ಬೆಳೆನಷ್ಟ, ಸಾಲದ ಶೂಲದಂತಹ ಸಂಕಷ್ಟಗಳಿಂದ ಕಂಗೆಟ್ಟು ರೈತ ಆತ್ಮಹತ್ಯೆಗೆ ಶರಣಾದರೆ, ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸುವ ನಿಯಮವಿದೆ. ಆದರೆ, ಬೀದರ್ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡು ವರ್ಷ ಕಳೆದರೂ ಇಬ್ಬರು ಸಂತ್ರಸ್ತ ಕುಟುಂಬಗಳಿಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತ ಸಾಲಬಾಧೆ ಅಥವಾ ಬೆಳೆನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸರ್ಕಾರದ ಪರಿಹಾರಕ್ಕೆ ಪರಿಗಣಿಸಲು ಮೃತರ ಹೆಸರಿನಲ್ಲಿ ಜಮೀನು ಹಾಗೂ ಸಾಲ ಪಡೆದಿರುವ ದಾಖಲೆ ಸೇರಿದಂತೆ ಅಗತ್ಯ ದಾಖಲೆಗಳು ಇರಬೇಕಾಗುತ್ತದೆ. ಜಿಲ್ಲೆಯಲ್ಲಿ ಇಂತಹ ಅರ್ಹತೆ ಹೊಂದಿರುವ ಎರಡು ಪ್ರಕರಣಗಳಲ್ಲಿ ಕುಟುಂಬಸ್ಥರು ದಾಖಲೆಗಳನ್ನು ಸಲ್ಲಿಸಿದ್ದರೂ, ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣ–1
ಚಿಟಗುಪ್ಪ ತಾಲೂಕಿನ ಕಂದಗೂಳ ಗ್ರಾಮದ ಗೀತಾ ಈರಪ್ಪ ಗೋಡಂಪಳ್ಳಿ ಅವರು 2025ರ ಆಗಸ್ಟ್ 28ರಂದು ವಿಷ ಸೇವಿಸಿದರು, ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಆದರೆ 2025ರ ಸೆಪ್ಟೆಂಬರ್ 11ರಂದುಸಾವನ್ನಪ್ಪಿದರು. ಅವರಿಗೆ ಪತಿ ಈರಪ್ಪ ಹಾಗೂ ಆರು ತಿಂಗಳ ಕಂದಮ್ಮ ಸೇರಿದಂತೆ ನಾಲ್ಕು ಹೆಣ್ಣು ಮಕ್ಕಳಿದ್ದರು. ಕುಟುಂಬದ ಮುಖ್ಯಸ್ಥೆಯಾಗಿದ್ದ ಗೀತಾ ಅವರು ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸಾಲದ ಹೊರೆ ತಾಳಲಾರದೆ ಸಾವಿಗೆ ಶರಣಾಗಿದ್ದರು.
ಗೀತಾ ಅವರು ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪರಿಗಣಿಸಿ, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಚಿಟಗುಪ್ಪ ತಹಸೀಲ್ದಾರ್ ಅವರು 2026ರ ಮೇ 7ರಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕರಿಗೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಬಿಡಿಗಾಸು ಪರಿಹಾರ ದೊರೆತಿಲ್ಲ. ಕೇಳಿದರೆ ಅಧಿಕಾರಿಗಳು ದಿನಕ್ಕೊಂದು ಸಬೂಬು ಹೇಳಿ ವಿಳಂಬ ಮಾಡುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಗೀತಾ ಅವರ ಪತಿ ಈರಪ್ಪ ಅವರು ‘ಈದಿನ’ದೊಂದಿಗೆ ಮಾತನಾಡಿ, “ಮನೆಯ ಮುಖ್ಯಸ್ಥೆಯಾಗಿದ್ದ ನನ್ನ ಪತ್ನಿ ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮೃತಪಟ್ಟಾಗ ಆರು ತಿಂಗಳ ಮಗು ಸೇರಿದಂತೆ ನಾಲ್ಕು ಹೆಣ್ಣು ಮಕ್ಕಳಿದ್ದರು. ಪತ್ನಿ ಮರಣದ ಬಳಿಕ ಪುಟ್ಟ ಮಕ್ಕಳನ್ನು ಪೋಷಿಸುವುದು, ಶಿಕ್ಷಣ ಕೊಡಿಸುವುದು ಸೇರಿದಂತೆ ಕುಟುಂಬ ನಿರ್ವಹಣೆ ನನಗೆ ಕಷ್ಟಕರವಾಗಿದೆ” ಎಂದು ಹೇಳಿದರು.
