ಬೀದರ್ ಜಿಲ್ಲೆಯಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಳೆಯ ಅಭಾವದಿಂದ ಹೆಸರು ಮತ್ತು ಉದ್ದು ಬೆಳೆಗಳು ಶೇ.95ರಷ್ಟು ಹಾನಿಗೊಳಗಾಗಿದ್ದು, ಸೋಯಾಬೀನ್ ಹಾಗೂ ತೊಗರಿ ಬೆಳೆಗಳು ಸುಮಾರು ಶೇ.50ರಷ್ಟು ಹಾನಿಯಾಗಿವೆ. ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಬೀದರ್ ಜಿಲ್ಲಾ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಮಂಗಳವಾರ ಜಿಲ್ಲೆಯಲ್ಲಿ ವಿವಿಧ ಭಾಗಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸಿದ ಸಚಿವರು, ಬೀದರ್ ತಾಲೂಕಿನ ಅಷ್ಟೂರು, ಚೊಂಡಿ, ಚೌಳಿ, ಭಾಲ್ಕಿ ತಾಲೂಕಿನ ಅಹಮದಾಬಾದ್, ಕಮಲನಗರ ತಾಲೂಕಿನ ಸಂಗಮ, ಹೋಳಸಮುದ್ರ ಹಾಗೂ ಡಿಗ್ಗಿ ಗ್ರಾಮಗಳ ರೈತರ ಜಮೀನುಗಳಿಗೆ ತೆರಳಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿದರು.
ರೈತರ ಸಮಸ್ಯೆಗಳನ್ನು ಆಲಿಸಿದ ಸಚಿವರು, “ಯಾವುದೇ ರೈತರು ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ರೈತರ ಪರವಾಗಿ ನಿಂತಿದ್ದು, ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಸಮರ್ಥವಾಗಿ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ” ಎಂದು ಭರವಸೆ ನೀಡಿದರು.
ಬೆಳೆ ಹಾನಿಯ ಕುರಿತು ಸ್ಥಳದಲ್ಲೇ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ನಡೆಸಬೇಕು ಹಾಗೂ ಅಗತ್ಯವಿರುವ ಕಡೆ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬರ ಪರಿಹಾರಕ್ಕೆ ಸಂಬಂಧಿಸಿದ ಕ್ರಮಗಳ ಕುರಿತು ಕೃಷಿ ಅಧಿಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ನಿರ್ದೇಶನ ನೀಡಿದರು.

ಚೊಂಡಿ ಗ್ರಾಮದ ರೈತ ಸಿದ್ದಪ್ಪ ಅವರು ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೆಸರು ಬೆಳೆ ಮಳೆಯ ಕೊರತೆಯಿಂದ ಕುಂಠಿತಗೊಂಡಿರುವುದನ್ನು ಸಚಿವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದ ವತಿಯಿಂದ ಕೊಳವೆ ಬಾವಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು. ಬಳಿಕ ಸುಭಾಷ್ ಹಾಗೂ ಗುರುಪಾದಯ್ಯ ಅವರ ಜಮೀನುಗಳಿಗೆ ಭೇಟಿ ನೀಡಿ ಮಳೆ ಕೊರತೆಯಿಂದ ಬಾಡಿರುವ ಹೆಸರು, ಉದ್ದು ಬೆಳೆ ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ ಖಂಡ್ರೆ ಅವರು, “ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಹೆಸರು, ಉದ್ದು ಬೆಳೆಗಳು ಶೇ.95ರಷ್ಟು ಹಾನಿಯಾಗಿದ್ದು, ಸೋಯಾಬೀನ್ ಹಾಗೂ ತೊಗರಿ ಬೆಳೆಗಳೂ ಗಣನೀಯ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಕಳೆದ ವರ್ಷ ರೈತರಿಗೆ ₹246 ಕೋಟಿ ಬೆಳೆ ಹಾನಿ ಪರಿಹಾರ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಿದ್ದು, ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಅಡಿ ₹270 ಕೋಟಿ ಪರಿಹಾರ ನೀಡಲಾಗಿದೆ. ಈ ವರ್ಷವೂ ಬೆಳೆ ಹಾನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಬರ ಘೋಷಣೆಗೆ ಸರ್ಕಾರದ ನಿಗದಿತ ಮಾನದಂಡಗಳಿದ್ದು, ಈ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಸಲಾಗುವುದು” ಎಂದು ಹೇಳಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಪರಿಹರಿಸಲಾಗುವುದು. ಕಳೆದ ವರ್ಷ ₹4 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಈ ವರ್ಷ ₹6 ಕೋಟಿ ಅನುದಾನ ನೀಡಲಾಗುವುದು. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಅಗತ್ಯ ಅನುದಾನ ಲಭ್ಯವಿದೆ ಎಂದ ಸಚಿವರು, “ಬೀದರ್ ಜಿಲ್ಲೆಯಲ್ಲಿ ವಿಬಿ.-ಜಿ ರಾಮ್ ಜಿ ಯೋಜನೆಯಡಿ ಸುಮಾರು 30,000 ಜನರಿಗೆ ಉದ್ಯೋಗ ಒದಗಿಸಲಾಗುತ್ತಿದೆ. ಗ್ರಾಮದಲ್ಲಿಯೇ ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಮೂಲಕ ಯಾರೂ ಅನ್ಯ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗದಂತೆ ಕ್ರಮ ಕೈಗೊಳ್ಳಲಾಗುವುದು” ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ ₹48 ಕೋಟಿ ಮೊತ್ತದ ಕಾಮಗಾರಿಗಳು ನಡೆದಿದ್ದು, ಶೀಘ್ರದಲ್ಲೇ ಹೆಚ್ಚುವರಿ ಅನುದಾನ ಬಿಡುಗಡೆಯಾಗಲಿದೆ. ಅಷ್ಟೂರು ಗ್ರಾಮದಲ್ಲಿ ಸಚಿವರು ವಿಬಿ.-ಜಿ ರಾಮ್ ಜಿ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಫಲಾನುಭವಿಗಳಿಗೆ ಜಾಬ್ ಕಾರ್ಡ್‌ಗಳನ್ನು ವಿತರಿಸಿದರು.
ಇದನ್ನೂ ಓದಿ : ಕಮಲನಗರ ತಾಲ್ಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಿ: ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಈ ಸಂದರ್ಭದಲ್ಲಿ ಶಾಸಕ ರಹೀಂ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.




