ನಾವೆಲ್ಲರೂ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರ ಆಚಾರ-ವಿಚಾರ ಹಾಗೂ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ಸಿದ್ರಾಮ ಸಿಂಧೆ ಹೇಳಿದರು.
ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಬದುಕು, ಸಾಧನೆ ಹಾಗೂ ಬರಹಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ 2026-27ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡು ಜ್ಞಾನವನ್ನು ಸಂಪಾದಿಸಬೇಕು. ಶಿಕ್ಷಣದ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವಂತಹ ದೊಡ್ಡ ವ್ಯಕ್ತಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ ಅವರು ಉಪನ್ಯಾಸ ನೀಡಿ, “ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿಯಾಗಬೇಕು. ಶಿಕ್ಷಣದಿಂದಲೇ ಸಮಾಜದಲ್ಲಿ ಮಹತ್ತರ ಬದಲಾವಣೆ ಸಾಧ್ಯ ಎಂಬುದನ್ನು ಅಂಬೇಡ್ಕರ್ ಅವರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ. ಅಂಬೇಡ್ಕರ್ ಅವರು ಶಿಕ್ಷಣ ಮತ್ತು ಓದಿಗೆ ಹೆಚ್ಚಿನ ಮಹತ್ವ ನೀಡಿದ್ದರು. ಜ್ಞಾನ ಸಂಪಾದನೆಯ ಮೂಲಕ ವ್ಯಕ್ತಿ ತನ್ನ ಬದುಕನ್ನು ಮಾತ್ರವಲ್ಲದೆ ಇಡೀ ಸಮಾಜದ ದಿಕ್ಕನ್ನೇ ಬದಲಾಯಿಸಬಹುದು” ಎಂದರು.

ಅಂಬೇಡ್ಕರ್ ಅವರು ಸ್ವತಃ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರೆ ಏನು ಹೇಳುತ್ತಿದ್ದರು ಎಂಬ ಕಲ್ಪನೆಯೊಂದಿಗೆ ಮಕ್ಕಳ ಧ್ವನಿಯ ಮೂಲಕ ಪ್ರಸ್ತುತ ಪಡಿಸುವ ವಿನೂತನ ರೀತಿಯಲ್ಲಿ ಉಪನ್ಯಾಸ ನೀಡಿದರು. ಈ ಮೂಲಕ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಜೀವನ ಹಾಗೂ ಚಿಂತನೆಗಳನ್ನು ಸರಳವಾಗಿ ಅರ್ಥೈಸುವ ಪ್ರಯತ್ನ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾನ ರೂಪದಲ್ಲಿ ಪುಸ್ತಕ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.

ಪ್ರಬಂಧ ಸ್ಪರ್ಧೆಯಲ್ಲಿ ಸ್ನೇಹ ಶಿವಕುಮಾರ್ ಪ್ರಥಮ ಸ್ಥಾನ, ಸುಶ್ಮಿತಾ ಕುಪೇಂದ್ರ ಡೀಟೇಲ್ ಸ್ಥಾನ, ಸುದರ್ಶನ್ ಶಿವಕುಮಾರ್ ತೃತೀಯ ಸ್ಥಾನ ಪಡೆದಿದ್ದಾರೆ. ಆಶು ಭಾಷಣೆ ಸ್ಪರ್ಧೆಯಲ್ಲಿ ನೈತಿಕ ಚಂದ್ರಕಾಂತ ಪ್ರಥಮ ಸ್ಥಾನ, ಸುದರ್ಶನ್ ಶಿವಕುಮಾರ್ ದ್ವಿತೀಯ ಸ್ಥಾನ, ರಿತಿಕಾ ಆನಂದ್ ತೃತೀಯ ಸ್ಥಾನ ಪಡೆದು ಕೀರ್ತಿ ಹೆಚ್ಚಿಸಿದ್ದಾರೆ. ಪ್ರಬಂಧ ಸ್ಪರ್ಧೆಯ ನಿರ್ಣಾಯಕರಾಗಿ ಸುವರ್ಣಾ, ವೈಭವಿ ಕಾರ್ಯನಿರ್ವಹಿಸಿದರು.
ಇದನ್ನೂ ಓದಿ : ಬೀದರ್ ನಗರದಲ್ಲಿ ಸಂಚಾರ ದಟ್ಟಣೆ : ಅಗತ್ಯ ಕ್ರಮಕ್ಕೆ ಮನವಿ
ಚೆನ್ನಬಸವ ಹೇಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಹೋರಾಟಗಾರರಾದ ಮಹೇಶ ಗೋರನಾಳಕರ್, ಕಾಶಿನಾಥ್ ಗುಜ್ಜಗೆರೆ ಮಾತನಾಡಿದರು. ಪ್ರಮುಖರಾದ ಸುನೀಲ್ ಭಾವಿಕಟ್ಟಿ, ಗೌತಮ ಬಗದಲಕರ್, ಗೌತಮ ಕುದರೆ, ಕು. ಕ್ಲೆಂಮೆಂಟಿನಾ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