“ರೈತ ಆತ್ಮಹತ್ಯೆ ಪರಿಹಾರಕ್ಕೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಮೇಲಾಧಿಕಾರಿಗಳಿಗೆ ದಾಖಲೆಗಳನ್ನು ರವಾನಿಸಿಲ್ಲ. ಈಗ ವಿಚಾರಿಸಿದರೆ ಅವಧಿ ಮುಗಿದಿದೆ, ಪರಿಹಾರ ಸಿಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದ ಅವರು ಸ್ಥಳೀಯ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಅವರನ್ನು ಭೇಟಿಯಾಗಿ ಪರಿಹಾರ ಕೊಡಿಸುವಂತೆ ತಿಳಿಸಿದ್ದೇನೆ” ಎಂದರು.
“ನಾಲ್ಕು ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಕುಟುಂಬದ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ನಮ್ಮ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ, ಮಾನವೀಯ ದೃಷ್ಟಿಯಿಂದ ಸೂಕ್ತ ಪರಿಹಾರ ಒದಗಿಸಲು ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡುವಾಗ ಈರಪ್ಪ ಅವರ ಕಣ್ಣಾಲಿಗಳು ಒದ್ದೆಯಾದವು.
ಪ್ರಕರಣ–2
ಹುಮನಾಬಾದ್ ತಾಲೂಕಿನ ಚಂದನಹಳ್ಳಿ ಗ್ರಾಮದ ರೈತ ಮಾಣಿಕ ಲಕ್ಷ್ಮಣ ಪೂಜಾರಿ ಅವರು 2025ರ ಆಗಸ್ಟ್ 3ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಹೆಸರಿನಲ್ಲಿ ಎರಡು ಎಕರೆ ಜಮೀನು ಇದ್ದು, ಕೃಷಿ ಚಟುವಟಿಕೆಗಾಗಿ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ದಾಖಲೆಗಳೂ ಇವೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪೂರ್ಣಗೊಂಡು ಚಾರ್ಜ್‌ಶೀಟ್ ಕೂಡ ಸಲ್ಲಿಕೆಯಾಗಿದೆ.
ಮಾಣಿಕ ಪೂಜಾರಿ ಅವರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರದ ಪರಿಹಾರ ಧನ ನೀಡಲು ಅರ್ಹರಾಗಿರುವುದಾಗಿ ಅಂದಿನ ಹುಮನಾಬಾದ್ ತಹಸೀಲ್ದಾರ್ ಅವರು 2026ರ ಜುಲೈ 1ರಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಪತ್ರ ರವಾನಿಸಿದ್ದರು. ಆದರೆ, ಕೃಷಿ ಇಲಾಖೆ ಅಧಿಕಾರಿಗಳು ʼಪ್ರಕರಣವು ಆರು ತಿಂಗಳ ಅವಧಿ ಮೀರಿದೆʼ ಎಂಬ ಹಿಂಬರಹ ನೀಡಿ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
“ಮೃತ ರೈತ ಮಾಣಿಕ ಅವರ ಕುಟುಂಬಸ್ಥರು ʼಈದಿನʼ ಜೊತೆ ಮಾತನಾಡಿ, “ನಮ್ಮ ತಂದೆ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡು ವರ್ಷ ಕಳೆದಿದೆ. ಸರ್ಕಾರದಿಂದ ಪರಿಹಾರ ಪಡೆಯಲು ಅಗತ್ಯ ದಾಖಲೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಆದರೆ, ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ, ದಾಖಲೆಗಳನ್ನು ತ್ವರಿತವಾಗಿ ಮೇಲಧಿಕಾರಿಗಳಿಗೆ ರವಾನಿಸದ ಹಿನ್ನೆಲೆಯಲ್ಲಿ ಇದುವರೆಗೆ ಪರಿಹಾರ ದೊರೆತಿಲ್ಲ. ಈ ಕುರಿತು ಅಧಿಕಾರಿಗಳನ್ನು ವಿಚಾರಿಸಿದಾಗ, ಪರಿಹಾರ ನೀಡುವ ಅವಧಿ ಮುಗಿದಿದ್ದು, ಇನ್ನು ಪರಿಹಾರ ಸಿಗುವುದಿಲ್ಲ” ಎಂದು ಉತ್ತರಿಸುತ್ತಿದ್ದಾರೆ ಎಂದರು.
