ಬೀದರ್ ಹೊರವಲಯದ ಕೊಳಾರ(ಕೆ) ಪ್ರದೇಶದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಅಭಿವೃದ್ಧಿಗಾಗಿ ಮೀಸಲಾಗಿರುವ 49.23 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ಇತರ ಉದ್ದೇಶಕ್ಕೆ ಬಳಸಬಾರದು. ಪ್ರಸ್ತಾವಿತ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕಾಗಿ ಪರ್ಯಾಯ ಸರ್ಕಾರಿ ಭೂಮಿಯನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, “ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಮೀಸಲಾದ ಭೂಮಿಯ ಪೈಕಿ ಸುಮಾರು 25 ಎಕರೆ ಪ್ರದೇಶವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಬಳಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಲ್ಲೆಗೆ ಕ್ರೀಡಾ ಮೂಲಸೌಕರ್ಯ ಅಗತ್ಯವಿದ್ದರೂ, ಶಿಕ್ಷಣ ಸಂಸ್ಥೆಗೆ ಮೀಸಲಾದ ಭೂಮಿಯನ್ನು ಕಡಿತಗೊಳಿಸುವುದು ಸೂಕ್ತ ಕ್ರಮವಲ್ಲ” ಎಂದು ಹೇಳಿದ್ದಾರೆ.
“ತೋಟಗಾರಿಕೆ ಮಹಾವಿದ್ಯಾಲಯದ ಸಮರ್ಪಕ ಕಾರ್ಯನಿರ್ವಹಣೆಗೆ ಐಸಿಎಆರ್ (ICAR) ಹಾಗೂ ವಿಶ್ವವಿದ್ಯಾಲಯದ ಮಾರ್ಗಸೂಚಿಗಳ ಪ್ರಕಾರ ಅಗತ್ಯ ಪ್ರಮಾಣದ ಭೂಮಿ ಕಡ್ಡಾಯವಾಗಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ತರಬೇತಿ, ಸಂಶೋಧನೆ, ಪ್ರದರ್ಶನ ತೋಟಗಳು, ಕ್ಷೇತ್ರ ಅಧ್ಯಯನ ಹಾಗೂ ಪ್ರಯೋಗಾಲಯಗಳಿಗಾಗಿ ಈ ಭೂಮಿ ಅವಶ್ಯಕವಾಗಿದ್ದು, ಈಗಾಗಲೇ ಮಂಜೂರಾದ ಭೂಮಿಯಲ್ಲಿ ಕಡಿತ ಮಾಡಿದರೆ ಮಹಾವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳಿಗೆ ಧಕ್ಕೆಯಾಗುವುದಲ್ಲದೆ, ಐಸಿಎಆರ್ ಮಾನ್ಯತೆಗೂ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
“ಕೆಲವು ವರ್ಷಗಳ ಹಿಂದೆ ಇದೇ ಭೂಮಿಯನ್ನು ಜಿಲ್ಲಾ ಆಡಳಿತ ಸಂಕೀರ್ಣ ನಿರ್ಮಾಣಕ್ಕಾಗಿ ಬಳಸುವ ಪ್ರಸ್ತಾವನೆ ಬಂದಾಗ ತಾವು ವಿಧಾನಮಂಡಲದಲ್ಲಿ ವಿರೋಧ ವ್ಯಕ್ತಪಡಿಸಿದ್ದೆ. ಬಳಿಕ ಸರ್ಕಾರವು ಈ ಭೂಮಿಯನ್ನು ರೇಷ್ಮೆ ಇಲಾಖೆಯಿಂದ ತೋಟಗಾರಿಕೆ ಮಹಾವಿದ್ಯಾಲಯಕ್ಕೇ ವರ್ಗಾಯಿಸುವ ಭರವಸೆ ನೀಡಿ, ಸಚಿವ ಸಂಪುಟದ ಅನುಮೋದನೆಯೊಂದಿಗೆ 49.23 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಇಂತಹ ಸಂದರ್ಭದಲ್ಲಿ ಮತ್ತೆ ಅದೇ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಪ್ರಯತ್ನ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ” ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷ ಬೀದರ್ ಜಿಲ್ಲೆಗೆ ಸರ್ಕಾರಿ ಕೃಷಿ ಮಹಾವಿದ್ಯಾಲಯ ಸ್ಥಾಪನೆಯಾಗುವ ಸುವರ್ಣಾವಕಾಶ ಕೈತಪ್ಪಿದೆ, ಅಗತ್ಯ ಎಲ್ಲ ಮೂಲಸೌಕರ್ಯಗಳಿದ್ದರೂ ಕೈತಪ್ಪಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ಮಹಾವಿದ್ಯಾಲಯದ ಭೂಮಿಯನ್ನು ಕಡಿತಗೊಳಿಸುವುದು ಜಿಲ್ಲೆಯ ಶೈಕ್ಷಣಿಕ ಹಾಗೂ ಕೃಷಿ ಸಂಶೋಧನಾ ಕ್ಷೇತ್ರಕ್ಕೆ ಹಿನ್ನಡೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಮೀಸಲಾದ ಭೂಮಿಯನ್ನು ಯಾವುದೇ ಕಾರಣಕ್ಕೂ ವರ್ಗಾಯಿಸದಂತೆ ಜಿಲ್ಲಾಡಳಿತಕ್ಕೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಬೇಕು. ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕಾಗಿ ಬೀದರ್ ನಗರ ಸಮೀಪದಲ್ಲೇ ಪರ್ಯಾಯ ಸರ್ಕಾರಿ ಭೂಮಿಯನ್ನು ಗುರುತಿಸಬೇಕು. ಅಲ್ಲದೆ, ಅತಿವಾಳ, ಅಷ್ಟೂರ್, ಸೋಲಪುರ್ ಕೆರೆ, ಮಲ್ಕಾಪುರ, ಮಿರ್ಜಾಪುರ(ಟಿ) ಸೇರಿದಂತೆ ವಿವಿಧ ಪ್ರದೇಶಗಳ ಸರ್ಕಾರಿ ಭೂಮಿಯ ಸಮಗ್ರ ಸಮೀಕ್ಷೆ ನಡೆಸಿ, ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಸಾರ್ವಜನಿಕ ಅಭಿವೃದ್ಧಿ ಯೋಜನೆಗಳಿಗೆ ಬಳಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಎಸ್‌ಐಆರ್ ಕರಡು ಪಟ್ಟಿಯಿಂದ 1.66 ಲಕ್ಷ ಮತದಾರರು ಡಿಲೀಟ್: ನಿಮ್ಮ ಹೆಸರು ಮತ ಪಟ್ಟಿಯಲ್ಲಿ ಭದ್ರವಾಗಿದೆಯೇ?
ತೋಟಗಾರಿಕೆ ಮಹಾವಿದ್ಯಾಲಯದ ದೀರ್ಘಕಾಲೀನ ಶೈಕ್ಷಣಿಕ ಹಾಗೂ ಸಂಶೋಧನಾ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ, ಬೀದರ್ ಜಿಲ್ಲೆಗೆ ಅಗತ್ಯವಿರುವ ಕ್ರೀಡಾ ಮೂಲಸೌಕರ್ಯಕ್ಕಾಗಿ ಸೂಕ್ತ ಪರ್ಯಾಯ ಸರ್ಕಾರಿ ಜಾಗವನ್ನು ಗುರುತಿಸಲು ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅರವಿಂದ ಕುಮಾರ ಅರಳಿ ಆಗ್ರಹಿಸಿದ್ದಾರೆ.




