ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್ಐಆರ್) ಹಾಗೂ ಇವಿಎಂ ಸಂಪೂರ್ಣ ರದ್ದುಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ನಿವಾಸಿ ಗೋಪಾಲ್ ಸಿಂಗ್ ಠಾಕೂರ್ ಅವರು ನಡೆಸುತ್ತಿರುವ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ಶನಿವಾರ 21ನೇ ದಿನಕ್ಕೆ ಕೊನೆಗೊಳಿಸಿದರು.
ಔರಾದ ಪಟ್ಟಣದ ಮಿನಿ ವಿಧಾನಸೌಧ ಎದುರು “ವೋಟ್ ಸತ್ಯಾಗ್ರಹ” ಎಂಬ ಹೆಸರಿನಲ್ಲಿ ಮೇ 3ರಿಂದ ಕೇವಲ ನೀರು ಸೇವಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಈ ಬಗ್ಗೆ ಜಿಲ್ಲಾಡಳಿತ ಮುಖಾಂತರ ಭಾರತದ ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯ ಪತ್ರವನ್ನು ರವಾನಿಸಲು ತಿಳಿಸಿದರು. ರಾಷ್ಟ್ರಪತಿಗಳಿಂದ ಪ್ರತಿಕ್ರಿಯೆ ಬರುವವರೆಗೂ ಸತ್ಯಾಗ್ರಹ ಮುಂದುವರೆಸುವೆ ಎಂದು ಹೇಳಿದರು.
ಉಪವಾಸ ಸತ್ಯಾಗ್ರಹ 17ನೇ ದಿನಕ್ಕೆ ಕಾಲಿಟ್ಟ ದಿನ ಗೋಪಾಲ್ ಸಿಂಗ್ ಠಾಕೂರ್ ಅವರು ಅಸ್ವಸ್ಥಗೊಂಡಿದರು. ಅವರನ್ನು ಔರಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಪಡೆದ ಬಳಿಕ ಪುನಃ ಅವರು ಉಪವಾಸ ಸತ್ಯಾಗ್ರಹ ಮುಂದುವರೆಸಿದರು.
ಗೋಪಾಲ್ ಸಿಂಗ್ ಅವರ ಸತ್ಯಾಗ್ರಹಕ್ಕೆ ಬೆಂಬಲಿಸಿ ಅವರ ಆರೋಗ್ಯದ ಹಿತದೃಷ್ಟಿಯಿಂದ ಬೀದರ್ ಜಿಲ್ಲಾ ಎಸ್ಐಆರ್ ವಿರೋಧಿ ಸಮಿತಿಯ ಪ್ರಮುಖರು ಶನಿವಾರ ಧರಣಿ ಸ್ಥಳಕ್ಕೆ ತೆರಳಿ ಗೋಪಾಲ್ ಸಿಂಗ್ ಠಾಕೂರ್ ಅವರಿಗೆ ಸತ್ಯಾಗ್ರಹ ಹಿಂಪಡೆಯುವಂತೆ ಮನವೋಲಿಸಿದರು. ಎಲ್ಲರ ಮನವಿಗೆ ಒಪ್ಪಿ ಹಿಂಪಡೆಯುವೆ ಎಂದರು. ಬಳಿಕ ತಹಸೀಲ್ದಾರ್ ಮಹೇಶ್ ಪಾಟೀಲ್ ಹಾಗೂ ಸಮಿತಿಯ ಪ್ರಮುಖರು ಗೋಪಾಲ್ ಸಿಂಗ್ ಅವರಿಗೆ ಎಳೆನೀರು ಕುಡಿಸಿದರು.
ಉಪವಾಸ ಸತ್ಯಾಗ್ರಹ ಕೈಬಿಟ್ಟ ಬಳಿಕ ಗೋಪಾಲ್ ಸಿಂಗ್ ಠಾಕೂರ್ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಹಕ್ಕು ಕಸಿಯುವ ಕೆಲಸ ಆಗಬಾರದು. ಎಸ್‌ಐಆರ್, ಇವಿಎಂ ಮೂಲಕ ಪ್ರಜಾತಂತ್ರ ದುರ್ಬಲಗೊಳಿಸುವ ನೀತಿ ವಿರುದ್ಧ ಹೋರಾಡುವುದು ನನ್ನ ಕರ್ತವ್ಯ ಎಂದು ಭಾವಿಸಿ ಗಾಂಧೀಜಿಯವರ ಅಹಿಂಸಾ ಮಾರ್ಗದ ಮೂಲಕ ನನ್ನ ಹೋರಾಟ ನಡೆಸಿದ್ದೇನೆ. ಇಂದಿನ ಯುವಜನತೆ ದೇಶದ ವಿದ್ಯಮಾನಗಳ ಕುರಿತು ಆಳವಾಗಿ ಯೋಚಿಸಬೇಕು. ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳೊಂದಿಗೆ ನಮ್ಮ ಹಕ್ಕಿಗಾಗಿ, ಪ್ರಜಾತಂತ್ರ ಉಳಿವಿಗಾಗಿ ಹೋರಾಡಬೇಕಿದೆʼ ಎಂದರು.