ಅಧಿಕಾರಿಗಳ ನಿರ್ಲಕ್ಷ್ಯ, ವಿಳಂಬದಿಂದಾಗಿ ನಮಗೆ ಬರಬೇಕಾದ ಪರಿಹಾರ ಸಿಗದೆ ವಂಚಿತರಾಗಿ ನಿತ್ಯ ಅಲೆಯಬೇಕಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು, ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರದ ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.
ಈ ಎರಡು ಪ್ರಕರಣಗಳನ್ನು ಗಮನಿಸಿದಾಗ, ಮೃತ ರೈತರ ಕುಟುಂಬಸ್ಥರು ಅಗತ್ಯ ದಾಖಲೆಗಳನ್ನು ಒದಗಿಸಿದ್ದರೂ, ಅವುಗಳನ್ನು ಸಮಯಕ್ಕೆ ಸರಿಯಾಗಿ ಮೇಲಾಧಿಕಾರಿಗಳಿಗೆ ರವಾನಿಸದೆ ವಿಳಂಬ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಬಳಿಕ ದಾಖಲೆಗಳನ್ನು ಹಿಡಿದು ಕಚೇರಿಗಳಿಗೆ ಅಲೆದಾಡುತ್ತಿರುವ ಕುಟುಂಬಸ್ಥರಿಗೆ ʼಅವಧಿ ಮುಗಿದಿದೆ, ಇನ್ನು ಪರಿಹಾರ ಸಿಗುವುದಿಲ್ಲʼ ಎಂಬ ಉತ್ತರಿಸುವುದು ಅಧಿಕಾರಿಗಳ ನಿರ್ಲಕ್ಷ್ಯವೇ ಎಂದು ಹೇಳಬಹುದು. ಇಂತಹ ಅರ್ಹ ಪ್ರಕರಣಗಳನ್ನು ವಿಶೇಷವೆಂದು ಪರಿಗಣಿಸಿ ಸರ್ಕಾರದ ಪರಿಹಾರ ಧನ ಒದಗಿಸಲು ಮುಂದಾಗಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ನಿಲ್ಲದ ರೈತ ಆತ್ಮಹತ್ಯೆ
ಬೀದರ್ ಜಿಲ್ಲೆಯಲ್ಲಿ ಅನ್ನದಾತರ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಪದೇ ಪದೇ ಬಾಧಿಸುವ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸಾಲದ ಹೊರೆಯಿಂದ ಹೊರಬರಲಾಗದ ಅನ್ನದಾತ ಕೊನೆಗೆ ಸಾವಿನ ಹಾದಿ ಹಿಡಿಯುತ್ತಿದ್ದಾರೆ.
ಕಳೆದ 2023-24ರಲ್ಲಿ 76 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2024-25ರಲ್ಲಿ 73 ಪ್ರಕರಣ, 2025-26ರ ಮಾರ್ಚ್ 31ರವರೆಗೆ 60 ಹಾಗೂ ಪ್ರಸಕ್ತ ಸಾಲಿನ 2026-27ರ ಜುಲೈ ಅಂತ್ಯದವರೆಗೆ 10 ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 5 ಪ್ರಕರಣಗಳು ತಿರಸ್ಕೃತಗೊಂಡಿದ್ದು, ಉಳಿದ ಪ್ರಕರಣಗಳು ಅರ್ಹವೆಂದು ಪರಿಗಣಿಸಿ ಪರಿಹಾರ ವಿತರಿಸಲಾಗುತ್ತಿದೆ ಎಂದು ಸರ್ಕಾರ ನೀಡಿದ ಅಂಕಿ-ಅಂಶಗಳೇ ಹೇಳುತ್ತಿವೆ.
