ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ, ಸೆಪ್ಟೆಂಬರ್ 2ರಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ಹೇಳಿಕೆ ದಾಖಲಿಸುವಂತೆ ಸಮನ್ಸ್ ಜಾರಿ ಮಾಡಿದೆ.
ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್, ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ ಅಂಗೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ನ್ಯಾಯಾಲಯದ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆ ದಾಖಲಿಸಬೇಕು ಎಂದು ನ್ಯಾಯಾಧೀಶೆ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಸೂಚಿಸಿದ್ದಾರೆ. ಜೈಲಧಿಕಾರಿಗಳ ಮೂಲಕ ಪ್ರದೋಷ್ಗೆ ಸಮನ್ಸ್ ಜಾರಿ ಮಾಡುವಂತೆ ನಿರ್ದೇಶನ ನೀಡಿದ್ದಾರೆ.
ಪ್ರದೋಷ್ ಸಲ್ಲಿಸಿದ್ದ ಅರ್ಜಿಯನ್ನು ಸಿಆರ್ಪಿಸಿ ಸೆಕ್ಷನ್ 307ರ ಅಡಿಯಲ್ಲಿ ಅಂಗೀಕರಿಸಿರುವ ನ್ಯಾಯಾಲಯ, ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ತಿಳಿಸಬೇಕು ಎಂದು ಷರತ್ತು ವಿಧಿಸಿದೆ. ಅಲ್ಲದೆ, ಪ್ರಕರಣದಲ್ಲಿ ಇತರ ಆರೋಪಿಗಳ ಪಾತ್ರ ಹಾಗೂ ತನ್ನ ಬಳಿ ಇರುವ ಮಾಹಿತಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸುವಂತೆ ಸೂಚಿಸಿದೆ.
ತಾನು ನೀಡುವ ಹೇಳಿಕೆ ಸುಳ್ಳೆಂದು ಕಂಡುಬಂದರೆ ಅಥವಾ ಸಾಕ್ಷ್ಯ ನೀಡಿದ ಬಳಿಕ ಹೇಳಿಕೆಯಿಂದ ಹಿಂದೆ ಸರಿದರೆ, ಮತ್ತೆ ಆರೋಪಿಯನ್ನಾಗಿ ಪರಿಗಣಿಸುವುದರ ಜತೆಗೆ ಸುಳ್ಳು ಸಾಕ್ಷ್ಯ ನೀಡಿದ ಪ್ರಕರಣ ದಾಖಲಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಋಷಿಕೇಶ್ ಆತ್ಮಹತ್ಯೆ ಪ್ರಕರಣ: ಐಐಟಿ ದೆಹಲಿಯಲ್ಲಿ ತೀವ್ರ ಪ್ರತಿಭಟನೆ; ವಿದ್ಯಾರ್ಥಿಗಳಿಗೆ ಶಿಸ್ತು ಕ್ರಮದ ಬೆದರಿಕೆ
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಕುರಿತು ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯ ಅರ್ಜಿಯಲ್ಲಿನ ಅಂಶಗಳ ಬಗ್ಗೆ ಸ್ಪಷ್ಟನೆ ಪಡೆದಿತ್ತು. ಬಳಿಕ ಆಗಸ್ಟ್ 25ರಂದು ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಅನುಮತಿ ನೀಡಿತ್ತು. ನ್ಯಾಯಾಲಯದ ಆದೇಶದ ಪ್ರತಿಯನ್ನು ಪ್ರದೋಷ್ಗೆ ತಲುಪಿಸಿ, ಅವರ ಸಹಿ ಪಡೆಯುವಂತೆ ಜೈಲಧಿಕಾರಿಗಳಿಗೆ ಸೂಚಿಸಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಜೂನ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಪ್ರದೋಷ್ ಸೇರಿದಂತೆ ಏಳು ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬಳಿಕ, ಅವರು 2025ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಸೆಪ್ಟೆಂಬರ್ 2ರಂದು ಪ್ರದೋಷ್ ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆ ದಾಖಲಿಸಲಿದ್ದಾರೆ.




