ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಭದ್ರವಾಗಿದೆಯೇ? ಬೀದರ್ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಲಕ್ಷಾಂತರ ಹೆಸರುಗಳಿಗೆ ಕತ್ತರಿ ಬೀಳುವ ಹಂತಕ್ಕೆ ತಲುಪಿದೆ. ನೈಜ ಮತದಾರರು ತಮ್ಮ ಹಕ್ಕು ಉಳಿಸಿಕೊಳ್ಳಲು ತಕ್ಷಣ ಎಚ್ಚೆತ್ತುಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಬೀದರ್ ಜಿಲ್ಲೆಯಲ್ಲಿ ಸುಮಾರು 1.66 ಲಕ್ಷ ಮತದಾರರನ್ನು ಮೊದಲ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 14,61,959 ಮತದಾರರಿದ್ದಾರೆ. ಎಲ್ಲರಿಗೂ ಎಸ್ಐಆರ್ ಪ್ರಕ್ರಿಯೆಯ ಎನ್ಯೂಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದೆ. ಮತದಾರರ ಪಟ್ಟಿಯಿಂದ ಹೊರಗುಳಿಯಲು ಮುಖ್ಯ ಕಾರಣಗಳಲ್ಲಿ ಎಎಸ್ಡಿಡಿಒ (ಅಬ್ಸೆಂಟ್, ಶಿಫ್ಟೆಡ್, ಡೆಡ್, ಡ್ಯೂಪ್ಲಿಕೇಟ್, ಅದರ್ಸ್) ವರ್ಗೀಕರಣ ಪ್ರಧಾನವಾಗಿದೆ. ಈ ವರ್ಗದಲ್ಲಿ ಒಟ್ಟು 1,66,032 ಅಂದರೆ ಶೇ 11.36ರಷ್ಟು ಜನರ ಹೆಸರುಗಳನ್ನು ಪಟ್ಟಿ ಮಾಡಲಾಗಿದ್ದು, ಇವುಗಳು ಕರಡು ಪಟ್ಟಿಯಿಂದ ಅಳಿಸಿಹೋಗುವ ಆತಂಕವಿದೆ.
ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ತೆರಳಿ ಸ್ಥಳ ಮಹಜರು ಮಾಡಿದ್ದಾರೆ. ಜುಲೈ 30ರವರೆಗೆ ಗುರುತಿಸಿರುವ 1,66,032 ಮತದಾರರಲ್ಲಿ ಅತಿ ಹೆಚ್ಚು ಅಂದರೆ 1,12,404 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು. ಇನ್ನು 29,892 ಮೃತಪಟ್ಟ ಮತದಾರರನ್ನು ಗುರುತಿಸಲಾಗಿದೆ. 7,494 ಜನರು ಯಾವುದೇ ಸುಳಿವು ಸಿಗದೆ ಗೈರುಹಾಜರಾಗಿರುವುದು ಕಂಡುಬಂದಿದೆ.
