನೆಗಳು ಸೇರಿಕೊಂಡರೆ ರಾಜಕೀಯದ ಕೊಳಕು ಕಳೆದು ಪರಮ ಪವಿತ್ರ ರಾಜಕೀಯ ವ್ಯವಸ್ಥೆ ರೂಪಿಸಲು ಸಾಧ್ಯ ಎಂದು ಬೆಂಗಳೂರಿನ ಜಾಗೃತ ಕರ್ನಾಟಕದ ಡಾ.ಎಚ್.ವಿ.ವಾಸು ಸಲಹೆ ಮಾಡಿದರು.
ಬೀದರ್ ನಗರದ ಬಸವಗಿರಿಯಲ್ಲಿ ನಡೆದ ಬಸವೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅನುಭಾವ ನೀಡಿದ ಅವರು, ʼಒಳ್ಳೆಯ ಜನ ರಾಜಕಾರಣದಿಂದ ದೂರ ಇರಬಾರದು. ರಾಜಕೀಯ ಹಾಗೂ ಸಂಸಾರದಲ್ಲಿ ಒಳ್ಳೆಯ ಆಯ್ಕೆಗೆ ಬಸವಣ್ಣನವರ ಕಳಬೇಡ ಕಳಬೇಡ ವಚನ ನೆನಪಿನಲ್ಲಿಟ್ಟುಕೊಳ್ಳಬೇಕು. ಸಮಾಜ, ಸರ್ಕಾರ ಹಾಗೂ ಸಂಸಾರದಲ್ಲಿ ಬದಲಾವಣೆ ತರುವ ಶಕ್ತಿ ವಚನಗಳಿಗಿದೆʼ ಎಂದು ತಿಳಿಸಿದರು.
ʼರಾಜಕೀಯದಲ್ಲಿ ಬಸವಾದಿ ಶರಣರ ಆಶಯಗಳನ್ನು ಬೆರೆತರೆ ಹೊಸ ಸಮಾಜ ನಿರ್ಮಾಣ ಸಾಧ್ಯವಿದೆ. ರಾಜಕಾರಣ ಕೊಳಕಲ್ಲ, ಸರ್ವರನ್ನೂ ಸಮತಕ್ಕಡಿಯಲ್ಲಿ ಕೊಂಡೊಯ್ಯುವಂತಹ ಕ್ರಿಯೆ. ಶಾಂತಿ, ಸಹೋದರತೆ, ಸೃಜನಶೀಲತೆ, ಸಮಾನತೆಯನ್ನು ಸಮಾಜರಲ್ಲಿ ನಿರಂತರವಾಗಿ ಹೆಚ್ಚಿಸಲು ಶರಣರ ಆಶಯಗಳು ರಾಜಕೀಯದಲ್ಲಿ ಬೆರೆಯಬೇಕಿದೆ. ನಮ್ಮ ಸಂಪ್ರದಾಯವೆಂಬಂತೆ ವಚನಗಳ ಪಠಣ ಕೇವಲ ಭಾಷಣಕ್ಕೆ ಸೀಮಿತಗೊಳಿಸಿ, ಅದರ ತದ್ವಿರುದ್ಧವಾಗಿ ನಡೆಕೊಂಡರೆ ಅದು ಆಧ್ಯಾತ್ಮವಲ್ಲ, ವ್ಯವಹಾರ ಆಗುತ್ತದೆʼ ಎಂದರು.
ʼಎಂಟು ನೂರು ವರ್ಷ ಭೂಗತವಾಗಿದ್ದ ವಚನಗಳನ್ನು ಬೆಳಕಿಗೆ ತಂದವರು ಫ.ಗು. ಹಳಕಟ್ಟಿ. ಬಸವ ತತ್ವ ಪ್ರಸಾರ ಮಾಡಿದವರಲ್ಲಿ ಅಕ್ಕ ಅನ್ನಪೂರ್ಣತಾಯಿ ಅವರ ಹೆಸರು ಮೇಲ್ಪಂಕ್ತಿಯಲ್ಲಿದೆ. ಅಕ್ಕ ಅನ್ನಪೂರ್ಣ ತಾಯಿ ಅವರ ಕಾರ್ಯವನ್ನೇ ಮುಂದುವರಿಸಿರುವ ಪ್ರಭುದೇವ ಸ್ವಾಮೀಜಿ ಅವರ ಕಾರ್ಯ ಶ್ಲಾಘನೀಯʼ ಎಂದರು.