ಆತ್ಮಹತ್ಯೆ ಮಾಡಿಕೊಂಡ ರೈತರ ಅರ್ಹ ಕುಟುಂಬಗಳಿಗೆ ಸರ್ಕಾರದಿಂದ ವಿವಿಧ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮೃತ ರೈತರ ಮಕ್ಕಳಿಗೆ ಸ್ನಾತಕೋತ್ತರ ಪದವಿಯ ಹಂತದವರೆಗೆ ಶಿಕ್ಷಣ ಮುಂದುವರಿಸಲು ಅನುಕೂಲವಾಗುವಂತೆ ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯ ಅಥವಾ ತತ್ಸಮಾನ ಶಿಕ್ಷಣ ಶುಲ್ಕ ಹಾಗೂ ವಸತಿ ವೆಚ್ಚವನ್ನು ಮರುಪಾವತಿಸುವ ವ್ಯವಸ್ಥೆ ಮಾಡಲಾಗಿದೆ. ಮೃತ ರೈತರ ಪತ್ನಿಯರಿಗೆ ನೀಡಲಾಗುತ್ತಿದ್ದ ವಿಧವಾ ಮಾಸಾಶನವನ್ನು ₹500 ರಿಂದ ₹2,000ಕ್ಕೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ.
₹5 ಲಕ್ಷ ಪರಿಹಾರ
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ/ಆತ್ಮಸ್ಥೆರ್ಯ ತುಂಬಲು ಹಿರಿಯ ಅಧಿಕಾರಿಗಳೊಂದಿಗೆ ಪೊಲೀಸ್, ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲದೆ ಸರ್ಕಾರದ ವಿವಿಧ ಸವಲತ್ತುಗಳನ್ನು ಅಂತಹ ಕುಟುಂಬಗಳಿಗೆ ತಲುಪಿಸಲು ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ಅರ್ಹ ರೈತ ಆತ್ಮಹತ್ಯೆ ಪ್ರಕರಣಗಳಿಗೆ ₹5 ಲಕ್ಷ ಪರಿಹಾರ ಧನವನ್ನು ಮೃತ ವ್ಯಕ್ತಿಯ ವಾರಸುದಾರರಿಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಕಂದಾಯ ಇಲಾಖೆಯಿಂದ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ : ಬೀದರ್ | ಆಧುನಿಕ ಹೈನುಗಾರಿಕೆ: 2 ದಿನಗಳ ತರಬೇತಿಗೆ ಅರ್ಜಿ ಆಹ್ವಾನ
ರೈತ ಆತ್ಮಹತ್ಯೆ ಪ್ರಕರಣಕ್ಕೆ ಸರ್ಕಾರದ ಪರಿಹಾರ ದೊರೆತ ಬಳಿಕ, ಸಂತ್ರಸ್ತ ಕುಟುಂಬದ ಹೆಸರು ಜಿಲ್ಲಾಡಳಿತದ ಪಟ್ಟಿಯಲ್ಲಿ ದಾಖಲಾಗುತ್ತದೆ. ಇದರಿಂದ ಮೃತ ರೈತರ ಮಕ್ಕಳಿಗೆ ಉಚಿತ ಶಿಕ್ಷಣ, ಸಾಮಾಜಿಕ ಭದ್ರತಾ ವೇತನ, ಉದ್ಯೋಗ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯುವ ಅವಕಾಶವಿದೆ. ಆದರೆ, ಪರಿಹಾರ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳು ಈ ಸೌಲಭ್ಯಗಳಿಂದಲೂ ವಂಚಿತರಾಗುವಂತಾಗಿದೆ. ಒಂದೆಡೆ ದುಡಿಯುವ ಕುಟುಂಬ ಸದಸ್ಯನನ್ನು ಕಳೆದುಕೊಂಡ ಸಂಕಟ, ಇನ್ನೊಂದೆಡೆ ಕುಟುಂಬ ನಿರ್ವಹಣೆ ಜೊತೆ ಸಾಲ ತೀರಿಸುವುದು ಹೇಗೆ ಎಂಬ ಆತಂಕದಿಂದ ಸಂತ್ರಸ್ತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