ನಕಲಿ ಅಥವಾ ಎರಡೆರಡು ಕಡೆ ಮತ ಹಕ್ಕು ಹೊಂದಿರುವ 14,590 ಮತದಾರರು ಹಾಗೂ ಇತರೆ ಕಾರಣಗಳಿಂದ (ಹೆಸರು ಹಾಕಲು ನಿರಾಕರಿಸಿ ಅರ್ಜಿ ನೀಡಿದವರು ಸೇರಿ) 1,652 ಜನರನ್ನು ಕರಡು ಪಟ್ಟಿಯಿಂದ ಹೊರಗಿಡಲು ಪಟ್ಟಿ ಮಾಡಲಾಗಿದೆ. ನಿಧನ ಹೊಂದಿದ ಮತದಾರರು ಮತಪಟ್ಟಿಯಿಂದ ಶಾಶ್ವತವಾಗಿ ಕೈಬಿಡುವುದು ಖಚಿತ. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಕರಡು ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ, ಆದರೆ, ಅವರು ಬೇರೆಡೆ ಇರುವ ಕಾರಣಕ್ಕೆ ಬಹುತೇಕರು ಮತ್ತೆ ಅರ್ಜಿ ತುಂಬುವ ಸಾಧ್ಯತೆ ಕಡಿಮೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 14,61,959 ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 11,83,910 ನಮೂನೆಗಳನ್ನು ಸ್ವೀಕರಿಸಲಾಗಿದೆ. 1,66,032 ಅರ್ಜಿಗಳನ್ನು ಇನ್ನೂ ಸಂಗ್ರಹಿಸಬೇಕಾಗಿದೆ. ಇಲ್ಲಿಯವರೆಗೆ ಒಟ್ಟು 11,83,910 (ಶೇ 80.98) ಅರ್ಜಿಗಳನ್ನು ಡಿಜಿಟೈಸೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೂ 1,12,017 ಅರ್ಜಿ ಡಿಜಿಟೈಸೇಷನ್ ಆಗಬೇಕಿದೆ ಎಂದು ಜುಲೈ 30ರಂದು ಚುನಾವಣಾಧಿಕಾರಿಗಳ ಕಚೇರಿ ಮೂಲದಿಂದ ತಿಳಿದು ಬಂದಿದೆ.
ಆರು ಕ್ಷೇತ್ರಗಳಲ್ಲಿ ಬೀದರ್ ಕ್ಷೇತ್ರದಲ್ಲಿಯೇ ಹೆಚ್ಚು ಜನರು ಕರಡು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಅದರ ನಂತರ ಭಾಲ್ಕಿ ಹಾಗೂ ಬೀದರ್ ದಕ್ಷಿಣ ಕ್ಷೇತ್ರಗಳು ಬರುತ್ತವೆ. ಔರಾದ್ (ಬಾ) ಕ್ಷೇತ್ರದಲ್ಲಿ ಅತಿ ಕಡಿಮೆ ಸಂಖ್ಯೆಯನ್ನು ಗುರುತಿಸಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 23,998 (ಶೇ 1.64ರಷ್ಟು) ಮತದಾರರು ನೋ ಮ್ಯಾಪಿಂಗ್ ವರ್ಗದಲ್ಲಿ ಸೇರಿಸಲಾಗಿದೆ.
ಕ್ಷೇತ್ರವಾರು ವಿವರ:
- ಬೀದರ್: 6,549 ಮೃತರು, 33,217 ಶಾಶ್ವತ ಸ್ಥಳಾಂತರ
- ಬೀದರ್ ದಕ್ಷಿಣ: 5,336 ಮೃತರು, 17,789 ಶಾಶ್ವತ ಸ್ಥಳಾಂತರ
- ಬಸವಕಲ್ಯಾಣ: 3,858 ಮೃತರು, 14,403 ಶಾಶ್ವತ ಸ್ಥಳಾಂತರ
- ಹುಮನಾಬಾದ್: 5,708 ಮೃತರು, 14,254 ಶಾಶ್ವತ ಸ್ಥಳಾಂತರ
- ಭಾಲ್ಕಿ: 4,825 ಮೃತರು, 18,290 ಶಾಶ್ವತ ಸ್ಥಳಾಂತರ
- ಔರಾದ್: 3,616 ಮೃತರು, 14,451 ಶಾಶ್ವತ ಸ್ಥಳಾಂತರ
ಇವು ಜುಲೈ 30ರ ಅಂಕಿ-ಅಂಶಗಳಾಗಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.