ಪ್ರಜಾಪ್ರಭುತ್ವದ ಬೀಜ ವಚನಗಳಲ್ಲಿ
ಪ್ರಜಾಪ್ರಭುತ್ವದ ಬೀಜ ವಚನಗಳಲ್ಲೇ ಇದೆ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಅಕ್ಕ ಅನ್ನಪೂರ್ಣತಾಯಿ ಅವರ ದ್ವಿತೀಯ ಸ್ಮರಣೋತ್ಸವ ಅಂಗವಾಗಿ ಲಿಂಗಾಯತ ಮಹಾ ಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಬಸವೋತ್ಸವದ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಸಂವಿಧಾನದ ಆಶಯಗಳು, ಬದುಕನ್ನು ಉನ್ನತಿಗೇರಿಸುವ ಮೌಲ್ಯಗಳು ವಚನಗಳಲ್ಲಿ ಅಡಕವಾಗಿವೆ. ಶರಣರ ನಾಡಿನಲ್ಲಿರುವ ನಾವು ವಚನಗಳ ಶೇಷ್ಠತೆಯ ಅರಿವಿಲ್ಲದೆ, ನಿಧಿ ಮೇಲೆ ಕುಳಿತು ತುತ್ತು ಅನ್ನಕ್ಕೆ ಕೈಚಾಚುವವರಂತಾಗಿದ್ದೇವೆ. ಅಂದು ಶರಣರು ಅಡುಗೆ ಮಾಡಿ ಇಟ್ಟಿದ್ದಾರೆ. ಈಗ ಅದನ್ನು ಬಡಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡಬೇಕಾಗಿದೆ. ಅಕ್ಕ ಅನ್ನಪೂರ್ಣತಾಯಿ ಅವರು ಬಸವ ತತ್ವ ಪ್ರಚಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಪ್ರವಚನವೇ ಅವರಿಗೆ ತಪಸ್ಸು ಆಗಿತ್ತು’ ಎಂದು ಸ್ಮರಿಸಿದರು.
ಕಲಬುರಗಿಯ ಅಕ್ಕಮಹಾದೇವಿ ಆಶ್ರಮದ ಮಾತೆ ಪ್ರಭುಶ್ರೀ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಸೈಕಲ್ ತುಳಿದು ಬಸವ ತತ್ವ ಪ್ರಚಾರಗೈದಿದ್ದರು. ಮಠ ಕಟ್ಟಿದ್ದರು. ಬಸವ ತತ್ವದ ಪುನರುತ್ಥಾನಗೈದವರೆನಿಸಿದ್ದರು. ಅಕ್ಕ ಸತ್ಯದ ದಾರಿಯಲ್ಲಿ ಹಿಡಿದದ್ದನ್ನು ಬಿಡದ ಛಲವಾದಿಯಾಗಿದ್ದರು. ತಪ್ಪಿದವರನ್ನು ತಿದ್ದುವ ಗುಣ ಅವರಲ್ಲಿತ್ತು. ಅಕ್ಕನವರಂತೆ ಆಗಲು ಪ್ರಯತ್ನಿಸೋಣ’ ಎಂದರು.

ಬೇಲೂರಿನ ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ‘ಬಸವ ತತ್ವ ಎಲ್ಲ ಜಾತಿ, ವರ್ಗ, ವರ್ಣದವರಿಗೆ ಬೇಕು. ಬಸವಣ್ಣನವರ ಅನುಯಾಯಿಗಳಾದವರು ಅಸ್ಪøಶ್ಯರನ್ನೂ ಅಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಅವರು ದೂರ ಸರಿಯುತ್ತಾರೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಲಬುರಗಿಯ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ಮಾತನಾಡಿ, ʼಪ್ರತಿಯೊಬ್ಬರಲ್ಲಿನ ಪ್ರತಿಭೆ ಗುರುತಿಸುವ ಶಕ್ತಿ ಅಕ್ಕ ಅನ್ನಪೂರ್ಣತಾಯಿ ಅವರಲ್ಲಿತ್ತು. ಕಲಬುರಗಿ ಮಹಾನಗರದಲ್ಲಿ ಬಸವ ಸೇವಾ ಪ್ರತಿಷ್ಠಾನ ಕಟ್ಟಿ ಬೆಳೆಸಿದ ಅವರು ನಮಗೆಲ್ಲ ಬಸವ ತತ್ವ ಕಲಿಸಿದ್ದಾರೆʼ ಎಂದು ತಿಳಿಸಿದರು.
