ಅನಾವೃಷ್ಟಿಯಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಗಡಿಜಿಲ್ಲೆ ಬೀದರ್ನ ಎಲ್ಲ ತಾಲೂಕುಗಳನ್ನು ತಕ್ಷಣ ಸಂಪೂರ್ಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ರೈತರಿಗೆ ಪ್ರತಿ ಟನ್ ಕಬ್ಬಿಗೆ ₹5 ಸಾವಿರ ಪ್ರೋತ್ಸಾಹಧನ ನೀಡಬೇಕು ಎಂದು ಜಿಲ್ಲಾ ರೈತ ಸಂಘ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಪದಾಧಿಕಾರಿಗಳು ಶುಕ್ರವಾರ ಭಾಲ್ಕಿ ನಗರದ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಗಡಿಜಿಲ್ಲೆ ಬೀದರ್ನಲ್ಲಿ ಅನಾವೃಷ್ಟಿಯಿಂದ ಮುಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಅನೇಕ ರೈತರು ಮಳೆ ಕೊರತೆಯಿಂದ ಬಿತ್ತನೆಯನ್ನೇ ಮಾಡಿಲ್ಲ. ಬಿತ್ತನೆ ಮಾಡಿದ ರೈತರ ಬೆಳೆಗಳೂ ಮಳೆಯಿಲ್ಲದೆ ಒಣಗುತ್ತಿವೆ. ಗೊಬ್ಬರ, ಬೀಜ ಖರೀದಿಸಿ, ಹೊಲ ಉಳಿಮೆ ಮಾಡಿ ಕೃಷಿ ಚಟುವಟಿಕೆ ಕೈಗೊಂಡಿರುವ ರೈತರು ಇದೀಗ ಸಾಲದ ಸುಳಿಗೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ವಾಡಿಕೆಯ ಮಳೆಗೆ ಹೋಲಿಸಿದರೆ ಸುಮಾರು ಶೇ.75ರಷ್ಟು ಮಳೆ ಕೊರತೆಯಾಗಿದೆ ಎಂದು ಸಂಘ ತಿಳಿಸಿದೆ.
ಜಿಲ್ಲೆಯ ಎಲ್ಲ ತಾಲೂಕುಗಳನ್ನು ತಕ್ಷಣ ಸಂಪೂರ್ಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬೆಳೆ ವಿಮೆ ಪಾವತಿಸಿರುವ ರೈತರಿಗೆ ಸಂಪೂರ್ಣ ಬೆಳೆ ವಿಮೆ ಪರಿಹಾರ ನೀಡಬೇಕು. ಪ್ರತಿ ಎಕರೆಗೆ ₹50 ಸಾವಿರ ಬೆಳೆ ಪರಿಹಾರ ನೀಡಬೇಕು. ಕಾರ್ಖಾನೆಗಳಿಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್ ಕಬ್ಬಿಗೆ ₹5 ಸಾವಿರ ಪ್ರೋತ್ಸಾಹಧನ ನೀಡಬೇಕು ಎಂದರು.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ)ಯನ್ನು ಪ್ರಸಕ್ತ ಹಂಗಾಮಿನಲ್ಲೇ ಲೀಸ್ಗೆ ನೀಡಿ ಪುನರಾರಂಭಿಸಬೇಕು. ಸಾಲದ ಸುಳಿಗೆ ಸಿಲುಕಿರುವ ಸಕ್ಕರೆ ಕಾರ್ಖಾನೆಗಳನ್ನು ಒಟಿಎಸ್ (ಒನ್ ಟೈಮ್ ಸೆಟ್ಲ್ಮೆಂಟ್) ಮೂಲಕ ಸದೃಢಗೊಳಿಸಬೇಕು. ಐಪಿ ಸೆಟ್ ನೀರಾವರಿಗೆ ಹಗಲಿನ ವೇಳೆಯಲ್ಲಿ 8 ಗಂಟೆ ವಿದ್ಯುತ್ ಪೂರೈಸಬೇಕು. ವಿದ್ಯುತ್ ಕಂಬ ಹಾಗೂ ತಂತಿಗಳನ್ನು ದುರಸ್ತಿ ಮಾಡಿ ಸಮರ್ಪಕ ವಿದ್ಯುತ್ ವಿತರಣೆಗೆ ಕಾರ್ಯಪಡೆ ರಚಿಸಬೇಕು ಎಂದು ಆಗ್ರಹಿಸಿದರು.
ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಬೆಳೆ ರಕ್ಷಿಸಲು ಶೇ.75ರಷ್ಟು ರಿಯಾಯಿತಿಯಲ್ಲಿ ಮುಳ್ಳುಬೇಲಿ ಹಾಗೂ ಸೋಲಾರ್ ತಂತಿ ಬೇಲಿ ನಿರ್ಮಿಸಲು ಅನುದಾನ ನೀಡಬೇಕು. ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ‘ನಮ್ಮ ಹೊಲ-ನಮ್ಮ ರಸ್ತೆ’ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ವಿಜಿ-ರಾಮಜಿ ಯೋಜನೆಯನ್ನು ರೈತರ ಹೊಲಗಳಲ್ಲಿ ಬೆಳೆ ಕಳೆ ತೆಗೆಯುವುದು, ಕಟಾವು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಬಳಸಬೇಕು. ಪ್ರತಿ ಎಕರೆಗೆ ಒಟ್ಟು 50 ಮಾನವ ದಿನಗಳ ಕೂಲಿ ನಿಗದಿಪಡಿಸಬೇಕು. 60 ವರ್ಷ ಮೇಲ್ಪಟ್ಟ ರೈತರಿಗೆ ತಿಂಗಳಿಗೆ ₹10 ಸಾವಿರ ಮಾಸಾಶನ ನೀಡುವ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಮಾತ್ರ ಬರಪೀಡಿತವೆಂದು ಘೋಷಿಸಿ, ಭಾಲ್ಕಿ, ಕಮಲನಗರ, ಔರಾದ ಹಾಗೂ ಹುಲಸೂರು ತಾಲೂಕುಗಳನ್ನು ಬರ ಘೋಷಣೆಯಿಂದ ಕೈಬಿಟ್ಟಿರುವುದು ರೈತರಿಗೆ ಮಾಡಿರುವ ಘೋರ ಅನ್ಯಾಯ. ಕೂಡಲೇ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು.
ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯರೂಪಕ್ಕೆ ತರಬೇಕು. ಭಾಲ್ಕಿ, ಕಮಲನಗರ, ಔರಾದ ಹಾಗೂ ಹುಲಸೂರು ತಾಲೂಕುಗಳನ್ನು ತಕ್ಷಣ ಬರಪೀಡಿತವೆಂದು ಘೋಷಿಸದಿದ್ದರೆ ಸೆಪ್ಟೆಂಬರ್ 1ರಿಂದ ಭಾಲ್ಕಿಯ ಗಾಂಧಿ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.
ಇದನ್ನೂ ಓದಿ : BREAKING NEWS | ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ
ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದರ್, ಜಿಲ್ಲಾ ಕಾರ್ಯಾಧ್ಯಕ್ಷ ನಾಗಶೆಟೆಪ್ಪ ಲಂಜವಾಡೆ, ಕಾಶಿನಾಥ ಭೂರೆ, ಶಿವಾನಂದ ಸೋಮಯ್ಯ ಸ್ವಾಮಿ, ವಿಠಲರಾವ ಮೇತ್ರೆ, ಬಾಬುರಾವ, ನಾಗಶೆಟ್ಟಿ ಖಂದಾರೆ, ಮಲ್ಲಿಕಾರ್ಜುನ, ಸಂತೋಷ, ಬಸಯ್ಯ ಸ್ವಾಮಿ ಡೋಣಗಾಪುರ, ಓಂಕಾರ ಮೋರೆ, ಶಿವರಾಜ ಜಲ್ದೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.




