ಡಾ.ಬಿ.ಆರ್.ಅಂಬೇಡ್ಕರ್ ಸಾಂಸ್ಕೃತಿಕ ಪ್ರಚಾರ ಕಾರ್ಯ ಸಮಿತಿ ಮಳಚಾಪೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಂಗೀತ ಮಹೋತ್ಸವ ಕಾರ್ಯಕ್ರಮವು ಬುಧವಾರ ಸಂಜೆ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ʼಬೀದರ್ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದಕ್ಕಾಗಿ ನಮ್ಮ ಇಲಾಖೆಯಿಂದ ವಿವಿಧ ಸಂಘ-ಸಂಸ್ಥೆಗಳಿಗೆ ಸಹಾಯಧನ ಒದಗಿಸಲಾಗುತ್ತಿದೆʼ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ ಮಾತನಾಡಿ, ʼಕಲಾವಿದರು ಸ್ವಾಭಿಮಾನಿಗಳಾಗಬೇಕು. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಗೌರವ ನೀಡಿದರೆ ಉತ್ತಮ ಬದುಕು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಬೌದ್ಧ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಎಸ್.ಎಂ.ಜನವಾಡಕರ್ ಮಾತನಾಡಿ, ʼಮಾನವ ಹುಟ್ಟಿದ್ದಾಗಲೇ ಜಾನಪದ ಜನ್ಮ ತಾಳಿದೆ. ಜಾನಪದವನ್ನು ಉಳಿಸಿ ಬೆಳೆಸುತ್ತಿರುವವರು ಗ್ರಾಮೀಣ ಭಾಗದ ಜನರು, ಅವರ ಕಲೆಗೆ ಸೂಕ್ತ ವೇದಿಕೆ ಕಲ್ಪಿಸಬೇಕಿದೆʼ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ರಮೇಶ ದೊಡ್ಡಿ ವಹಿಸಿದ್ದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಮನೋಹರ್, ಹಿರಿಯ ಸಾಹಿತಿ ರಾಮಚಂದ್ರ ಗಣಾಪೂರ, ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್, ಶಿಕ್ಷಕ ಚಿತ್ರಕಲಾ ರಾಮಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಎಸ್.ಬಿ. ಕುಚಬಾಳ್ ಹಾಗೂ ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ : ಬಸವಕಲ್ಯಾಣ | ಎಸ್ಐಆರ್ ವಿರೋಧಿಸಿ ಮೇ 30ಕ್ಕೆ ಪ್ರತಿಭಟನೆ : ಸಂದೀಪ ಮುಕಿಂದೆ
ನಾಡಗೀತೆಯನ್ನು ರಾಜಕುಮಾರ ಕರುಣಾಕರ್, ಗಜಲ್ ಗಾಯನವನ್ನು ರಮೇಶ ಕೋಳಾರ, ವಚನ ಗಾಯನವನ್ನು ಸಂಜುಕುಮಾರ ಸ್ವಾಮಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸುಮಾರು 12 ಸಾಂಸ್ಕೃತಿಕ ತಂಡಗಳಿಂದ ಕೋಲಾಟ, ಜಾನಪದ, ಸಂಪ್ರದಾಯ ಪದ, ಭಜನೆ ಪದ, ಕುಟ್ಟುವ, ಬೀಸುವ ಹಾಡು ಸಭಿಕರ ಮನ ತಣಿಸಿದವು.