ಮುಖಂಡ ನಾಗರಾಜ ಕರ್ಪೂರ ಮಾತನಾಡಿ, ನಂಜನಗೂಡಿನ ಎಚ್.ಎಂ. ಮಂಜುಳಾ ಮಧು ಮಾತನಾಡಿದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಉದ್ಘಾಟಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ, ಉದ್ಯಮಿ ವೀರಶೆಟ್ಟಿ ಪಟ್ನೆ, ನೀಲಮ್ಮನ ಬಳಗದ ಸಂಗೀತಾ ಆರ್. ಪಾಟೀಲ, ಸಾಹಿತಿ ರಮೇಶ ಮಠಪತಿ ಮತ್ತಿತರರು ಇದ್ದರು.
ಇದನ್ನೂ ಓದಿ : ಬೀದರ್ | ಎಸ್ಐಆರ್, ಇವಿಎಂ ವಿರುದ್ದದ 21 ದಿನಗಳ ಏಕಾಂಗಿ ಉಪವಾಸ ಸತ್ಯಾಗ್ರಹ ಅಂತ್ಯ
ಡಾ. ಪ್ರಿಯಾ ಎಲಿ, ಪೂರ್ಣಚಂದ್ರ ಮೈನಾಳೆ ವಚನ ನೃತ್ಯ ಪ್ರದರ್ಶಿಸಿದರು. ಚಂದ್ರಕಾಂತ ಪಟ್ನೆ, ಕಂಟೆಪ್ಪ ಗಂದಿಗುಡೆ, ಚಂದ್ರಶೇಖರ ಹೆಬ್ಬಾಳೆ ಹಾಗೂ ರೇವಣಪ್ಪ ಮೂಲಗೆ ವಚನ ಸಂಗೀತ ನಡೆಸಿಕೊಟ್ಟರು. ನೀಲಮ್ಮನ ಬಳಗದ ಗುರುಶ್ರೀ ಮಠಪತಿ ನಿರೂಪಿಸಿದರು. ಲಿಂಗಾಯತ ಸೇವಾ ದಳದ ಅಭಿಷೇಕ ಮಠಪತಿ ಸ್ವಾಗತಿಸಿದರು.
ಯಾಗ, ಪುರಾಣ ವಚನಕ್ಕೆ ಸಮವಲ್ಲ
ಬಸವಾದಿ ಶರಣರ ಒಂದು ವಚನಕ್ಕೆ ಶತರುದ್ರೀಯಾ ಯಾಗ ಸಮವಲ್ಲ. ನೂರೆಂಟು ವಚನಗಳ ಓದಿಗೆ ವ್ಯಾಸನ ಪುರಾಣ ಸಮ ಬಾರದು ಎಂದು ಬಸವಕಲ್ಯಾನದ ಬಸವ ತತ್ವ ಪ್ರಸಾರಕ ಬಸವದೇವರು ನುಡಿದರು.
ಬಸವಗಿರಿಯಲ್ಲಿ ಬಸವೋತ್ಸವ ಅಂಗವಾಗಿ ನಡೆದ ಸಾಮೂಹಿಕ ವಚನ ಪಾರಾಯಣದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವಚನಗಳು ಮನುಕುಲದ ಉದ್ಧಾರಕ್ಕೆ ಬಂದಿವೆ. ಬಸವಾದಿ ಶರಣರು ರಚಿಸಿದ ಅಮೂಲ್ಯ ವಚನಗಳನ್ನು ಉಳಿಸಲು ಪ್ರಾಣವನ್ನೇ ನೀಡಬೇಕಾಯಿತು. ಗುರುವಿನ ಕಾರ್ಯಕ್ಕೆ ಬಂದವರೆಲ್ಲ ತತ್ವ ಪ್ರಸಾರಕರಿಗೆ ದ್ರೋಹ ಬಗೆಯುವುದು ಮುಂದಿನ ಜನ್ಮದ ಕರ್ಮದ ಬುತ್ತಿಯಾಗುವುದು ಎಂದು ಹೇಳಿದರು.