ಎಸ್‌ಐಆರ್ ಹೆಸರಿನಲ್ಲಿ ಯಾವುದೇ ಪ್ರಜೆಗೂ ಅನ್ಯಾಯ ಆಗಬಾರದು, ಅವನ ಮತಹಕ್ಕು ಕಸಿಯುವ ಹುನ್ನಾರ ನಡೆಯಬಾರದ. ಇವಿಎಂ ಬದಲಿಗೆ ಬ್ಯಾಲೆಟೆ ಪೇಪರ್ ಪುನಾರಂಭಿಸಿ ಪಾರದರ್ಶಕ ಚುನಾವಣೆಗಳು ನಡೆಸಬೇಕು. ದೇಶಕ್ಕಾಗಿ ಚಿಕ್ಕ ವಯಸ್ಸಿನಲ್ಲಿಯೇ ಪ್ರಾಣ ತ್ಯಾಜಿಸಿದ ಶಾಹಿದ್ ಭಗತ್ ಸಿಂಗ್ ಅವರಿಗೆ ʼಭಾರತ ರತ್ನʼ ನೀಡಬೇಕುʼ ಎಂದು ಬೇಡಿಕೆಯಿಟ್ಟ ಅವರು, ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ನನ್ನ ಹೋರಾಟ ಬೇರೆ ಬೇರೆ ವಿಧಾನದಲ್ಲಿ ಮುಂದುವರೆಸುವೆʼ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೂಜ್ಯ ಸಿದ್ಧರಾಮ ಶರಣರು ಬೆಲ್ದಾಳ ಪ್ರಮುಖರಾದ ಅಬ್ದುಲ್ ಮನ್ನಾನ್ ಸೇಠ್, ಬಾಬುರಾವ್ ಹೊನ್ನಾ, ಓಂಪ್ರಕಾಶ ರೊಟ್ಟೆ, ಮಹೇಶ ಗೋರನಾಳಕರ್ ಮಾತನಾಡಿ, ʼದೇಶದಲ್ಲಿ ಪ್ರಜಾತಂತ್ರ ಗಂಡಾಂತರಲ್ಲಿದೆ. ಎಸ್‌ಐಆರ್, ಇವಿಎಂ ಹೆಸರಿನಲ್ಲಿ ಜನರ ಹಕ್ಕು ಕಸಿಯುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಸರ್ವಾಧಿಕಾರ ಆಡಳಿತ ವ್ಯವಸ್ಥೆ ನಡೆಯುತ್ತಿದ್ದು, ಅದರ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ. ದೇಶದ ಪ್ರಜಾತಂತ್ರದ ಮೌಲ್ಯಗಳ ರಕ್ಷಣೆಗಾಗಿ 21ದಿನಗಳ ನಿರಂತರವಾಗಿ ನಡೆಸಿದ ಉಪವಾಸ ಸತ್ಯಾಗ್ರಹ ಹೋರಾಟಗಾರರಿಗೆ ಮಾದರಿಯಾಗಿದೆ. ಅವರ ಮುಂದಿನ ಹೋರಾಟಕ್ಕೆ ಎಲ್ಲರೂ ಕೈಜೋಡಿಸುತ್ತೇವೆ. ಪ್ರತಿಯೊಬ್ಬರೂ ದೇಶದ ಸಂವಿಧಾನ ಮೌಲ್ಯಗಳನ್ನು ಉಳಿವಿಗಾಗಿ ಹೋರಾಡೋಣʼ ಎಂದರು.
ಇದನ್ನೂ ಓದಿ : ಹುಮನಾಬಾದ್ | ನೀಟ್ ಪ್ರಶ್ನೆಪತ್ರಿಕೆ ಸೋರಿಕೆ : ಎನ್‌ಟಿಎ ರದ್ದತಿಗೆ ದಸಂಸ ಆಗ್ರಹ
ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಪುಂಡಲಿಕರಾವ್, ಅರವಿಂದಕುಮಾರ ಅರಳಿ ಹಾಗೂ ಪ್ರಮುಖರಾದ ಮಾರುತಿ ಬೌದ್ಧೆ, ಡಾ.ಫಯಾಜ್, ಬಂಟಿ ದರ್ಬಾರೆ, ಶರಣಪ್ಪ ಪಾಟೀಲ್, ಅಮೀರೋದ್ದಿನ್, ಜಗದೀಶ್ವರ ಬಿರಾದಾರ, ರಜೀಯಾ ಬಳಬಟ್ಟಿ, ಮಂಜುಳಾ, ರಾಮಣ್ಣ ಒಡೆಯರ್, ಶಿವಮೂರ್ತಿ ಸುಬಾನೆ, ಓಂಪ್ರಕಾಶ ರೊಟ್ಟೆ, ಬಾಬುರಾವ್ ಹೊನ್ನಾ, ಪ್ರಕಾಶ ರಾವಣ, ಚಂದ್ರಶೇಖರ್ ಪಾಟೀಲ್ ಹೊಚಕನಳ್ಳಿ, ಸುಭಾಷ ಲಾಧಾ, ಗಣಪತಿ ವಾಸುದೇವ ಸೇರಿದಂತೆ ಅನೇಕರಿದ್ದರು




