ಭಾರತ ಕಮ್ಯೂನಿಷ್ಟ ಪಕ್ಷ (ಸಿಪಿಐ) ಜಿಲ್ಲಾ ಮಂಡಳಿ ವತಿಯಿಂದ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಅವರ 106ನೇ ಜನ್ಮದಿನದ ಪ್ರಯುಕ್ತ ಶನಿವಾರ ಬೀದರ್ ನಗರದ ಸ್ಟಾರ್ ಲಾಡ್ಜ್ ಸಭಾಂಗಣದಲ್ಲಿ ಅಣ್ಣಾಭಾವು ಸಾಠೆ ದ್ವಿತೀಯ ಸಾಹಿತ್ಯ ಸಮ್ಮೇಳನ ಆಯೋಜಿಸಲಾಯಿತು.
ಚಿಂತಕ ಜಗದೀಶ ಬಿರಾದಾರ ಅವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, “ಅಣ್ಣಾಭಾವು ಸಾಠೆ ಅವರ ಸಾಹಿತ್ಯವು ಶೋಷಿತ ಹಾಗೂ ದುಡಿಯುವ ವರ್ಗಗಳ ಬದುಕಿನ ನೈಜ ಚಿತ್ರಣವಾಗಿದ್ದು, ಅವರ ಪ್ರಸಿದ್ಧ ʼಫಕೀರಾʼ ಕಾದಂಬರಿ ಸಾಹಿತ್ಯ ಲೋಕದಲ್ಲಷ್ಟೇ ಅಲ್ಲದೆ ಚಲನಚಿತ್ರ ರೂಪದಲ್ಲಿಯೂ ಜನಮನ ಗೆದ್ದಿದೆ” ಎಂದು ಹೇಳಿದರು.
ವಕೀಲ ಬಾಬುರಾವ ಹೊನ್ನಾ ಮಾತನಾಡಿ, “ಅಣ್ಣಾಭಾವು ಸಾಠೆ ಅವರು ಮಹಾರಾಷ್ಟ್ರದಲ್ಲಿ ಭಾರತ ಕಮ್ಯೂನಿಷ್ಟ ಪಕ್ಷದ ಮೂಲಕ ಜನಪರ ಚಳುವಳಿಗಳನ್ನು ಸಂಘಟಿಸಿ ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದ ಮಹಾನ್ ನಾಯಕ ಮತ್ತು ಜನಪರ ಸಾಹಿತಿಯಾಗಿದ್ದರು” ಎಂದರು.
“ʼಜಗತ್ತು ಕಾರ್ಮಿಕರ ಶ್ರಮದ ಮೇಲೆ ನಿಂತಿದೆʼ ಎಂಬ ಅಣ್ಣಾಭಾವು ಸಾಠೆ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿದ್ದು, ಸಾಮಾಜಿಕ ಸಮಾನತೆ ಮತ್ತು ಶ್ರಮಕ್ಕೆ ಗೌರವ ನೀಡುವ ಸಂದೇಶವನ್ನು ಸಮಾಜಕ್ಕೆ ಸಾರುತ್ತದೆ. ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಮಾರ್ಗವನ್ನು ಅನುಸರಿಸುವ ದೃಢ ಸಂಕಲ್ಪವನ್ನು ಅಣ್ಣಾಭಾವು ಸಾಠೆ ಹೊಂದಿದ್ದರು” ಎಂದು ಅಭಿಪ್ರಾಯಪಟ್ಟರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ನಜೀರ ಅಹ್ಮದ್ ಚೊಂಡಿ ಪ್ರಸ್ತಾವಿಕವಾಗಿ ಮಾತನಾಡಿ, “ಅಣ್ಣಾಭಾವು ಸಾಠೆ ಅವರ ಸಾಹಿತ್ಯ, ಹೋರಾಟ ಮತ್ತು ಸಾಮಾಜಿಕ ಚಿಂತನೆಗಳು ಇಂದಿನ ಪೀಳಿಗೆಗೆ ಪ್ರೇರಣೆಯಾಗಿವೆ” ಎಂದು ಹೇಳಿದರು.
ಇದನ್ನೂ ಓದಿ : ಬೀದರ್ ಮಹಾನಗರ ಮುಖ್ಯರಸ್ತೆಗಳ ಅಂದ ಕಸಿದ ಗುಂಡಿಗಳು!
ಸಮ್ಮೇಳನದ ಅಧ್ಯಕ್ಷತೆಯನ್ನು ಅಖಿಲ ಭಾರತ ಕಿಸಾನ್ ಸಭಾ ಮುಖಂಡ ಸೂರ್ಯಕಾಂತ ಮದಕಟ್ಟಿ ವಹಿಸಿದ್ದರು. ಸಹ ಕಾರ್ಯದರ್ಶಿ ಶಫಾಯತ್ ಅಲಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.