ಎನ್ಯೂಮರೇಷನ್ ಫಾರ್ಮ್ಗಳನ್ನು ವಾಪಸ್ ನೀಡದೇ ಇರುವವರು ಆಗಸ್ಟ್ 8ರ ಒಳಗಾಗಿ ಬಿಎಲ್ಒ ಸಹಾಯ ಪಡೆದು ಅರ್ಜಿ ಸಲ್ಲಿಸಬೇಕು. 2002ರ ಮತದಾರರ ಪಟ್ಟಿಯಲ್ಲಿ ಹೆಸರು ಅಥವಾ ಪೋಷಕರ ಹೆಸರು ಇಲ್ಲದಿದ್ದರೂ ಅರ್ಜಿಯಲ್ಲಿ ಸಹಿ ಹಾಕಿ ಬಿಎಲ್ಒಗೆ ನೀಡಬಹುದು. ಯಾವುದೇ ಮಾಹಿತಿ ಲಭ್ಯವಿಲ್ಲದಿದ್ದರೂ ಬಿಎಲ್ಒಗಳ ನೆರವಿನಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆಗಸ್ಟ್ 17ರಂದು ಮತದಾರರ ಕರಡು ಪಟ್ಟಿ ಪ್ರಕಟಗೊಳ್ಳಲಿದೆ. ಹೊಸದಾಗಿ ನೋಂದಾಯಿಸಲು ಅರ್ಜಿ ನಮೂನೆ 6ನ್ನು ಸಲ್ಲಿಸಬೇಕು. 2002ರ ಪಟ್ಟಿಯಲ್ಲಿ ಹೆಸರು ಅಥವಾ ಪೋಷಕರ ಹೆಸರು ಇಲ್ಲದೇ ಅರ್ಜಿ ನೀಡಿದವರಿಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಿದ ಬಳಿಕ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಶೇ 100ರಷ್ಟು ಎನ್ಯೂಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದೆ. ಅರ್ಜಿ ನಮೂನೆ ವಾಪಸ್ ನೀಡಲು ಈ ಹಿಂದೆ ಜುಲೈ 30 ಕೊನೆಯ ದಿನವಾಗಿತ್ತು. ಆದರೆ, ಅದನ್ನು ಆಗಸ್ಟ್ 8ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಇನ್ನೂ ಒಂದು ವಾರದವರೆಗೆ ಎಷ್ಟು ಜನರು ಬಿಎಲ್ಒಗಳಿಗೆ ಅರ್ಜಿ ನಮೂನೆ ವಾಪಸ್ ಸಲ್ಲಿಸುತ್ತಾರೆ, ಎಷ್ಟು ಜನರು ಸಲ್ಲಿಸುವುದಿಲ್ಲ ಎಂಬುದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ, ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವವರ ಸಂಖ್ಯೆ ಇನ್ನೂ ಹೆಚ್ಚಾಗುವ ಮುನ್ಸೂಚನೆ ಇದೆ.
ಈ ಬಗ್ಗೆ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದಪ್ಪ ಫುಲಾರಿ ʼಈದಿನʼ ಜೊತೆ ಮಾತನಾಡಿ, “ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಚುನಾವಣಾ ಆಯೋಗದ ಸಂವಿಧಾನಬದ್ಧ ಕರ್ತವ್ಯ. ಆದರೆ, ಅದೇ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳು ತಪ್ಪಾಗಿ ಅಳಿದುಹೋದರೆ ಅದು ಕೇವಲ ಆಡಳಿತಾತ್ಮಕ ದೋಷವಲ್ಲ; ಪ್ರಜಾಪ್ರಭುತ್ವದ ಮೇಲಿನ ಜನರ ವಿಶ್ವಾಸವನ್ನೇ ಕುಂದಿಸುವ ಬೆಳವಣಿಗೆಯಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಚುನಾವಣಾ ಆಯೋಗವು