ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಇಂಚೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ.ಚನ್ನಬಸವ ಪಟ್ಟದ್ದೇವರ ವೃಕ್ಷೋಧ್ಯಾನವನ (ಇಂಚೂರ್ ಟ್ರೀ ಪಾರ್ಕ್) ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬುಧವಾರ ಉದ್ಘಾಟಿಸಿದರು.
ಅರಣ್ಯ ಇಲಾಖೆ, ಪ್ರಾದೇಶಿಕ ಅರಣ್ಯ ವಿಭಾಗ, ಬೀದರ ಹಾಗೂ ಪ್ರಾದೇಶಿಕ ಅರಣ್ಯ ವಲಯ ಭಾಲ್ಕಿ ಸಹಯೋಗದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಉದ್ಯಾವನಕ್ಕೆ ಚಾಲನೆ ನೀಡಿ ಮಾತನಾಡಿ, “ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯದಿಂದ ನಾವು ಸಾಕಷ್ಟು ಅಪಾಯವನ್ನು ಎದುರಿಸುತ್ತೇವೆ ಆದ್ದರಿಂದ ಹಸಿರು ಹೊದಿಕೆ ಹೆಚ್ಚಿಸುವುದು ಮತ್ತು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದು ಇಂದಿನ ತುರ್ತು ಅಗತ್ಯ” ಹೇಳಿದರು.
ಭಾಲ್ಕಿ ತಾಲೂಕಿನ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗಾಗಿ ಮಕ್ಕಳಿಗಾಗಿ ಇಂಚೂರ ಗ್ರಾಮದಲ್ಲಿ ಸುಸಜ್ಜಿತ ನೂತನ ವೃಕ್ಷೋದ್ಯಾನವನ್ನು ನಿರ್ಮಿಸಲಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆಯಬೇಕು. ಮೈಸೂರಿನ ಬೃಂದಾವನದ ಮಾದರಿಯಲ್ಲೇ ಇಲ್ಲಿಯೂ ಸಂಜೆ ವೇಳೆ ಸಾರ್ವಜನಿಕರನ್ನು ಸೆಳೆಯಲು ವರ್ಣರಂಜಿತ ಸಂಗೀತ ಕಾರಂಜಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಈ ವೃಕ್ಷೋದ್ಯಾನದಲ್ಲಿ 250ಕ್ಕೂ ಹೆಚ್ಚು ಪ್ರಭೇದಗಳ ಸಸಿಗಳನ್ನು ನೆಡಲಾಗಿದ್ದು, ಮುಂದಿನ ದಿನಗಳಲ್ಲಿ ‘ಮಿಯಾವಾಕಿ’ ಮಾದರಿಯಲ್ಲಿ 10,000 ಸಸಿಗಳನ್ನು ನೆಡುವ ಉದ್ದೇಶವಿದೆ. ಪ್ರತಿ ಸಸಿಯ ಮುಂದೆ ವೈಜ್ಞಾನಿಕ ಹೆಸರು, ಜೀವಿತಾವಧಿ ಹಾಗೂ ಔಷಧೀಯ ಪ್ರಯೋಜನಗಳ ಮಾಹಿತಿ ಫಲಕ ಅಳವಡಿಸಲಾಗಿದ್ದು, ಮಕ್ಕಳಿಗೆ ಮಾರ್ಗದರ್ಶನ ನೀಡಲು ಗೈಡ್‌ಗಳ ವ್ಯವಸ್ಥೆಯೂ ಇರಲಿದೆ. ಉದ್ಯಾನದಲ್ಲಿ ಪ್ಲಾಸ್ಟಿಕ್, ಕಸ ತರುವುದನ್ನು ಸಂಪೂರ್ಣ ನಿಷೇಧಿಸಲಾಗುವುದು, ಉದ್ಯಾನವನ್ನು ಸ್ವಂತ ಮನೆಯಂತೆ ಕಾಪಾಡಬೇಕು” ಎಂದರು.