ಅಕ್ಕ ಅನ್ನಪೂರ್ಣತಾಯಿ ಅವರ ಸ್ಮರಣೋತ್ಸವವನ್ನು ಬಸವೋತ್ಸವವಾಗಿ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣ. ಗುರು ಕಾರ್ಯಕ್ಕೆ ನಿಂದೆ, ಎಡರು, ತೊಡರುಗಳು ಬಂದರೂ ಹೆದರಬೇಕಿಲ್ಲ. ಅಂಥ ಕಾರ್ಯ ಪ್ರಭುದೇವರು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ʼವಚನವೆಂಬುದು ಆತ್ಮಜ್ಯೋತಿ. ಒಂದೊಂದು ವಚನವೂ ಜ್ಞಾನ ನಿಧಿ. ಸುಖದ ಶರಧಿ. ಸ್ಪರ್ಶಿಸಿ ಓದಿ, ಅರಗಿಸಿಕೊಂಡವರ ಬಾಳೆಲ್ಲ ಬೆಳಕು. ಜ್ಞಾನ ದೀಪ್ತಿಯ ತೈಲವಾಗಿರುವ ಶರಣರ ವಚನಳತ್ತ ನಾವೆಲ್ಲ ಮುಖ ಮಾಡಬೇಕಾಗಿದೆ. ವಚನಗಳು ತಾನು ಹೀನ, ದೀನನೆಂಬ ಕೀಳರಿಮೆ ಕಳೆದು ಪರ ವಸ್ತುವಿನ ಅಂಶವೇ ತಾನೆಂಬ ಅರಿವನ್ನು ನೆಲೆಗೊಳಿಸುತ್ತವೆ. ಅಕ್ಕ ಅನ್ನಪೂರ್ಣತಾಯಿ ಅವರು ವಚನ ಪಾರಾಯಣದ ಪರಿಪಾಠ ಜಾರಿಗೆ ತಂದು ಸಾರ್ವತ್ರಿಕಗೊಳಿಸಿದರುʼ ಎಂದು ಹೇಳಿದರು.
ಕಲಖೋರಾದ ಅನಿಲ್ ಮಹಾರಾಜರು, ಬಸವಕಲ್ಯಾಣದ ಅನುಭವ ಮಂಟಪದ ಶಿವಾನಂದ ಸ್ವಾಮೀಜಿ ಮಾತನಾಡಿದರು.
ಬಸವ ತತ್ವ ಪ್ರಸಾರಕ ಸಿದ್ರಾಮಪ್ಪ ಕಪಲಾಪುರ, ಯಶವಂತ ಶರಣರು ಸಾನಿಧ್ಯ, ಲಿಂಗಾಯತ ಮಹಾ ಮಠದ ಪರುಷಕಟ್ಟೆ ಚನ್ನಬಸವಣ್ಣ ನೇತೃತ್ವ, ನೀಲಮ್ಮನ ಬಳಗದ ಶಾಮಲಾ ಎಲಿ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ : ಭಾಲ್ಕಿ | ʼಶರಣಲೋಕʼ ಗ್ರಂಥ ಲೋಕಾರ್ಪಣೆ
ಕೊಪ್ಪಳದ ವೀರಭದ್ರಪ್ಪ ನಂದ್ಯಾಳ ಷಟ್‍ಸ್ಥಲ ಧ್ವಜಾರೋಹಣಗೈದರು. ಮಾತೆ ಗೋದಾವರಿ, ಪ್ರಮುಖರಾದ ಸಂಗೀತಾ ಚ. ಗಣಾಚಾರಿ, ಜಗದೇವಿ ಜ. ಚಿಮಕೋಡೆ, ಸಂಗೀತಾ ಕಾಡಾದಿ, ನಮ್ರತಾ ಪಾಟೀಲ, ಸುಪ್ರಿಯಾ ಲೋಕೇಶ ಭೂರೆ ಉಪಸ್ಥಿತರಿದ್ದರು. ಲಿಂಗಾಯತ ಸೇವಾ ದಳದ ಪ್ರಜ್ವಲ್ ಪತಂಗೆ ನಿರೂಪಿಸಿದರು. ಬಸವ ಚಿಕಲಿಂಗೆ ವಂದಿಸಿದರು.