ಎಎಸ್ಡಿಡಿಒ ವರ್ಗೀಕರಣದ ಸಂಪೂರ್ಣ ವಿವರಗಳನ್ನು ತಿಳಿಸಬೇಕು. ನೋಟಿಸ್ ಪಡೆದವರಿಗೆ ಸಾಕಷ್ಟು ಸಮಯ ಮತ್ತು ಸುಲಭವಾಗಿ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಯಾವುದೇ ಅರ್ಹ ಮತದಾರನ ಹೆಸರು ತಪ್ಪಾಗಿ ಅಳಿಸಿಹೋಗದಂತೆ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
“ಎಸ್ಐಆರ್ ಪ್ರಕ್ರಿಯೆಯಲ್ಲಿ ಮರಣ ಹೊಂದಿದವರ ಹೆಸರು ಅಳಿಸುವುದು, ಎರಡ್ಮೂರು ಕಡೆ ಕರಡು ಪಟ್ಟಿಯಲ್ಲಿರುವ ಮತದಾರರ ಹೆಸರು ಒಂದೇ ಕಡೆ ಇರುವಂತೆ ಕಡ್ಡಾಯ ಮಾಡಿರುವುದು ಒಳ್ಳೆಯದು. ಆದರೆ, ಹಲವು ಕಾರಣಕ್ಕೆ 2002ರ ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋದ ಕಾರಣಕ್ಕೆ ನಮೂನೆ ಸಲ್ಲಿಸಿದವರಿಗೆ ಮಾಹಿತಿ ಕೊರತೆ ಅಥವಾ ನಿರ್ದಿಷ್ಟ ದಾಖಲೆಗಳ ಕೊರತೆ ಆಧರಿಸಿ ಅತ್ಯಂತ ಬಡತನದಲ್ಲಿರುವ ನೈಜ ಮತದಾರರನ್ನು ದಂಡಿಸುವಂತೆ ಆಗಬಾರದು” ಎಂದು ನಾಗರಿಕ ಕಾವಲು ಸಮಿತಿಯ ಕಾರ್ಯದರ್ಶಿ ಜಗದೀಶ್ವರ ಬಿರಾದರ್ ಒತ್ತಾಯಿಸಿದರು.
“ಅರ್ಹ ಮತದಾರರನ್ನು ಆಡಳಿತದ ಚಾಲಾಕಿಯಲ್ಲಿ ಸಿಲುಕಿಸಿ ಅವಮಾನಿಸಿ ಮುಂದಿನ ದಿನಗಳಲ್ಲಿ ಅರ್ಜಿ ನಮೂನೆ ಹಿಡಿದು ಕಚೇರಿಗಳಿಗೆ ಅಲೆಯುವಂತೆ ಮಾಡಬಾರದು. ವಲಸಿಗರು, ಕೂಲಿಕಾರರು, ಅಲೆಮಾರಿಗಳ ಸಮುದಾಯಗಳ ಹಿನ್ನೆಲೆಯನ್ನು ಚುನಾವಣೆ ಆಯೋಗ ಅರ್ಥ ಮಾಡಿಕೊಳ್ಳುವ ವ್ಯವಧಾನ ತೋರುವ ಮುಖಾಂತರ ಎಲ್ಲರನ್ನೂ ಒಳಗೊಳ್ಳುವಂತೆ ಮಾಡಬೇಕಿದೆ” ಎಂದು ʼಈದಿನʼದೊಂದಿಗೆ ಮಾತನಾಡಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಬೀದರ್ | ಸಿವಿಲ್ ಪೊಲೀಸ್ ಕಾನಸ್ಟೇಬಲ್ ಲಿಖಿತ ಪರೀಕ್ಷೆ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
ಎಸ್ಐಆರ್ ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟುಹೋಗುವುದನ್ನು ತಡೆಯಲು ಚುನಾವಣಾ ಆಯೋಗವು ಅರ್ಜಿ ಸಲ್ಲಿಕೆಯ ಗಡುವನ್ನು ಆಗಸ್ಟ್ 8ರವರೆಗೆ ವಿಸ್ತರಿಸಿದೆ. ಮತದಾರರು ತಕ್ಷಣ ತಮ್ಮ ವ್ಯಾಪ್ತಿಯ ಬಿಎಲ್ಒಗಳನ್ನು ಸಂಪರ್ಕಿಸಿ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಮತದಾನದ ಹಕ್ಕನ್ನು ಕಾಯ್ದುಕೊಳ್ಳಬೇಕಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



