ಬೀದರ್ ನಗರದ ಹಳೆ ಆದರ್ಶ ಕಾಲೋನಿ ನ್ಯಾಶನಲ್ ಕಾಲೇಜು ಹತ್ತಿರ ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾರ್ಯಕ್ಕಾಗಿ ಸಂಸದ ಸಾಗರ ಈಶ್ವರ ಖಂಡ್ರೆ ಅವರು ಜಿಲ್ಲಾಧಿಕಾರಿ, ರೈಲ್ವೆ ಇಲಾಖೆ ಅಧಿಕಾರಿ, ಏರ್ಪೋರ್ಸ್ ಅಧಿಕಾರಿ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿಯಾಗಿ ಗುರುವಾರ ಸ್ಥಳ ಪರಿಶೀಲನೆ ಮಾಡಿದರು.
ಸಂಸದ ಸಾಗರ್ ಖಂಡ್ರೆ ಮಾತನಾಡಿ, ʼಅಧಿಕಾರಿಗಳೊಂದಿಗೆ ರೈಲ್ವೆ ಕೆಳ ಸೇತುವೆ ನಿರ್ಮಾಣದ ಸಾಧಕ-ಬಾದಕಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಹಳೆ ಆದರ್ಶ ಕಾಲೋನಿ ಬಳಿ ರೈಲ್ವೆ ಕೆಳ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಜನರ ಬಹುದಿನಗಳ ಬೇಡಿಕೆಯಾಗಿತ್ತು. ಆದರೆ ಕೆಲವು ಸಮಸ್ಯೆಗಳ ಕಾರಣದಿಂದಾಗಿ ತೊಡಕಾಗಿತ್ತು, ನಿರಂತರ ಮೇಲ್ವಿಚಾರಣೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಿ ವಾಯುಪಡೆ, ರೈಲ್ವೆ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿದ್ದೇನೆʼ ಎಂದರು.
ʼಸೇತುವೆ ನಿರ್ಮಾಣಕ್ಕೆ ವಾಯುಪಡೆಯ 0.33, ಖಾಸಗಿಯ 0.33 ಎಕರೆ ಜಾಗ ಬೇಕಾಗುವ ನಿರೀಕ್ಷೆಯಿದ್ದು, ವಾಯು ಪಡೆಯ ಅಧಿಕಾರಿಗಳು ಈಗಾಗಲೇ ತಾವು ನಮಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ರಕ್ಷಣಾ ಸಚಿವಾಲಯದಿಂದ ಅನುಮೋದನೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಸ್ಮಾರಕಗಳು ಇರುವುದರಿಂದ ಪುರಾತತ್ವ ಇಲಾಖೆಯವರು ಸಹ ಸಹಕಾರ ನೀಡಿ ಅನುಮತಿ ಕೊಡಿಸುವುದಾಗಿ ತಿಳಿಸಿದ್ದಾರೆʼ ಎಂದರು.

ಈಗಾಗಲೇ ಪ್ರಾಥಮಿಕ ವರದಿ ಸಿದ್ದವಾಗಿದೆ. ಅಧಿಕಾರಿಗಳು ರೂಟ್ ಅಲೈನ್‌ಮೆಂಟ್ ಫಿಕ್ಸ್ ಮಾಡುತ್ತಿದ್ದಾರೆ. ಒಂದು ತಿಂಗಳಲ್ಲಿ ವಿಸ್ತೃತ ವರದಿ ತಯ್ಯಾರಿಸಿ ಸಂಬಂಧಿಸಿದ ಇಲಾಖೆಗಳಿಂದ ಎನ್‌ಓಸಿ ಪಡೆದು 8 ರಿಂದ 9 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಪ್ರಾರಂಭಿಸಲಾಗುವುದು. ಈ ರೈಲ್ವೆ ಕೆಳ ಸೇತುವೆ ನಿರ್ಮಾಣದಿಂದ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಿ ಜನರಿಗೆ ಅನುಕೂಲವಾಗಲಿದೆʼ ಎಂದರು.
ಇದನ್ನೂ ಓದಿ : ಬೀದರ್ | KKRTC ಬಸ್‌ಗಳಲ್ಲಿ UPI ಕ್ರಾಂತಿ: ಚಿಲ್ಲರೆ ಸಮಸ್ಯೆಗೆ ಸಿಕ್ತು ಮುಕ್ತಿ!
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ರೈಲ್ವೆ ಇಲಾಖೆ, ವಾಯುಪಡೆ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.




