ಸಂಘಟಿತ ವಲಯದ ಲಕ್ಷಾಂತರ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಭಾರಿ ಸಿಹಿ ಸುದ್ದಿ ನೀಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಕಡ್ಡಾಯ ಸಾಮಾಜಿಕ ಭದ್ರತೆಯ ವೇತನ ಮಿತಿಯನ್ನು ಸದ್ಯವಿರುವ ₹15,000 ರಿಂದ ₹25,000 ಕ್ಕೆ ಹೆಚ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಈ ನಿರ್ಧಾರವು ಸೆಪ್ಟೆಂಬರ್ 17ರಿಂದ ಜಾರಿಗೆ ಬರಲಿದ್ದು, ವಿಶ್ವಕರ್ಮ ಜಯಂತಿಯ ಶುಭ ಸಂದರ್ಭದಿಂದ ನೂತನ ನಿಯಮ ಅನ್ವಯವಾಗಲಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನ್ ವೈಷ್ಣವ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಇಪಿಎಫ್‌ಒ ವೆಬ್‌ಸೈಟ್ ಡೌನ್: 7 ದಿನಗಳಿಂದ ಪಿಎಫ್ ಹಣಕ್ಕೆ ಸಾರ್ವಜನಿಕರ ಪರದಾಟ
ಈವರೆಗೆ ₹15,000ಕ್ಕಿಂತ ಹೆಚ್ಚು ಮೂಲ ವೇತನ ಹೊಂದಿರುವ ಹೊಸ ಉದ್ಯೋಗಿಗಳಿಗೆ ಇಪಿಎಫ್‌ಒಗೆ ಸೇರ್ಪಡೆಯಾಗುವುದು ಕಡ್ಡಾಯವಾಗಿರಲಿಲ್ಲ. ಈಗ ಮಿತಿಯನ್ನು ₹25,000ಗೆ ಏರಿಸಿರುವುದರಿಂದ ಸುಮಾರು 51 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಿಗಳು ಕಡ್ಡಾಯವಾಗಿ ಪಿಎಫ್ ವ್ಯಾಪ್ತಿಗೆ ಬರಲಿದ್ದಾರೆ. ಕೊನೆಯ ಬಾರಿಗೆ 2014ರಲ್ಲಿ ವೇತನ ಮಿತಿಯನ್ನು ₹6,500ರಿಂದ ₹15,000ಕ್ಕೆ ಹೆಚ್ಚಿಸಲಾಗಿತ್ತು. ಕಳೆದ 12 ವರ್ಷಗಳಲ್ಲಿ ಕನಿಷ್ಠ ವೇತನ ಮತ್ತು ಜೀವನ ವೆಚ್ಚದಲ್ಲಿ ಆದ ಹೆಚ್ಚಳವನ್ನು ಪರಿಗಣಿಸಿ ಈ ಪರಿಷ್ಕರಣೆ ಮಾಡಲಾಗಿದೆ.
ಈ ನಿರ್ಧಾರದಿಂದ ಉದ್ಯೋಗಿಗಳಿಗೆ EPFO ಅಡಿಯ ಮೂರು ಪ್ರಮುಖ ಯೋಜನೆಗಳಾದ ಭವಿಷ್ಯ ನಿಧಿ (EPF), ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಮತ್ತು ಉದ್ಯೋಗಿಗಳ ಡೆಪಾಸಿಟ್ ಲಿಂಕ್ಡ್ ಇನ್ಶೂರೆನ್ಸ್ (EDLI – ಜೀವ ವಿಮೆ) ಸಂಪೂರ್ಣ ಸೌಲಭ್ಯಗಳು ಸಿಗಲಿವೆ. ಈ ಹೊಸ ವಿಸ್ತರಣೆಯಿಂದಾಗಿ ಕೇಂದ್ರ ಸರ್ಕಾರವು ವಾರ್ಷಿಕ ಸುಮಾರು ₹11,339 ಕೋಟಿ ಅನುದಾನ ಒದಗಿಸಲಿದೆ.
ಪಿಎಫ್ ಕಡಿತವು ಮೂಲ ವೇತನದ ಶೇಕಡ 12ರಷ್ಟು ಇರುತ್ತದೆ. ಈವರೆಗೆ ₹15,000 ಮಿತಿಯಲ್ಲಿದ್ದ ಉದ್ಯೋಗಿಗಳಿಗೆ ಗರಿಷ್ಠ ₹1,800 ಕಡಿತವಾಗುತ್ತಿತ್ತು. ಈಗ ಮಿತಿ ₹25,000 ಗೆ ಏರಿರುವುದರಿಂದ, ಗರಿಷ್ಠ ₹3,000 ವರೆಗೆ ಪಿಎಫ್ ಕಡಿತಗೊಳ್ಳುತ್ತದೆ. ಇದರಿಂದ ಮಾಸಿಕವಾಗಿ ಕೈಗೆ ಸಿಗುವ ಟೇಕ್-ಹೋಮ್ ಶೇಕಡಾ 8 ರಿಂದ 10 ರಷ್ಟು ಕಡಿಮೆಯಾಗಲಿದೆ.




