ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶದಂತೆ ಜು.11ರಂದು ಹಮ್ಮಿಕೊಳ್ಳಲಾದ ರಾಷ್ಟೀಯ ಬೃಹತ್ ಲೋಕ ಅದಾಲತ್ನಲ್ಲಿ ಜಿಲ್ಲೆಯಾದ್ಯಂತ ಒಟ್ಟು 74,056 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹43.28 ಕೋಟಿ ಪರಿಹಾರವನ್ನು ಕಕ್ಷಿದಾರರಿಗೆ ಒದಗಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ.ರಹಮಾನ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯೆ ಹೇಳಿದರು.
ಬೀದರ್ ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ಹಂಚಿಕೊಂಡರು.
ಜಿಲ್ಲೆಯ ಎಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ 9,416 ಪ್ರಕರಣಗಳನ್ನು ಬಗೆಹರಿಸಿ ₹13.57 ಕೋಟಿ ಹಣ ಹಾಗೂ 64,640 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿ ₹29.70 ಕೋಟಿ ಹಣವನ್ನು ಕಕ್ಷಿದಾರರಿಗೆ ಪರಿಹಾರ ಒದಗಿಸಲಾಗಿದೆ. ಜೊತೆಗೆ 10 ಹಿರಿಯ ನಾಗರಿಕರ ಪ್ರಕರಣಗಳನ್ನು ಬಗೆಹರಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರ ನ್ಯಾಯಾಲಯದಲ್ಲಿ ₹92 ಲಕ್ಷದ ಒಂದು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಒಂದಾದ 8 ಜೋಡಿ : ಈ ಲೋಕ ಅದಾಲತ್ನಲ್ಲಿ 8 ವೈವಾಹಿಕ ವ್ಯಾಜ್ಯಗಳನ್ನು ಬಗೆಹರಿಸಿ ರಾಜಿ ಸಂಧಾನದ ಮೂಲಕ ಜೋಡಿಗಳನ್ನು ಒಂದು ಮಾಡಲಾಗಿದೆ. ಔರಾದ್-3, ಹುಮನಾಬಾದ-3, ಬಸವಕಲ್ಯಾಣ -3 ಹಾಗೂ ಬೀದರ-1 ಪ್ರಕರಣ ಸೇರಿವೆ ಎಂದು ಹೇಳಿದರು.
ಇದೇ ಜುಲೈ 18 ರಂದು ಎನ್.ಐ ಆಕ್ಟ್ ಪ್ರಕರಣಗಳ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಇದರ ಲಾಭ ಪಡೆಯಬೇಕು ಎಂದರು.
ಇದನ್ನೂ ಓದಿ : ಬೀದರ್ | ಎಸ್ಐಆರ್ ಪ್ರಕ್ರಿಯೆ ಶೇ 100ರಷ್ಟು ಪೂರ್ಣ : ಬಿಎಲ್ಒ, ಮೇಲ್ವಿಚಾರಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ಪ್ರಾಧಿಕಾರದ ಸಿಬ್ಬಂದಿಗಳಾದ ಜಗದೀಶ್ವರ ದೊರೆ, ಆಕಾಶ ಸಜ್ಜನ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.