ಬೀದರ್ ಜಿಲ್ಲೆಯ ಪ್ರತಿ ತಾಲೂಕಿಗೆ ತಲಾ 2 ಕೋಟಿ ವೆಚ್ಚದಲ್ಲಿ ಪಾರ್ಕ ಕಚೇರಿ, ಭಾಲ್ಕಿ 2 ಹಾಗೂ ಬೀದರ್‌ನಲ್ಲಿ 5 ಕೋಟಿ ವೆಚ್ಚದ ಅರಣ್ಯ ಭವನ ಹಾಗೂ ಹೊನ್ನಿಕೇರಿಯಲ್ಲಿ 15 ಕೋಟಿ ವೆಚ್ಚದ ಪರಿಸರ ಪ್ರವಾಸೋದ್ಯಮ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, “ರಾಮಾಯಣ, ಮಹಾಭಾರತ ನಡೆದದ್ದು ಪ್ರಕೃತಿಯಲ್ಲಿ, ಬುದ್ಧನಿಗೆ ಜ್ಯಾನೋದಯ ಆಗಿದ್ದು ಮರದ ಕೆಳಗಡೆ. ಇದೀಗ ಇಂಚೂಎ ಗ್ರಾಮದ ಹತ್ತಿರ 13 ಎಕರೆ ಭೂಮಿಯಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಹೆಸರಲ್ಲಿ ವೃಕ್ಷೋಧ್ಯಾನ ನಿರ್ಮಾಣ ಮಾಡಿದ್ದೂ ಖುಷಿಯ ಸಂಗತಿಯಾಗಿದೆ. ಮನಸ್ಸಿನ ಆನಂದ ನೀಡುವ ನೆಮ್ಮದಿಯ ತಾಣ ಇದಾಗಿದೆ” ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಮಾತನಾಡಿ, “ನಮ್ಮದು ಅರಣ್ಯ, ಮರ, ಮಳೆ ಕಡಿಮೆ ಇರುವ ಭೂಭಾಗವಾಗಿದೆ. ಇಂತಹ ಭಾಗದಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡಿದ್ದು ಸಂತಸ ತಂದಿದೆ. ದಿನಾಲೂ ಸಾವಿರಾರು ವಿದ್ಯಾರ್ಥಿಗಳು, ಜನರು ಬಂದು ನೋಡುವ ಪ್ರೇಕ್ಷಣಿಕ ಸ್ಥಳ ಆಗಬಹುದು. ಕಾರಂಜಾ ಜಲಾಶಯ ಹತ್ತಿರ ಬೃಂದಾವನದ ಮಾದರಿಯಲ್ಲಿ ಉದ್ಯಾನವನ ನಿರ್ಮಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಕಾರ್ಯಕ್ರಮದ ಸಾನಿಧ್ಯ ವಹಿಸಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್, ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ಹಣಮಂತರಾವ್ ಚವ್ಹಾಣ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ., ಬೀದರ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುಮಿತಕುಮಾರ ಪಾಟೀಲ್, ಶ್ರೀನಿವಾಸ್ ಯಾರಡೋಣಿ, ಭಾಲ್ಕಿ ವಲಯ ಅರಣ್ಯಧಿಕಾರಿ ಸಚಿನ್ ಪಾಟೀಲ್, ವಿರೇಶ ಕಲ್ಯಾಣೆ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಯುಪಿಎಸ್‌ಸಿ ನಿಯಮಾವಳಿ, ಪ್ರಕ್ರಿಯೆಗಳನ್ನು ಕೆಪಿಎಸ್‌ಸಿಯಲ್ಲಿ ಅಳವಡಿಸಿ: ಸಿಎಂ ಡಿಕೆಶಿಗೆ ಕಾಂಗ್ರೆಸ್ ಮುಖಂಡರ ಮನವಿ




